ರಾಯಚೂರು:ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಶೇ.100ರಷ್ಟು ಫಲಿತಾಂಶ ದಾಖಲಿಸುವುದರ ಜೊತೆಗೆ, ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಹೆಚ್ಚಿಸಿ ಅವರಲ್ಲಿ ಸಕಾರಾತ್ಮಕ ಬದಲಾವಣೆ ತರುವುದೇ ‘ಮಿಷನ್-60+’ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ನಗರದ ಕೃಷಿ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ 2026-27ನೇ ಸಾಲಿನ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಯ ಕಲಬುರಗಿ ವಿಭಾಗ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ ವರ್ಷ ಡಿಸೆಂಬರ್ ಅಂತ್ಯದಲ್ಲಿ ‘ಮಿಷನ್-40+’ ಆರಂಭಿಸಲಾಗಿತ್ತು. ಈ ಬಾರಿ ಮತ್ತಷ್ಟು ಉತ್ತಮ ಅಂಕಗಳ ಗುರಿಯೊಂದಿಗೆ ಮುಂಚಿತವಾಗಿಯೇ ‘ಮಿಷನ್-60+’ ಜಾರಿಗೆ ತರಲಾಗಿದೆ. ಧಾರವಾಡ ಐಐಟಿಯಲ್ಲಿ ರಾಜ್ಯಮಟ್ಟದ ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ರಾಯಚೂರು ಶಿಕ್ಷಕರು ಫಲಿತಾಂಶ ಸುಧಾರಣೆಯ ಸಂಕಲ್ಪ ತೊಟ್ಟಿರುವುದು ಶ್ಲಾಘನೀಯ ಎಂದರು.
ಶಿಕ್ಷಕರ ರಕ್ಷಣೆಗೆ ಸರ್ಕಾರ ಬದ್ಧ:
ಹಣದಿಂದ ಎಲ್ಲವನ್ನೂ ಖರೀದಿಸಬಹುದು, ಆದರೆ ಶಿಕ್ಷಣವನ್ನಲ್ಲ. ಶಿಕ್ಷಕರ ಪ್ರಾಮಾಣಿಕ ಬೋಧನೆಯಿಂದ ಮಾತ್ರ ಮಕ್ಕಳ ಭವಿಷ್ಯ ಉಜ್ವಲವಾಗಲು ಸಾಧ್ಯ. ಶಿಕ್ಷಕರ ಮೇಲಿರುವ ಬೋಧನೆಯೇತರ ಕೆಲಸಗಳ ಹೊರೆಯನ್ನು ಇಳಿಸಿ, ಅವರು ಪೂರ್ಣಪ್ರಮಾಣದಲ್ಲಿ ಪಾಠದತ್ತ ಗಮನಹರಿಸುವಂತೆ ಮಾಡಲಾಗುವುದು. ನಿಮ್ಮ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲು ನಾನು ಸದಾ ನಿಮ್ಮೊಂದಿಗಿದ್ದೇನೆ ಎಂದು ಭರವಸೆ ನೀಡಿದರು.
18 ಸಾವಿರ ಶಿಕ್ಷಕರ ನೇಮಕಾತಿ ಪ್ರಗತಿಯಲ್ಲಿ:
ಈ ಹಿಂದೆ ಬಾಕಿ ಉಳಿದಿದ್ದ 13 ಸಾವಿರ ಶಿಕ್ಷಕರ ನೇಮಕಾತಿಯನ್ನು ಪೂರ್ಣಗೊಳಿಸಲಾಗಿದೆ. ಇದೀಗ ಹೊಸದಾಗಿ ಸುಮಾರು 18 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಶೀಘ್ರವೇ ಪರೀಕ್ಷಾ ದಿನಾಂಕ ಪ್ರಕಟಿಸಲಾಗುವುದು. ಬರುವ ಜೂನ್ ವೇಳೆಗೆ ಆಯ್ಕೆಯಾದ ಶಿಕ್ಷಕರಿಗೆ ನೇಮಕಾತಿ ಆದೇಶ ನೀಡಿ ಶಾಲೆಗಳಿಗೆ ನಿಯೋಜಿಸಲಾಗುವುದು. ಇನ್ನು, ಪರೀಕ್ಷಾ ಅಕ್ರಮ ತಡೆಯಲು ದೇಶದಲ್ಲೇ ಮೊದಲ ಬಾರಿಗೆ ಜಾರಿಗೆ ತಂದ ವೆಬ್ಕಾಸ್ಟಿಂಗ್ ವ್ಯವಸ್ಥೆ ಯಶಸ್ವಿಯಾಗಿದ್ದು, ವಿದ್ಯಾರ್ಥಿಗಳ ನೈಜ ಪ್ರತಿಭೆ ಹೊರಬರುತ್ತಿದೆ ಎಂದರು.
