Mon. Nov 2nd, 2026

ರಾಜ್ಯದಲ್ಲಿ ಜನಾಕ್ರೋಶ ಸ್ಫೋಟಗೊಳ್ಳುವ ಮುನ್ನ ಕಾಂಗ್ರೆಸ್ ಅಧಿಕಾರದಿಂದ ಕೆಳಗಿಳಿಯಲಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ

Share this with Friends

ಬೆಂಗಳೂರು: ರಾಜ್ಯದಲ್ಲಿ ತೀವ್ರ ಸ್ವರೂಪದ ಕ್ರಾಂತಿ ಅಥವಾ ಜನಾಕ್ರೋಶ ಸ್ಫೋಟಗೊಳ್ಳುವ ಮುನ್ನವೇ ಕಾಂಗ್ರೆಸ್ ಸರ್ಕಾರ ಅಧಿಕಾರ ಬಿಟ್ಟು ತೊಲಗಬೇಕು. ಇಲ್ಲದಿದ್ದರೆ ತಕ್ಷಣವೇ ಏರಿಸಲಾಗಿರುವ ಅಗತ್ಯ ವಸ್ತುಗಳ ಬೆಲೆಯನ್ನು ಇಳಿಸಿ, ಸಂಕಷ್ಟದಲ್ಲಿರುವ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.

ರಾಜ್ಯ ಸರ್ಕಾರದ ನಿರಂತರ ಹಾಲಿನ ದರ ಏರಿಕೆಯನ್ನು ಖಂಡಿಸಿ ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ಆಡಳಿತ ಸಂಪೂರ್ಣ ಶೂನ್ಯ:

ಕಳೆದ ಮೂರ್ನಾಲ್ಕು ತಿಂಗಳುಗಳಿಂದ ರಾಜ್ಯದ ಆಡಳಿತ ಯಂತ್ರ ಸಂಪೂರ್ಣವಾಗಿ ಹಳಿ ತಪ್ಪಿದ್ದು, ತಳಮಟ್ಟಕ್ಕೆ ಕುಸಿದಿದೆ ಎಂದು ಕರಂದ್ಲಾಜೆ ಟೀಕಿಸಿದರು. ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದ ಅವರು, “ನಿಮ್ಮ ಶ್ರೀಮಂತಿಕೆಯನ್ನು ನೋಡಿ ರಾಜ್ಯದ ಬಡ ಜನರ ಬದುಕನ್ನು ಅಳೆಯಬೇಡಿ. ಶ್ರಮಿಕ ವರ್ಗ, ಆಟೋ ಚಾಲಕರು, ಟ್ಯಾಕ್ಸಿ ಚಾಲಕರು ಮತ್ತು ಬೀದಿಬದಿ ವ್ಯಾಪಾರಿಗಳು ಜೀವನ ನಡೆಸಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಬರುವ ಅಲ್ಪ ಸಂಬಳದಲ್ಲಿ ಮನೆ ಬಾಡಿಗೆ, ವಿದ್ಯುತ್, ನೀರು ಹಾಗೂ ಕಸದ ಬಿಲ್ ಕಟ್ಟುವುದರ ಜೊತೆಗೆ ಪದೇ ಪದೇ ಏರಿಕೆಯಾಗುತ್ತಿರುವ ಹಾಲು ಮತ್ತು ಮೊಸರಿನ ದರವನ್ನು ಭರಿಸುವುದು ಸಾಮಾನ್ಯ ಜನರಿಗೆ ಕಷ್ಟಸಾಧ್ಯವಾಗಿದೆ” ಎಂದರು.

ರೈತರ ನಿಧಿಗೆ ಕತ್ತರಿ – ಬರ ಪರಿಹಾರದಲ್ಲಿ ರಾಜಕೀಯ:

ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿದ್ದರೂ ಸರ್ಕಾರ ರೈತರಿಗೆ ಕೇವಲ 2,500 ರೂಪಾಯಿಗಳನ್ನು ಭಿಕ್ಷೆಯ ರೂಪದಲ್ಲಿ ನೀಡಿದೆ. ಈ ಸಣ್ಣ ಮೊತ್ತವನ್ನು ಪಡೆಯಲು 17 ರಿಂದ 18 ಕಠಿಣ ನಿಯಮ ಹಾಗೂ ಷರತ್ತುಗಳನ್ನು ವಿಧಿಸಲಾಗಿದೆ. ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರವು ಕೇಂದ್ರದ ಕಿಸಾನ್ ಸಮ್ಮಾನ್ ಯೋಜನೆಯ ಜೊತೆಗೆ ರಾಜ್ಯದ ವತಿಯಿಂದ ನೀಡುತ್ತಿದ್ದ 4,000 ರೂಪಾಯಿ ಪ್ರೋತ್ಸಾಹಧನವನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣವೇ ಸ್ಥಗಿತಗೊಳಿಸಿದೆ ಎಂದು ಅವರು ತರಾಟೆಗೆ ತೆಗೆದುಕೊಂಡರು.

