Fri. Jun 5th, 2026

ರಸ್ತೆ ಬದಿ ಕಸ ಹಾಕುವ ಮುನ್ನ ಎಚ್ಚರ! ನಿಮ್ಮ ಪಿಜಿ/ಅಂಗಡಿಗೂ ಬೀಳಬಹುದು ಲಕ್ಷಾಂತರ ದಂಡ!

Share this with Friends

ಬೆಂಗಳೂರು: ನೀವು ವಾಸಿಸುವ ಪಿಜಿ ಅಥವಾ ನಡೆಸುತ್ತಿರುವ ಉದ್ದಿಮೆಯ ಕಸವನ್ನು ಗುಟ್ಟಾಗಿ ರಸ್ತೆ ಬದಿ ಎಸೆಯುತ್ತಿದ್ದೀರಾ? ಹಾಗಿದ್ದರೆ ಹುಷಾರ್! ಬೆಂಗಳೂರು ದಕ್ಷಿಣ ನಗರ ಪಾಲಿಕೆಯ (BSCC) ಮಾರ್ಷಲ್‌ಗಳ ಕಣ್ಣು ಈಗ ನಿಮ್ಮ ಮೇಲಿದೆ.

ಇತ್ತೀಚೆಗೆ ಎಸ್‌ಜಿ ಪಾಳ್ಯದ ‘ಫೋರಂ ಪಿಜಿ’ ರಸ್ತೆ ಬದಿ ಕಸ ಸುರಿದಿದ್ದಕ್ಕೆ ಬರೋಬ್ಬರಿ ₹40,000 ದಂಡ ತೆತ್ತಿದೆ. ಇದು ಕೇವಲ ಆರಂಭವಷ್ಟೇ, ಬಿಎಸ್‌ಸಿಸಿ ಮಾರ್ಷಲ್‌ಗಳು ಈಗ ಪೂರ್ಣ ಪ್ರಮಾಣದ ಕಾರ್ಯಾಚರಣೆಗೆ ಇಳಿದಿದ್ದಾರೆ.

ನಿಯಮ ಉಲ್ಲಂಘಿಸುವವರಿಗೆ ಪಾಲಿಕೆಯ ಖಡಕ್ ವಾರ್ನಿಂಗ್:

ಸಿಸಿಟಿವಿ ಕಣ್ಗಾವಲು: ಕಸ ಹಾಕುವ ‘ಬ್ಲಾಕ್ ಸ್ಪಾಟ್’ಗಳಲ್ಲಿ ರಹಸ್ಯವಾಗಿ ಸಿಸಿಟಿವಿ ಅಳವಡಿಸಲಾಗಿದೆ. ರಾತ್ರಿ ವೇಳೆ ಕಸ ಎಸೆದು ಪರಾರಿಯಾಗುವವರನ್ನು ಗುರುತಿಸಿ ಮನೆ ಬಾಗಿಲಿಗೇ ದಂಡದ ನೋಟಿಸ್ ತಲುಪಿಸಲಾಗುತ್ತಿದೆ.

ಕಸದಲ್ಲೇ ಸಿಗಲಿದೆ ಸಾಕ್ಷಿ: ಎಸೆದ ಕಸದ ಚೀಲಗಳಲ್ಲಿ ಬಿಲ್‌ಗಳು, ವಿಳಾಸದ ಚೀಟಿ ಅಥವಾ ಕೊರಿಯರ್ ಕವರ್‌ಗಳು ಸಿಕ್ಕರೆ, ಅದನ್ನು ಆಧರಿಸಿ ಮಾಲೀಕರನ್ನು ಪತ್ತೆ ಹಚ್ಚಿ ಭಾರೀ ಮೊತ್ತದ ದಂಡ ವಿಧಿಸಲಾಗುತ್ತಿದೆ.

ಪರವಾನಗಿ ರದ್ದು: ಪದೇ ಪದೇ ನಿಯಮ ಉಲ್ಲಂಘಿಸುವ ಪಿಜಿ (PG) ಮತ್ತು ವಾಣಿಜ್ಯ ಸಂಸ್ಥೆಗಳ ಪರವಾನಗಿಯನ್ನು (Trade License) ರದ್ದುಪಡಿಸಲು ಶಿಫಾರಸು ಮಾಡಲಾಗುವುದು ಎಂದು ಬಿಎಸ್‌ಸಿಸಿ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಸಾರ್ವಜನಿಕರ ಸಹಕಾರ: ಕಸ ಹಾಕುವವರನ್ನು ಕಂಡರೆ ಸಾರ್ವಜನಿಕರು ಫೋಟೋ ಅಥವಾ ವಿಡಿಯೋ ಸಮೇತ ಪಾಲಿಕೆಗೆ ದೂರು ನೀಡಬಹುದು. ತಕ್ಷಣವೇ ಕ್ರಮ ಕೈಗೊಳ್ಳಲಾಗುವುದು.

ಸಾರ್ವಜನಿಕ ರಸ್ತೆಗಳು ನಿಮ್ಮ ವೈಯಕ್ತಿಕ ಡಂಪಿಂಗ್ ಯಾರ್ಡ್‌ಗಳಲ್ಲ. ಸ್ವಚ್ಛ ಬೆಂಗಳೂರು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಲು ಸಿದ್ಧರಾಗಿ.

 


Share this with Friends

Related Post