Thu. Aug 27th, 2026

‘ಆರ್‌ಎಸ್ಎಸ್’ ನೋಂದಣಿ ಸಂಘರ್ಷ: ಸಚಿವ ಪ್ರಿಯಾಂಕ್ ಖರ್ಗೆ ಸವಾಲು, ಆರ್. ಅಶೋಕ್ ಕೌಂಟರ್ ಅಟ್ಯಾಕ್!

Share this with Friends

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ನೋಂದಣಿ ಹಾಗೂ ಅದರ ಹಣಕಾಸಿನ ಪಾರದರ್ಶಕತೆ ಕುರಿತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಎತ್ತಿರುವ ಪ್ರಶ್ನೆಗಳು ಹಾಗೂ ಅದಕ್ಕೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ನೀಡಿರುವ ತಿರುಗೇಟು ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಆರ್‌ಎಸ್‌ಎಸ್ ಕಾನೂನಾತ್ಮಕ ನೋಂದಣಿ ಹೊಂದಿಲ್ಲ ಎಂದು ಖರ್ಗೆ ಸವಾಲು ಹಾಕಿದ್ದರೆ, ಮೊದಲು ಸಂವಿಧಾನ ಓದಿ ಎಂದು ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್ ವಿರುದ್ಧ ಕೋಮು ಗಲಭೆ ಅಥವಾ ಯಾವುದೇ ಅಧಿಕೃತ ಪ್ರಕರಣ ದಾಖಲಾಗಿಲ್ಲ ಎಂದು ಲಿಖಿತ ಉತ್ತರ ನೀಡಿದ್ದರು. ಇದನ್ನು ಬಿಜೆಪಿ ತನ್ನ ಪರವಾಗಿ ಬಳಸಿಕೊಂಡ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಖರ್ಗೆ, ಆರ್‌ಎಸ್‌ಎಸ್ ಮೇಲೆ ಕೇಸ್ ಇಲ್ಲದಿರಲು ಕಾರಣ ಅದು ನೋಂದಾಯಿತ ಸಂಸ್ಥೆಯೇ ಅಲ್ಲ ಎಂದು ವ್ಯಂಗ್ಯವಾಡಿದ್ದಾರೆ.

 “ಆರ್‌ಎಸ್‌ಎಸ್‌ಗೆ ಯಾವುದೇ ಕಾನೂನಾತ್ಮಕ ಅಸ್ತಿತ್ವ ಅಥವಾ ಔಪಚಾರಿಕ ನೋಂದಣಿ ಇಲ್ಲ. ಅಸ್ತಿತ್ವದಲ್ಲೇ ಇಲ್ಲದ ಸಂಘಟನೆಯನ್ನು ಬ್ಯಾನ್ ಮಾಡಲು ಹೇಗೆ ಸಾಧ್ಯ? ಪ್ರಧಾನಿ ಮೋದಿ, ಅಮಿತ್ ಶಾ, ಬಿ.ಎಸ್. ಯಡಿಯೂರಪ್ಪ ಹಾಗೂ ಆರ್. ಅಶೋಕ್ ಅವರಂತಹ ದೊಡ್ಡ ನಾಯಕರೇ ಅದರ ಹಿನ್ನೆಲೆಯಿಂದ ಬಂದವರಾಗಿದ್ದರೂ ಸಂಸ್ಥೆಯನ್ನು ಏಕೆ ನೋಂದಣಿ ಮಾಡಿಸಿಲ್ಲ? ಒಂದು ವೇಳೆ ಹಣದ ಸಮಸ್ಯೆಯಿದ್ದರೆ, ಕರ್ನಾಟಕದ ಎಲ್ಲಾ ಆರ್‌ಎಸ್‌ಎಸ್ ಶಾಖೆಗಳನ್ನು ನೋಂದಣಿ ಮಾಡಲು ಬೇಕಾಗುವ ನೋಂದಣಿ ಶುಲ್ಕವನ್ನು ನನ್ನ ಶಾಸಕರ ನಿಧಿ ಅಥವಾ ವೈಯಕ್ತಿಕ ಸಂಬಳದಿಂದ ನಾನೇ ಪಾವತಿಸಲು ಸಿದ್ಧನಿದ್ದೇನೆ” ಎಂದು ಬಹಿರಂಗ ಸವಾಲು ಹಾಕಿದ್ದಾರೆ.

