Mon. Nov 2nd, 2026

ಅಂಬರೀಶ್ ರಸ್ತೆಯನ್ನು ಆಕರ್ಷಕ ತಾಣವಾಗಿ ಅಭಿವೃದ್ಧಿಪಡಿಸಲು ಮಹೇಶ್ವರ್ ರಾವ್ ಮಾಸ್ಟರ್ ಪ್ಲಾನ್

Share this with Friends

ಬೆಂಗಳೂರು: ಸಿಲಿಕಾನ್ ಸಿಟಿಯ ಹೃದಯಭಾಗದಲ್ಲಿರುವ ಡಾ. ಎಂ.ಎಚ್. ಅಂಬರೀಶ್ ರಸ್ತೆ (ರೇಸ್ ಕೋರ್ಸ್ ರಸ್ತೆ) ಇನ್ಮುಂದೆ ಮತ್ತಷ್ಟು ಸುಂದರ ಹಾಗೂ ಜನಸ್ನೇಹಿಯಾಗಿ ಬದಲಾಗಲಿದೆ. ಈ ರಸ್ತೆಯನ್ನು ನಗರದ ಪ್ರಮುಖ ಆಕರ್ಷಣೀಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲು ಸಮಗ್ರ ಮಾಸ್ಟರ್ ಪ್ಲಾನ್ ರೂಪಿಸುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ನಗರದ ವಿವಿಧೆಡೆ ನಡೆಯುತ್ತಿರುವ ಪ್ರಮುಖ ನಾಗರಿಕ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಆಯುಕ್ತರು, ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ತ್ವರಿತವಾಗಿ ಮುಗಿಸಲು ಆದೇಶಿಸಿದರು.

ರೇಸ್ ಕೋರ್ಸ್ ರಸ್ತೆಗೆ ಹಸಿರು ಮೇಕ್ ಓವರ್:

ಮೌರ್ಯ ಸರ್ಕಲ್‌ನಿಂದ ಹರೇಕೃಷ್ಣ ಜಂಕ್ಷನ್‌ವರೆಗಿನ ಸುಮಾರು 900 ಮೀಟರ್ ಉದ್ದದ ರಸ್ತೆಯ ವೈಟ್ ಟಾಪಿಂಗ್ ಪ್ರಕ್ರಿಯೆ ಬಹುತೇಕ ಕೊನೆಯ ಹಂತಕ್ಕೆ ತಲುಪಿದೆ. ಈ ವಲಯವನ್ನು ‘ಹಸಿರು ಕಾರಿಡಾರ್’ ಆಗಿ ಪರಿವರ್ತಿಸಲು ಯೋಜನೆ ರೂಪಿಸಲಾಗುತ್ತಿದ್ದು, ವಿಶಾಲವಾದ ಪಾದಚಾರಿ ಮಾರ್ಗ, ಸೈಕಲ್ ಟ್ರ್ಯಾಕ್, ಸಾರ್ವಜನಿಕರಿಗೆ ಆಸನ ವ್ಯವಸ್ಥೆ, ಆಕರ್ಷಕ ಬೀದಿ ದೀಪಗಳು ಹಾಗೂ ಸುಸಜ್ಜಿತ ಸಾರ್ವಜನಿಕ ಶೌಚಾಲಯಗಳನ್ನು ಇಲ್ಲಿ ನಿರ್ಮಿಸಲಾಗುವುದು.

ಮಲ್ಲೇಶ್ವರಂ ಹಾಗೂ ಫ್ಲಾಟ್‌ಫಾರ್ಮ್ ರಸ್ತೆ ದುರಸ್ತಿ:

