Sun. Mar 8th, 2026

ಹೈಕಮಾಂಡ್ ಭೇಟಿಗಾಗಿ ದೆಹಲಿಗೆ ಬಂದಿಲ್ಲ, ಇದೊಂದು ಖಾಸಗಿ ಭೇಟಿ: ಡಿಕೆ ಶಿವಕುಮಾರ್

Share this with Friends

ದೆಹಲಿ: ದೆಹಲಿ ಪ್ರವಾಸ ಖಾಸಗಿ ಕಾರ್ಯಕ್ರಮವೇ ಹೊರತು ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವ ಉದ್ದೇಶ ಇಂದಿನ ದೆಹಲಿ ಭೇಟಿಯಲ್ಲಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮದುವೆ ಸಮಾರಂಭದಲ್ಲಿ ಭಾಗವಹಿಸುವುದು ಹಾಗೂ ಡಿ.14 ಪ್ರತಿಭಟನಾ ಸಮಾವೇಶಕ್ಕೆ ಕರ್ನಾಟಕ ರಾಜ್ಯದಿಂದ 10 ಸಾವಿರ ಜನರನ್ನು ಕರೆತರಲು ನಿರ್ಧರಿಸಲಾಗಿದೆ. ಇದರ ಪೂರ್ವ ತಯಾರಿ ನೋಡಿಕೊಳ್ಳುವುದು ಪಕ್ಷದ ಅಧ್ಯಕ್ಷನಾಗಿ ನನ್ನ ಜವಾಬ್ದಾರಿ” ಅದಕ್ಕಾಗಿ ದೆಹಲಿಗೆ ಬಂದಿದ್ದೇನೆ ಎಂದು ತಿಳಿಸಿದರು.

ದೆಹಲಿಗೆ ಭೇಟಿ ಕೊಟ್ಟಿರುವ ಸಂದರ್ಭದಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತೀರಾ ಎಂದು ಕೇಳಿದಾಗ,“ಈಗ ನಮ್ಮ ನಾಯಕರು ಸಂಸತ್ ಅಧಿವೇಶನದಲ್ಲಿ ಬ್ಯುಸಿ ಇದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ತೊಂದರೆ ಕೊಡಲು,ಮುಜುಗರಕ್ಕೀಡಾಗುವಂತೆ ಮಾಡಲು ಬಯಸುವುದಿಲ್ಲ. ಅಲ್ಲದೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವ ಉದ್ದೇಶವೂ ಈಗಿನ ಭೇಟಿಯಲ್ಲಿ ಇಲ್ಲ, ಗುರುವಾರ ಬೆಳಗ್ಗೆ ಬೆಂಗಳೂರಿಗೆ ಮರಳುತ್ತೇನೆ” ಎಂದು ಸ್ಪಷ್ಟಪಡಿಸಿದರು.

8ರಂದು ಸಿಡಬ್ಲ್ಯುಎಂಎ ಸಭೆ ಇದೆ ಎಂದು ಕೇಳಿದಾಗ, “ಈ ಬಗ್ಗೆ ಎಲ್ಲಾ ದಾಖಲೆ ಸಿದ್ಧ ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನಾವು ನಮ್ಮ ವಿಚಾರ ಪ್ರತಿಪಾದಿಸಬೇಕು. ಇಲ್ಲದಿದ್ದರೆ, ಸಭೆ ಮುಂದೂಡಿಕೊಂಡು ಹೋಗಲಾಗುವುದು. ನಾವು ಅವರ ಮುಂದೆ ಪ್ರೆಸೆಂಟೇಷನ್ ಸಲ್ಲಿಸಬೇಕು. ಇದಕ್ಕೆ 6 ತಿಂಗಳ ಕಾಲಾವಕಾಶ ಇದೆ” ಎಂದು ತಿಳಿಸಿದರು.

ಸಿಎಂ ಜೊತೆಗಿನ ಉಪಹಾರ ಸಭೆಯಲ್ಲಿ ಏನು ಚರ್ಚೆ ಆಯಿತು ಬಗ್ಗೆ ಕೇಳಿದಾಗ, “ಉಪಹಾರ ಸಭೆಯಲ್ಲಿ ಸಿಎಂ ಜೊತೆ ಸಾಕಷ್ಟು ವಿಚಾರ ಚರ್ಚೆ ಮಾಡಿದ್ದೇನೆ. ಎಲ್ಲರೂ ಒಟ್ಟಾಗಿ ಕರ್ನಾಟಕ ರಾಜ್ಯವನ್ನು ಮುನ್ನಡೆಸುವುದು, ಪಕ್ಷ ಸಂಘಟನೆ ವಿಚಾರವಾಗಿ ಚರ್ಚೆ ಮಾಡಿದ್ದೇನೆ” ಎಂದು ತಿಳಿಸಿದರು.


Share this with Friends

Related Post