ಸಂಸ್ಥೆಯು ತನ್ನ ಆಸ್ತಿ, ಬ್ಯಾಂಕ್ ಖಾತೆಗಳು, ದೇಣಿಗೆ ಹಾಗೂ ಆದಾಯ-ವೆಚ್ಚಗಳ ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

“ಮೊದಲು ಸಂಪೂರ್ಣ ಸಂವಿಧಾನ ಓದಲಿ” — ಆರ್. ಅಶೋಕ್ ತಿರುಗೇಟು

ಗೃಹಸಚಿವ ಪ್ರಿಯಾಂಕ್ ಖರ್ಗೆ ಅವರ ಸವಾಲಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್, ಕಾಂಗ್ರೆಸ್ ನಾಯಕರು ಆರ್‌ಎಸ್‌ಎಸ್ ಹೆಸರೆತ್ತಿ ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ಧ್ವಜ ಎತ್ತಿದ್ದಾರೆ.

“ಆರ್‌ಎಸ್‌ಎಸ್ ನೋಂದಣಿ ಬಗ್ಗೆ ಮಾತನಾಡುವವರು ಮೊದಲು ಡಾ. ಬಿ.ಆರ್. ಅಂಬೇಡ್ಕರ್ ಅವರು ಬರೆದ ಭಾರತದ ಸಂವಿಧಾನವನ್ನು ಸಂಪೂರ್ಣವಾಗಿ ಓದಿಕೊಳ್ಳಲಿ. ದೇಶದ ಪ್ರತಿಯೊಂದು ಸಂಘಟನೆ, ಚರ್ಚ್, ವಿವಿಧ ಕ್ಲಬ್‌ಗಳು ಅಥವಾ ಧಾರ್ಮಿಕ ಮೆರವಣಿಗೆ ನಡೆಸುವ ಸಂಸ್ಥೆಗಳೆಲ್ಲವೂ ಕಡ್ಡಾಯವಾಗಿ ಸದಸ್ಯತ್ವ ಕಾರ್ಡ್ ಹೊಂದಿರಬೇಕು ಅಥವಾ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಸಂವಿಧಾನದ ಯಾವ ಪುಟದಲ್ಲಿ ಬರೆಯಲಾಗಿದೆ?” ಎಂದು ಅಶೋಕ್ ಪ್ರಶ್ನಿಸಿದ್ದಾರೆ.

“ನೂರು ವರ್ಷಗಳ ಇತಿಹಾಸ ಹೊಂದಿರುವ ಮತ್ತು ದೇಶಭಕ್ತಿಯನ್ನು ಬೋಧಿಸುವ ಆರ್‌ಎಸ್‌ಎಸ್ ಸಂಸ್ಥೆಯನ್ನು ಅಲುಗಾಡಿಸಲು ಹಿಂದೆ ಅಧಿಕಾರದಲ್ಲಿದ್ದ ದೊಡ್ಡ ದೊಡ್ಡ ಸರ್ಕಾರಗಳಿಗೇ ಸಾಧ್ಯವಾಗಿಲ್ಲ. ಇನ್ನು ಇವರಿಂದ ಏನು ಮಾಡಲು ಸಾಧ್ಯ? ನಾವು ಇವರದೇ ಆದ ಪ್ರತ್ಯೇಕ ‘ಖರ್ಗೆ ಸಂವಿಧಾನ’ಕ್ಕೆ ಬೆಲೆ ಕೊಡುವುದಿಲ್ಲ” ಎಂದು ಕಟುವಾಗಿ ಟೀಕಿಸಿದ್ದಾರೆ.

ಮುಂದುವರಿದ ಜಟಾಪಟಿ

ಬೆಂಗಳೂರಿನ ಕೇಶವಕೃಪ ಅಥವಾ ದೆಹಲಿಯ ಕೇಶವಕುಂಜ್ ನಂತಹ ಆರ್‌ಎಸ್‌ಎಸ್ ಕಚೇರಿಗಳು ಸಂಸ್ಥೆಯ ಹೆಸರಿನಲ್ಲಿ ನೋಂದಣಿಯಾಗಿಲ್ಲ, ಇದು ಹೊಣೆಗಾರಿಕೆ ಇಲ್ಲದ ಅಧಿಕಾರ ಚಲಾವಣೆ ಎಂದು ಪ್ರಿಯಾಂಕ್ ಖರ್ಗೆ ಆಪಾದಿಸಿದ್ದರೆ, ದೇಶದ ಹಿತಾಸಕ್ತಿಗಾಗಿ ಕೆಲಸ ಮಾಡುವ ಸಂಘಟನೆಯ ವಿರುದ್ಧ ಕಾಂಗ್ರೆಸ್ ನಾಯಕರು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಪ್ರತಿರೋಧ ಒಡ್ಡಿದ್ದಾರೆ.

 


Share this with Friends

Related Post