Sun. Mar 8th, 2026

ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಬೇಡಿಕೆ ಬಹುತೇಕ ಈಡೇರಿಕೆಗೆ ಕೇಂದ್ರ ಸಮ್ಮತಿ: ಹೆಚ್.ಡಿ ಕುಮಾರಸ್ವಾಮಿ

Share this with Friends

ನವದೆಹಲಿ: ನನ್ನ ಮನವಿಗೆ ಓಗೊಟ್ಟು ಪ್ರತಿಭಟನೆ ನಿಲ್ಲಿಸಿ ದೆಹಲಿಗೆ ಬಂದ ಅಂಗನವಾಡಿ, ಅಕ್ಷರ ದಾಸೋಹ ಹಾಗೂ ಆಶಾ ಕಾರ್ಯಕರ್ತೆಯರ ಪ್ರಮುಖರ ಜತೆಗಿನ ಮಾತುಕತೆ ಉತ್ತವಾಗಿ ನಡೆಯಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವರೊಂದಿಗೆ ನಡೆದ ಸಭೆಯಲ್ಲಿ ಎಲ್ಲಾ ಅಂಶಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಅವರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ವಹಿಸುವುದಾಗಿ ಅವರು ಭರವಸೆ ನೀಡಿದ್ದಾರೆ ಹಾಗಾಗಿ ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಬೇಡಿಕೆ ಬಹುತೇಕ ಈಡೇರಿಕೆಗೆ ಕೇಂದ್ರ ಸಮ್ಮತಿ ನೀಡಿದಂತಾಗಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಅಂಗನವಾಡಿ, ಅಕ್ಷರ ದಾಸೋಹ ಹಾಗೂ ಆಶಾ ಕಾರ್ಯಕರ್ತೆಯರ ಸಮಸ್ಯೆಗಳ ಬಗ್ಗೆ ಕೇಂದ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವರಾದ ಅನ್ನಪೂರ್ಣ ದೇವಿ ಮತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮಹತ್ವದ ಮಾತುಕತೆ ನಡೆಸಿದರು.

ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನಾ ಚಳವಳಿ ನಡೆಸುತ್ತಿದ್ದ ಕರ್ನಾಟಕ ಅಂಗನವಾಡಿ, ಅಕ್ಷರ ದಾಸೋಹಿ, ಆಶಾ ನೌಕರರ ಪ್ರಮುಖರನ್ನು ಬುಧವಾರ ನವದೆಹಲಿಗೆ ಕರೆಸಿಕೊಂಡ ಸಚಿವ ಕುಮಾರಸ್ವಾಮಿ ಅವರು; ಈ ಎಲ್ಲಾ ಪ್ರಮುಖರ ಜತೆ ಸಂಜೆ ನವದೆಹಲಿಯ ಶಾಸ್ತ್ರೀ ಭವನದಲ್ಲಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ಕಚೇರಿಯಲ್ಲಿ ಸಚಿವರಾದ ಅನ್ನಪೂರ್ಣದೇವಿ ಅವರನ್ನು ಭೇಟಿಯಾದರು.ಈ ಸಂದರ್ಭದಲ್ಲಿ ನೌಕರರ ಪರವಾಗಿ ಸಚಿವರಿಗೆ ಅವರ ಸಮಸ್ಯೆಗಳು, ಬೇಡಿಕೆಗಳ ಬಗ್ಗೆ ಕುಮಾರಸ್ವಾಮಿ ಮಾಹಿತಿ ನೀಡಿದರು.

ಇಬ್ಬರು ಸಚಿವರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ಉನ್ನತ ಅಧಿಕಾರಿಗಳು ಹಾಜರಿದ್ದ ಈ ಸಭೆಯಲ್ಲಿ ಕರ್ನಾಟಕದಿಂದ ಬಂದಿದ್ದ ಹನ್ನೆರಡು ಮಂದಿ ನೌಕರರ ಪ್ರಮುಖರು ಭಾಗಿಯಾಗಿದ್ದರು.ಎಫ್ ಆರ್ ಎಸ್ ನೀತಿಯಲ್ಲಿ ಸುಧಾರಣೆ, ಅಂಗನವಾಡಿ ಕಾರ್ಯಕರ್ತೆಯರನ್ನು ಚುನಾವಣೆ ಕೆಲಸಗಳಿಂದ ಮುಕ್ತಿಗೊಳಿಸುವುದು, ವಿಮಾ ಸೌಲಭ್ಯ, ಎಲ್ಲಾ ನೌಕರರ ವೇತನ ಹೆಚ್ಚಳ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಸಚಿವರೊಬ್ಬರು ಪ್ರಮುಖರ ಜತೆ ಚರ್ಚಿಸಿದರು.

ಅಂಗನವಾಡಿ ಕಾರ್ಯಕರ್ತೆಯರನ್ನು ಚುನಾವಣೆ ಕೆಲಸಗಳಿಗೆ ನಿಯೋಜಿಸದಿರುವ ಬಗ್ಗೆ ಚುನಾವಣೆ ಆಯೋಗದ ಜತೆ ಚರ್ಚೆ ನಡೆಸಲಾಗುವುದು ಹಾಗೂ ಎಲ್ಲಾ ನೌಕರರಿಗೂ ಕೆಲಸದ ಒತ್ತಡ ಕಡಿಮೆ ಮಾಡುವ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಹಾಗು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ  ವ್ಯಾಪ್ತಿಗೆ ಬರುವ ಎಲ್ಲಾ ಬೇಡಿಕೆಗಳ ಈಡೇರಿಕೆಗೆ ಕ್ರಮ ವಹಿಸಲಾಗುವುದು. ನಿಮ್ಮ ಮೇಲಿನ ಕಾಳಜಿ ಹಾಗೂ ಮಾನವೀಯ ನೆಲೆಗಟ್ಟಿನ ಮೇರೆಗೆ ಬೇಡಿಕೆಗಳ ಈಡೇರಿಕೆಗೆ ಪರಿಶೀಲನೆ ನಡೆಸಲಾಗುವುದು ಎಂದು ಅನ್ನಪೂರ್ಣದೇವಿ ಅವರು ಭರವಸೆ ನೀಡಿದರು.

