Sat. Jun 6th, 2026

ಬಾಗಲಕೋಟೆ ಉಪಚುನಾವಣೆ: ತಿಮ್ಮಾಪುರ ಸಂಧಾನ ಯಶಸ್ವಿ;5 ಪಕ್ಷೇತರ ಅಭ್ಯರ್ಥಿಗಳ ನಾಮಪತ್ರ ವಾಪಸ್

Share this with Friends

ಬಾಗಲಕೋಟೆ: ಜಿಲ್ಲೆಯ ವಿಧಾನಸಭಾ ಉಪಚುನಾವಣೆಯ ಕಣದಲ್ಲಿ ಅಸಮಾಧಾನಗೊಂಡಿದ್ದ ಬಂಡಾಯ ಅಭ್ಯರ್ಥಿಗಳನ್ನು ಸಮಾಧಾನಪಡಿಸುವಲ್ಲಿ ಸಚಿವ ಆರ್.ಬಿ. ತಿಮ್ಮಾಪುರ ಅವರ ಸಂಧಾನ ಕಸರತ್ತು ಯಶಸ್ವಿಯಾಗಿದೆ. ಗುರುವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು, ಕಣದಲ್ಲಿದ್ದ ಮೂವರು ಪಕ್ಷೇತರ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಹಿಂಪಡೆದಿದ್ದಾರೆ.

ಗೋವಿಂದ ಬಳ್ಳಾರಿ, ವೆಂಕಟೇಶ್ ಕಮತಗಿ, ಪ್ರಶಾಂತ ರಾವ್, ಅಜಿತ್ ಬಾಳಿಕಾಯಿ ಮತ್ತು ಆಯಬ ಬಾಗೇವಾಡಿ ಅವರು ಸಲ್ಲಿಸಿದ್ದ ನಾಮಪತ್ರಗಳನ್ನು ಹಿಂಪಡೆದು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿದರು. ಇದರಿಂದಾಗಿ ಕಾಂಗ್ರೆಸ್ ಪಾಳಯದಲ್ಲಿ ಎದುರಾಗಿದ್ದ ಮತ ವಿಭಜನೆಯ ಭೀತಿ ಸದ್ಯಕ್ಕೆ ದೂರಾದಂತಾಗಿದೆ.

ಸಂಧಾನದ ಹಾದಿ:

ಟಿಕೆಟ್ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿದ್ದ ಈ ನಾಯಕರು ಪಕ್ಷೇತರರಾಗಿ ಸ್ಪರ್ಧಿಸಲು ಮುಂದಾಗಿದ್ದರು. ಇದು ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಹಿನ್ನಡೆಯಾಗುವ ಸಾಧ್ಯತೆ ಇತ್ತು. ಪರಿಸ್ಥಿತಿಯ ಗಂಭೀರತೆ ಅರಿತ ಸಚಿವ ತಿಮ್ಮಾಪುರ ಅವರು ಬಂಡಾಯ ಅಭ್ಯರ್ಥಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿ, ಭವಿಷ್ಯದಲ್ಲಿ ಸೂಕ್ತ ಸ್ಥಾನಮಾನ ನೀಡುವ ಭರವಸೆ ನೀಡುವ ಮೂಲಕ ಅವರನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಸಂದರ್ಭದಲ್ಲಿ ಸಚಿವ ತಿಮ್ಮಾಪೂರ ಅವರು ಮಾತನಾಡಿ, “ಎಲ್ಲಾ ಅಭ್ಯರ್ಥಿಗಳು ಪಕ್ಷದ ಏಕತೆಗಾಗಿ ತಮ್ಮ ನಾಮಪತ್ರಗಳನ್ನು ಹಿಂಪಡೆದು ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರಿಗೆ ಬೆಂಬಲ ನೀಡುವುದು ಶ್ಲಾಘನೀಯವಾದ ನಿರ್ಧಾರವಾಗಿದೆ. ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಒಗ್ಗಟ್ಟಿನಿಂದ ಸ್ಪರ್ಧಿಸಿ ಗೆಲುವು ಸಾಧಿಸುತ್ತದೆ” ಎಂದು ಹೇಳಿದರು.

ನೇರ ಹಣಾಹಣಿ:

ಬಂಡಾಯಗಾರರು ಹಿಂದೆ ಸರಿದಿರುವುದರಿಂದ ಈಗ ಬಾಗಲಕೋಟೆ ಕಣದಲ್ಲಿ ಕಾಂಗ್ರೆಸ್‌ನ ಉಮೇಶ್ ಮೇಟಿ ಹಾಗೂ ಬಿಜೆಪಿಯ ವೀರಣ್ಣ ಚರಂತಿಮಠ ಅವರ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ. ಏಪ್ರಿಲ್ 9 ರಂದು ಮತದಾನ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಪ್ರಕಟವಾಗಲಿದೆ

ಈ ಸಂದರ್ಭದಲ್ಲಿ ಬಾಗಲಕೋಟ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಎಸ್.ಜಿ. ನಂಜಯ್ಯನಮಠ, ಬಿಟಿಡಿಎ ಅಧ್ಯಕ್ಷರಾದ ಪ್ರಕಾಶ ತಪಶೆಟ್ಟಿ, ಮುಖಂಡರಾದ ಮಲ್ಲಿಕಾರ್ಜುನ ಚರಂತಿಮಠ, ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದುಗೌಡ ಪಾಟೀಲ್, ರಾಜು ಮಣಿಕೇರಿ, ಚಂದ್ರಶೇಖರ ರಾಠೋಡ್, ಲಕ್ಷಣ ಮುಚಖಂಡಿ, ಶರೀಫ್ ಮುಲ್ಲಾ, ಮುದುಕಣ್ಣ ಅಂಬಿಗೇರ, ರಜಾಕ್ ಬೆನ್ನೂರ, ಶಫೀಕ್ ಬೇಪಾರಿ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.


Share this with Friends

Related Post