ಮಲ್ಲೇಶ್ವರಂ ಲಿಂಕ್ ರಸ್ತೆ ಹಾಗೂ 5ನೇ ಕ್ರಾಸ್ ವ್ಯಾಪ್ತಿಯಲ್ಲಿ ಸ್ಮಾರ್ಟ್ ಬಜಾರ್ ಮುಂಭಾಗದ ಖಾಲಿ ಜಾಗವನ್ನು ಸಾರ್ವಜನಿಕ ಬಳಕೆಗೆ ಯೋಗ್ಯವಾಗುವಂತೆ ನವೀಕರಿಸಲು ಸೂಚಿಸಲಾಗಿದೆ. ಇನ್ನು ಫ್ಲಾಟ್‌ಫಾರ್ಮ್ ರಸ್ತೆಯಲ್ಲಿ ವಾಹನ ಸವಾರರ ಅತಿರೇಕದಿಂದ ಹಾನಿಗೊಳಗಾಗಿರುವ ಪಾದಚಾರಿ ಮಾರ್ಗ ಮತ್ತು ರ್ಯಾಂಪ್‌ಗಳನ್ನು ತಕ್ಷಣವೇ ಸರಿಪಡಿಸಲು ಗಡುವು ನೀಡಲಾಗಿದೆ. ಮೆಟ್ರೋ ಹಳಿಗಳ ಕೆಳಗೆ ಬೆಳೆದಿರುವ ಕಳೆ ಗಿಡಗಳನ್ನು ಸ್ವಚ್ಛಗೊಳಿಸಿ ಫೇವರ್ ಬ್ಲಾಕ್ ಅಳವಡಿಸಲು ಹಾಗೂ ಮಂತ್ರಿ ಮಾಲ್ ಪಕ್ಕದ ಕಟ್ಟಡಗಳ ಮೇಲಿರುವ ಅಪಾಯಕಾರಿ ಕ್ರೇನ್‌ಗಳನ್ನು ತೆರವುಗೊಳಿಸಲು ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.

ಓಕಳೀಪುರಂ ಅಷ್ಟಪಥ ಕಾರಿಡಾರ್ ವೇಗಕ್ಕೆ ಸೂಚನೆ:

ಬಹಳ ದಿನಗಳಿಂದ ನನೆಗುದಿಗೆ ಬಿದ್ದಿರುವ ಓಕಳೀಪುರಂ ಕಾರಿಡಾರ್ ಯೋಜನೆಯ ಬಾಕಿ ಕೆಲಸಗಳನ್ನು ಚುರುಕುಗೊಳಿಸಲು ಆಯುಕ್ತರು ಗ್ರೀನ್ ಸಿಗ್ನಲ್ ನೀಡಿದ್ದಾರೆ. ರಿಟೈನಿಂಗ್ ವಾಲ್ ನಿರ್ಮಾಣಕ್ಕೆ ಅಡ್ಡಿಯಾಗಿದ್ದ ಕೆಪಿಟಿಸಿಎಲ್ ಕೇಬಲ್‌ಗಳ ಸ್ಥಳಾಂತರ, ರಸ್ತೆ ಫಾರ್ಮೇಷನ್ ಮತ್ತು ಮಳೆನೀರು ಕಾಲುವೆ ಪೈಪ್‌ಲೈನ್ ಅಳವಡಿಕೆಯನ್ನು ಯುದ್ಧೋಪಾದಿಯಲ್ಲಿ ನಡೆಸಲು ತಿಳಿಸಲಾಗಿದೆ. ರೈಲ್ವೆ ಇಲಾಖೆಗೆ ಸೇರಿದ ಜಾಗದಲ್ಲಿ ಪ್ರಾಧಿಕಾರವೇ ತಡೆಗೋಡೆ ನಿರ್ಮಿಸಿ, ನಂತರ ಅದರ ವೆಚ್ಚವನ್ನು ರೈಲ್ವೆ ಇಲಾಖೆಯಿಂದ ಮರುಪಡೆಯಲು ನಿರ್ಧರಿಸಲಾಗಿದೆ.

ಬೆಂಗಳೂರಿನ ರಸ್ತೆಗಳನ್ನು ಕೇವಲ ವಾಹನ ಸಂಚಾರಕ್ಕಷ್ಟೇ ಸೀಮಿತಗೊಳಿಸದೆ, ಪಾದಚಾರಿಗಳಿಗೂ ಸುರಕ್ಷಿತ ಮತ್ತು ಸುಂದರ ಪರಿಸರವನ್ನು ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

 


Share this with Friends

Related Post