ತಂದೆ ಬಂಗಾರಪ್ಪನವರ ನಂಟು ಸ್ಮರಣೆ:
ಮಾಜಿ ಮುಖ್ಯಮಂತ್ರಿ ದಿ. ಎಸ್. ಬಂಗಾರಪ್ಪ ಅವರಿಗೆ ರಾಯಚೂರಿನೊಂದಿಗೆ ಅವಿನಾಭಾವ ಸಂಬಂಧವಿತ್ತು. ಇಲ್ಲಿನ ಎನ್. ಗಣೇಕಲ್ ಜಲಾಶಯಕ್ಕೆ ಜನರೇ ‘ಬಂಗಾರಪ್ಪ ಜಲಾಶಯ’ ಎಂದು ಹೆಸರಿಟ್ಟು ಗೌರವಿಸಿದ್ದಾರೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ನೆರವಾಗಲು ದೇಶದಲ್ಲೇ ಮೊದಲ ಬಾರಿಗೆ ಗ್ರಾಮೀಣ ಕೃಪಾಂಕ ಯೋಜನೆ ಜಾರಿಗೆ ತಂದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಸ್ಮರಿಸಿದರು.
ಬಾಕ್ಸ್: ಏನಿದು ಮಿಷನ್-60+?
ಕಳೆದ 2025-26ನೇ ಸಾಲಿನಲ್ಲಿ ಜಾರಿಯಲ್ಲಿದ್ದ ‘ಮಿಷನ್-40+’ ಯಶಸ್ಸಿನ ಬೆನ್ನಲ್ಲೇ, 2026-27ನೇ ಸಾಲಿಗೆ ಶಿಕ್ಷಣ ಇಲಾಖೆ ‘ಮಿಷನ್-60+’ ರೂಪಿಸಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕನಿಷ್ಠ ಶೇ.60ಕ್ಕಿಂತ ಅಧಿಕ ಅಂಕ ಗಳಿಸುವಂತೆ ಸಜ್ಜುಗೊಳಿಸುವುದು ಹಾಗೂ ಶಾಲಾ-ಕಾಲೇಜುಗಳಲ್ಲಿ ಶೇ.100ರಷ್ಟು ಫಲಿತಾಂಶ ಸಾಧಿಸುವುದು ಈ ಯೋಜನೆಯ ಪ್ರಮುಖ ಗುರಿಯಾಗಿದೆ.
ಕಾರ್ಯಾಗಾರದಲ್ಲಿ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಸಂಪನ್ಮೂಲ ಶಿಕ್ಷಕರು ಪಾಲ್ಗೊಂಡಿದ್ದರು. ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ವಿ. ರಶ್ಮಿ ಮಹೇಶ್, ಪಿಯು ಇಲಾಖೆ ನಿರ್ದೇಶಕ ಎಸ್. ಭರತ್, ಅಪರ ಆಯುಕ್ತ ಅವಿನಾಶ್ ಶಿಂಧೆ, ಪರೀಕ್ಷಾ ಮಂಡಳಿ ನಿರ್ದೇಶಕಿ ಅನಿತಾ ನಜಾರೆ ಹಾಗೂ ನಿರ್ದೇಶಕಿ ಮಗಳ ನಾಯಕ ಉಪಸ್ಥಿತರಿದ್ದರು.

