Sat. Aug 29th, 2026

ಕರ್ತವ್ಯದ ವೇಳೆ ಭೀಕರ ಅಪಘಾತ: ಬೆಂಗಳೂರಿನ ಸೈಬರ್ ಕ್ರೈಂ ಇನ್ಸ್‌ಪೆಕ್ಟರ್ ರವಿ ನಿಧನ

Share this with Friends

ಬೆಂಗಳೂರು: ಸೈಬರ್ ವಂಚನೆ ಪ್ರಕರಣದ ತನಿಖೆಗಾಗಿ ಮಧ್ಯಪ್ರದೇಶಕ್ಕೆ ತೆರಳಿದ್ದ ಬೆಂಗಳೂರು ಆಗ್ನೇಯ ವಿಭಾಗದ ಸೈಬರ್ ಕ್ರೈಂ (CEN) ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರವಿ ಕೆ.ಬಿ. ಅವರು ಅಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ.

ಬೆಂಗಳೂರಿನಲ್ಲಿ ದಾಖಲಾಗಿದ್ದ ಪ್ರಮುಖ ಸೈಬರ್ ಅಪರಾಧ ಪ್ರಕರಣವೊಂದರ ತನಿಖೆ ಹಾಗೂ ಆರೋಪಿಗಳ ಪತ್ತೆಗಾಗಿ ಇನ್ಸ್‌ಪೆಕ್ಟರ್ ರವಿ ಅವರ ನೇತೃತ್ವದ ಪೊಲೀಸ್ ತಂಡವು ಮಧ್ಯಪ್ರದೇಶಕ್ಕೆ ಪ್ರಯಾಣ ಬೆಳೆಸಿತ್ತು.

ಘಟನೆಯ ವಿವರ:

ಮಧ್ಯಪ್ರದೇಶದ ಭೋಪಾಲ್-ಇಂದೋರ್ ಹೆದ್ದಾರಿಯ ರಾಜಗಢ ಜಿಲ್ಲೆಯ ಬಯೋರಾ ಸಮೀಪ ಇವರು ಪ್ರಯಾಣಿಸುತ್ತಿದ್ದ ಖಾಸಗಿ ಸ್ಲೀಪರ್ ಬಸ್ ನಿಯಂತ್ರಣ ತಪ್ಪಿ ಭೀಕರ ಅಪಘಾತಕ್ಕೆ ಈಡಾಗಿದೆ. ಅಪಘಾತದ ತೀವ್ರತೆಗೆ ಇನ್ಸ್‌ಪೆಕ್ಟರ್ ರವಿ ಅವರು ಬಸ್‌ನಿಂದ ಹೊರಗೆ ಬಿದ್ದು ತಲೆ ಹಾಗೂ ದೇಹದ ಇತರ ಭಾಗಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದವು. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

ಕಂಬನಿ:

ದಕ್ಷ ಅಧಿಕಾರಿಯಾಗಿದ್ದ ರವಿ ಅವರ ಅಕಾಲಿಕ ನಿಧನಕ್ಕೆ ಬೆಂಗಳೂರು ನಗರ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಹೋದ್ಯೋಗಿಗಳು ತೀವ್ರ ಕರಳು ಮತ್ತು ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಯ ನಂತರ ಬೆಂಗಳೂರಿಗೆ ತರಲು ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

 


Share this with Friends

Related Post