ಬೆಂಗಳೂರು: ಕನ್ನಡ ಚಿತ್ರರಂಗದ ಉದಯೋನ್ಮುಖ ಗಾಯಕಿ ಅರ್ಪಿತಾ ಲಂಕೇಶ್ ಅವರು ಸೌಂದರ್ಯ ಮತ್ತು ಪ್ರತಿಭೆಯ ಜಗತ್ತಿನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಅವರು ದೇಶದ ವಿವಿಧ ಭಾಗಗಳ ಸ್ಪರ್ಧಿಗಳಿಗೆ ಕಠಿಣ ಪೈಪೋಟಿ ನೀಡಿ ‘ಮಿಸಸ್ ಗ್ಲೋಬ್ ಇಂಡಿಯಾ ಕ್ಲಾಸಿಕ್’ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಈ ಅಪೂರ್ವ ಸಾಧನೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿರುವ ಅರ್ಪಿತಾ, “ಈ ಗೌರವ ಮತ್ತು ಪ್ರಶಸ್ತಿ ಸಿಕ್ಕಿರುವುದಕ್ಕೆ ನಾನು ಅತ್ಯಂತ ಆಭಾರಿಯಾಗಿದ್ದೇನೆ. ಈ ಯಶಸ್ಸು ಕೇವಲ ನನ್ನ ಶ್ರಮ ಮಾತ್ರವಲ್ಲ, ನನ್ನನ್ನು ನಿರಂತರವಾಗಿ ಪ್ರೋತ್ಸಾಹಿಸಿದ ನನ್ನ ಕುಟುಂಬ, ಸ್ನೇಹಿತರು, ಮಾರ್ಗದರ್ಶಕರು ಹಾಗೂ ಹಿತೈಷಿಗಳ ಪ್ರೀತಿಯ ಬೆಂಬಲದ ಪ್ರತಿಫಲವಾಗಿದೆ” ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ತೀರ್ಪುಗಾರರ ಮನಗೆದ್ದ ಸೌಂದರ್ಯ ಮತ್ತು ಜಾಣ್ಮೆ
ಸ್ಪರ್ಧೆಯ ವಿವಿಧ ಸುತ್ತುಗಳಲ್ಲಿ ಅರ್ಪಿತಾ ಲಂಕೇಶ್ ಅವರು ತಮ್ಮ ನಯವಾದ ನಡಿಗೆ, ಉಡುಗೆ-ತೊಡುಗೆ ಹಾಗೂ ಬುದ್ಧಿವಂತಿಕೆಯ ಉತ್ತರಗಳ ಮೂಲಕ ತೀರ್ಪುಗಾರರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪಯಣದಲ್ಲಿ ತಮಗೆ ಬೆನ್ನೆಲುಬಾಗಿ ನಿಂತ ನ್ಯಾಷನಲ್ ಡೈರೆಕ್ಟರ್ ವೀಣಾ ಜೈನ್, ಆಕರ್ಷಕ ಉಡುಪು ವಿನ್ಯಾಸಗೊಳಿಸಿದ ಫ್ಯಾಷನ್ ಸ್ಟೈಲಿಸ್ಟ್ ನೈನಾ ಹಾಗೂ ಕಣ್ಣಿಗೆ ಕಟ್ಟುವಂತೆ ಛಾಯಾಗ್ರಹಣ ಮಾಡಿದ ಫರಾಜ್ ಅಹಮದ್ ಅವರಿಗೆ ಅರ್ಪಿತಾ ವಿಶೇಷ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಕೇವಲ ಗಾಯನ ಕ್ಷೇತ್ರದಲ್ಲಿ ಮಾತ್ರವಲ್ಲದೆ ಇಂತಹ ದೊಡ್ಡ ವೇದಿಕೆಯಲ್ಲೂ ಕನ್ನಡಿಗರ ಹಿರಿಮೆಯನ್ನು ಎತ್ತಿಹಿಡಿದ ಅರ್ಪಿತಾ ಲಂಕೇಶ್ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