ಗೃಹಲಕ್ಷ್ಮಿ ಯೋಜನೆ ಹಣ ನಾಪತ್ತೆ:

ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರಿಗೆ ಸರಿಯಾಗಿ ತಲುಪುತ್ತಿಲ್ಲ. ಗೃಹಲಕ್ಷ್ಮಿ ಯೋಜನೆಗೆ ಮೀಸಲಿಡಲಾಗಿದ್ದ ಸುಮಾರು 5,000 ಕೋಟಿ ರೂಪಾಯಿ ಹಣ ನಾಪತ್ತೆಯಾಗಿದ್ದು, ಇಂದಿನವರೆಗೂ ಸರ್ಕಾರ ಅದಕ್ಕೆ ಸೂಕ್ತ ಲೆಕ್ಕ ಕೊಟ್ಟಿಲ್ಲ ಎಂದು ಗಂಭೀರ ಆರೋಪ ಮಾಡಿದರು. ಉಚಿತ ಬಸ್ ಪ್ರಯಾಣ ಘೋಷಿಸಿದ ಬಳಿಕ ಸಾರಿಗೆ ಸಂಸ್ಥೆಗಳ ಸ್ಥಿತಿ ಹದಗೆಟ್ಟಿದ್ದು, ಬಸ್‌ಗಳ ದುರಸ್ತಿ ಹಾಗೂ ಡೀಸೆಲ್‌ಗೂ ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

ಹಾಲಿನ ದರ ಏರಿಕೆ ಹಿಂಪಡೆಯಲು ಭಾರತಿ ಶೆಟ್ಟಿ ಒತ್ತಾಯ:

ವಿಧಾನಪರಿಷತ್ ಮಾಜಿ ಸದಸ್ಯೆ ಭಾರತಿ ಶೆಟ್ಟಿ ಮಾತನಾಡಿ, ಬಿಜೆಪಿ ಸರ್ಕಾರವು ಸಾರ್ವಜನಿಕರಿಗೆ ಹೊರೆಯಾಗದಂತೆ ಖಜಾನೆಯಿಂದ ಹಾಲಿಗೆ ಸಬ್ಸಿಡಿ ನೀಡುತ್ತಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಗ್ರಾಹಕರಿಗೆ ನಿರಂತರವಾಗಿ ಶಾಕ್ ಟ್ರೀಟ್ಮೆಂಟ್ ನೀಡುತ್ತಿದೆ. ಹಾಲಿನ ದರವನ್ನು ಹಂತಹಂತವಾಗಿ ಹೆಚ್ಚಿಸುತ್ತಾ ಇಡೀ ರಾಜ್ಯದ ಜನತೆಯ ಮೇಲೆ ಆರ್ಥಿಕ ಹೊರೆ ಹೊರಿಸಲಾಗಿದೆ ಎಂದು ಆಕ್ಷೇಪಿಸಿದರು. ಈ ಬೆಲೆ ಏರಿಕೆಯ ವಿರುದ್ಧ ಇಡೀ ರಾಜ್ಯಾದ್ಯಂತ ವಾರ್ಡ್ ಮತ್ತು ಜಿಲ್ಲಾ ಮಟ್ಟದಲ್ಲಿ ಮಹಿಳಾ ಮೋರ್ಚಾ ವತಿಯಿಂದ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಈ ಪ್ರತಿಭಟನೆಯಲ್ಲಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಭಾರತಿ ಮಲ್ಲಿಕಾರ್ಜುನ, ಮುಖಂಡರಾದ ಪೂರ್ಣಿಮಾ ಪ್ರಕಾಶ್ ಹಾಗೂ ಬೆಂಗಳೂರಿನ ವಿವಿಧ ವಿಭಾಗಗಳ ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷರಾದ ಮಂಜುಳಾ ದೇವಿ, ನೀತು ಎನ್.ಎಂ. ರೆಡ್ಡಿ, ಶ್ವೇತಾ ರಾಘವೇಂದ್ರ ಸೇರಿದಂತೆ ನೂರಾರು ಪದಾಧಿಕಾರಿಗಳು ಮತ್ತು ಕಾರ್ಯಕರ್ತೆಯರು ಭಾಗವಹಿಸಿದ್ದರು.

 

 

 


Share this with Friends

Related Post