ನರೇಂದ್ರ ಮೋದಿ ಅವರ ಸರ್ಕಾರ ನಿಮ್ಮ ಜತೆಗಿದೆ. ಕರ್ನಾಟಕದಲ್ಲಿನೀವು ನಡೆಸುತ್ತಿದ್ದ ಪ್ರತಿಭಟನಾ ಚಳವಳಿಯ ಬಗ್ಗೆ ಸಚಿವರಾದ ಕುಮಾರಸ್ವಾಮಿ ಅವರು ನನ್ನೊಂದಿಗೆ ವಿವರವಾಗಿ ಚರ್ಚೆ ನಡೆಸಿದ್ದಾರೆ. ನೀವು ಉತ್ತಮ, ಶ್ರೇಷ್ಠ ಕೆಲಸ ಮಾಡುತ್ತಿದ್ದೀರಿ. ನಿಮ್ಮ ಜತೆ ಸರಕಾರವಿದೆ. ಆದಷ್ಟು ಬೇಡಿಕೆಗಳನ್ನು ಈಡೇರಿಸಲಾಗುವುದು. ನಿಮಗೆ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ, ನಿಮಗೆ ಮತ್ತಷ್ಟು ಉತ್ತಮ ಸೌಲಭ್ಯ ಕಲಿಸ್ಪಿಸುವ ದಿಸೆಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅನ್ನಪೂರ್ಣದೇವಿ ಅವರು ಅಂಗನವಾಡಿ ಪ್ರಮುಖರಿಗೆ ತಿಳಿಸಿದರು.

ಇದಕ್ಕೂ ಮುನ್ನ ತಮ್ಮ ನಿವಾಸದಲ್ಲಿ ನೌಕರರ ಪ್ರಮುಖರನ್ನು ಭೇಟಿಯಾದ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು; ನನ್ನ ಮನವಿಗೆ ಓಗೊಟ್ಟು ಪ್ರತಿಭಟನೆ ಕೊನೆಗೊಳಿಸಿ ನವದೆಹಲಿಗೆ ಬಂದಿದ್ದು ಸ್ವಾಗತಾರ್ಹ. ನೀವೆಲ್ಲರೂ ಮೈಕೊರೆಯುವ ಚಳಿಯಲ್ಲಿ ರಸ್ತೆಯ ಮೇಲೆ ಧರಣಿ ಕೂರುವುದು ಅತ್ಯಂತ ನೋವಿನ ಸಂಗತಿ. ಚರ್ಚೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಅದಕ್ಕಾಗಿಯೇ ನಿಮ್ಮನ್ನು ಇಲ್ಲಿಗೆ ಕರೆಸಿಕೊಳ್ಳಲಾಯಿತು. ಪ್ರತಿಭಟನೆಗಿಂತ ಚರ್ಚೆ ಮಾಡುವುದು ಉತ್ತಮ ಮಾರ್ಗ ಎಂದು ತಿಳಿಸಿದರು.

ಇದೇ ವೇಳೆ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ನೌಕರರ ಬೇಡಿಕೆಗಳ ಬಗ್ಗೆ ದೂರವಾಣಿಯಲ್ಲಿ ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ಮಾತುಕತೆ ನಡೆಸಿದ ಸಚಿವ ಕುಮಾರಸ್ವಾಮಿ ಅವರು; ಪ್ರಧಾನ್ ಅವರೊಂದಿಗೆ ನೌಕರರ ಪ್ರಮುಖರ ಸಭೆಯನ್ನು ನಿಗದಿಗೊಳಿಸಿ, ಅವರ ನಿವಾಸಕ್ಕೆ ಅಧಿಕಾರಿಗಳ ಸಮೇತ ಕಳಿಸಿದರು.

ಸಚಿವ ಪ್ರಧಾನ್ ಅವರ ಜತೆಗೂ ಮಾತುಕತೆ ನಡೆಸಿದ ಪ್ರಮುಖರು, ತಮ್ಮ ಬೇಡಿಕೆ, ಸಂಕಷ್ಟಗಳ ಬಗ್ಗೆ ಚರ್ಚಿಸಿದರು. ಈ ಅವರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ್ ಅವರು, ಈ ಬಗ್ಗೆ ಕುಮಾರಸ್ವಾಮಿ ಅವರು ನನ್ನೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿಸಿದರು.

ಎಸ್. ವರಲಕ್ಷ್ಮೀ, ಹೆಚ್.ಎಸ್. ಸುನಂದಾ, ಮಾಲಿನಿ ಮೇಸ್ತಾ, ಶಾಂತಾ, ಲಕ್ಷ್ಮೀದೇವಮ್ಮ, ಮಹದೇವಮ್ಮ, ಶಶಿಕಲಾ, ದೊಡ್ಡವ್ವ ಪೂಜಾರಿ, ನಂಜಮ್ಮ, ಗುಲ್ಜಾರ್, ಉಷಾರಾಣಿ, ಸಿಂಧು, ಸವಿತಾ ಅವರು ನೌಕರರ ನಿಯೋಗದಲ್ಲಿ ಇದ್ದರು.


Share this with Friends

Related Post