Sat. Mar 7th, 2026

ಲಿಂಗತಾರತಮ್ಯ ಹೋಗಲಾಡಿಸಲು ಸರ್ಕಾರ ಬದ್ದ: ಸಿಎಂ

Share this with Friends

ಬೆಂಗಳೂರು: ರಾಜ್ಯದಲ್ಲಿ ಲಿಂಗತಾರತಮ್ಯ ಹೋಗಲಾಡಿಸಲು ಸರ್ಕಾರ ಬದ್ಧವಾಗಿದೆ.ಸರ್ಕಾರದ ಆಡಳಿತ ಯಂತ್ರದಲ್ಲಿ ಗಣನೀಯ ಕೊಡುಗೆ ನೀಡುತ್ತಿರುವ ಮಹಿಳಾ ನೌಕರರನ್ನು ಅಭಿನಂದಿಸಿ, ಸೆಪ್ಟೆಂಬರ್ 13 ರಂದು ಮಹಿಳಾ ನೌಕರರ ದಿನಾಚರಣೆಯಾಗಿ ಘೋಷಣೆ ಮಾಡುವ ಹಾಗು ಸಂಘದ ಕಚೇರಿಯ ಕಾರ್ಯಚಟುವಟಿಕೆಗಳಿಗೆ ಬಾಲಭವನದಲ್ಲಿ ಸ್ಥಳಾವಕಾಶ ನೀಡಲು ಅವಕಾಶ ಕಲ್ಪಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಇಂದು ನಡೆದ ಮಹಿಳಾ ನೌಕರರ ಸಮ್ಮೇಳನವನ್ನು ಉದ್ಘಾಟಿಸಿ, ಬಳಿಕ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ವತಿಯಿಂದ, “ಮಹಿಳಾ ನೌಕರರಿಗಾಗಿ ಋತುಚಕ್ರ ರಜೆ” ಘೋಷಿಸಿರುವ ಸರ್ಕಾರದ ಕ್ರಮಕ್ಕಾಗಿ ಸನ್ಮಾನ ಸ್ವೀಕರಿಸಿದ ಮಾತನಾಡಿದ ಅವರು,ಸರ್ಕಾರದ ಆಡಳಿತ ಯಂತ್ರದಲ್ಲಿ ಗಣನೀಯ ಕೊಡುಗೆ ನೀಡುತ್ತಿರುವ ಮಹಿಳಾ ನೌಕರರು ಪುರುಷರಿಗೆ ಸರಿಸಮನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯದಲ್ಲಿ ಲಿಂಗತಾರತಮ್ಯ ಹೋಗಲಾಡಿಸಲು ಸರ್ಕಾರ ಬದ್ಧವಾಗಿದೆ. ಎಲ್ಲರನ್ನೂ ಸಮಾನವಾಗಿ ಕಾಣುವ ಬದ್ಧತೆ ನಮ್ಮ ಸರ್ಕಾರದ್ದಾಗಿದೆ ಎಂದರು.

ಮಹಿಳೆಯರು ವೈಚಾರಿಕತೆ ಮತ್ತು ವೈಜ್ಞಾನಿಕತೆಯನ್ನು ಬೆಳೆಸಿಕೊಳ್ಳಬೇಕು:

ಮಹಿಳೆಯರು ವೈಚಾರಿಕತೆ ಮತ್ತು ವೈಜ್ಞಾನಿಕತೆಯನ್ನು ಬೆಳೆಸಿಕೊಳ್ಳಬೇಕು,ಸಾಧ್ಯವಾದ ಮಟ್ಟಿಗೆ ಮೂಢ ನಂಬಿಕೆಗಳು ಮತ್ತು ಅಂಧ ಶ್ರದ್ಧೆಗಳನ್ನ  ದೂರ ಮಾಡುವಂಥ ಕೆಲಸ ಮಾಡಬೇಕು. ಮಕ್ಕಳಿಗೂ ಇದನ್ನು ಹೇಳಿಕೊಡಿ. ಆಗ ಮಾತ್ರ ಆರೋಗ್ಯಕರ, ಸಮಾನತೆಯ ಸಮಾಜ ನಿರ್ಮಾಣ ಸಾಧ್ಯ. ಸಂವಿಧಾನವೂ ಇದನ್ನೇ ಹೇಳುತ್ತದೆ. ಈ ಬಾರಿ ನಾನು ಮುಖ್ಯಮಂತ್ರಿಯಾದ ಬಳಿಕ  ಎಲ್ಲಾ ಶಾಲಾ ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆಯನ್ನು ಓದಿಸಲಾಗುತ್ತಿದೆ. ನಮ್ಮ ಸಮಾಜದಲ್ಲಿ ಅನೇಕ ಜಾತಿ, ಧರ್ಮಗಳಿವೆ. ಯಾವುದೇ ಕಾರಣಕ್ಕೂ ಮಕ್ಕಳಿಗೆ ಜಾತಿಯನ್ನು ಮುಂದಿಟ್ಟುಕೊಂಡು ಜಾತೀಯತೆಯನ್ನು ತುಂಬುವ ಕೆಲಸ ಮಾಡಬಾರದು. ಶಿಕ್ಷಣ ನೀಡುವುದು ಜಾತಿ ವ್ಯವಸ್ಥೆ ಹೋಗಬೇಕೆನ್ನುವ ಕಾರಣಕ್ಕೆ. ಅದರ ಉದ್ದೇಶ ಸಫಲವಾಗಬೇಕು. ವೈದ್ಯರು, ವಿಜ್ಞಾನಿಗಳೂ ಸೇರಿದಂತೆ  ವಿದ್ಯಾವಂತರು ಕೂಡ ಮೂಢನಂಬಿಕೆಗಳನ್ನು ಉಳ್ಳವರಾಗಿದ್ದಾರೆ. ಮಕ್ಕಳನ್ನು ಮೂಢನಂಬಿಕೆಗಳಿಂದ ದೂರ ಇಡಬೇಕು ಹಾಗೂ  ಮಹಿಳೆಯರು ಹಾಗೂ ಮಕ್ಕಳು ಜಾತ್ಯತೀತವಾಗಿರಬೇಕು ಎಂದರು.

ಮಹಿಳೆಯರು ಆರ್ಥಿಕವಾಗಿ ಸಾಮಾಜಿಕವಾಗಿ ಸಬಲರಾಗಬೇಕು:

ಮಹಿಳೆಯರ ಸಬಲೀಕರಣವಾಗಬೇಕು ಎಂಬ ಉದ್ದೇಶದಿಂದ 3.5 ಕೋಟಿ ಮಹಿಳೆಯರಿಗೆ ಶಕ್ತಿ ಯೋಜನೆಯಡಿ ಉಚಿತವಾಗಿ ಓಡಾಡುತ್ತಿದ್ದಾರೆ. ಇದನ್ನು ಸಾಮಾಜಿಕ ಬಂಡವಾಳ ಎಂದು ಕರೆಯುತ್ತೇವೆ. ಉಳಿತಾಯವಾಗುವ ಹಣವನ್ನು ಮಕ್ಕಳ ಶಿಕ್ಷಣ ಮುಂತಾದವುಕ್ಕೆ ಬಳಸಿಕೊಳ್ಳಲಾಗುತ್ತದೆ. ಆರನೇ ಮತ್ತು ಏಳನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿ ಮಾಡಿದ್ದು ನಮ್ಮ ಸರ್ಕಾರವೇ ಎಂದರು.


Share this with Friends

Related Post