ಬೆಂಗಳೂರು: ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR)-2026 ಅನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಜಿಬಿಎ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ದೋಷರಹಿತ ಹಾಗೂ ಅತ್ಯಂತ ಪಾರದರ್ಶಕ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಈಗಾಗಲೇ ಶೇಕಡಾ 72 ರಷ್ಟು ಮ್ಯಾಪಿಂಗ್ ಪ್ರಕ್ರಿಯೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಮನೆ-ಮನೆಗೆ ಬರಲಿದ್ದಾರೆ ಅಧಿಕಾರಿಗಳು:
ಮತದಾರರ ಪಟ್ಟಿ ಪರಿಷ್ಕರಣೆಯ ಅಂಗವಾಗಿ ಬಿಎಲ್‌ಒ (BLO) ಅಧಿಕಾರಿಗಳು ಜೂನ್ 30 ರಿಂದ ಜುಲೈ 29 ರವರೆಗೆ ಪ್ರತಿಯೊಬ್ಬರ ಮನೆ-ಮನೆಗೆ ಭೇಟಿ ನೀಡಿ ನಿಖರವಾದ ಮಾಹಿತಿಯನ್ನು ಸಂಗ್ರಹಿಸಲಿದ್ದಾರೆ. ಒಟ್ಟು ಮ್ಯಾಪಿಂಗ್ ಪ್ರಗತಿಯಲ್ಲಿ ಬೆಂಗಳೂರು ಜಿಲ್ಲೆ ಶೇ. 78.93 ರಷ್ಟು ಮುನ್ನಡೆ ಸಾಧಿಸಿದ್ದರೆ, ಕೇಂದ್ರ ನಗರ ಜಿಲ್ಲೆ ಶೇ. 67.53, ದಕ್ಷಿಣ ನಗರ ಜಿಲ್ಲೆ ಶೇ. 67.93 ಮತ್ತು ಉತ್ತರ ನಗರ ಜಿಲ್ಲೆಯು ಶೇ. 69.23 ರಷ್ಟು ಪ್ರಗತಿ ಕಂಡಿದೆ.
ಮತದಾರರ ಪಟ್ಟಿ ಪರಿಷ್ಕರಣೆಯ ಪ್ರಮುಖ ದಿನಾಂಕಗಳು:
ಮನೆ-ಮನೆ ಸಮೀಕ್ಷೆ ಅವಧಿ: 30 ಜೂನ್ ರಿಂದ 29 ಜುಲೈ 2026
ಕರಡು ಮತದಾರರ ಪಟ್ಟಿ ಪ್ರಕಟಣೆ: 05 ಆಗಸ್ಟ್ 2026
ಹಕ್ಕು ಮತ್ತು ಆಕ್ಷೇಪಣೆಗಳ ಸಲ್ಲಿಕೆ: 05 ಆಗಸ್ಟ್ ರಿಂದ 04 ಸೆಪ್ಟೆಂಬರ್ 2026
ಅಂತಿಮ ಮತದಾರರ ಪಟ್ಟಿ ಪ್ರಕಟಣೆ: 07 ಅಕ್ಟೋಬರ್ 2026
ಆಟೋ ಟಿಪ್ಪರ್‌ಗಳ ಮೂಲಕ ಜಾಗೃತಿ:
ನಾಗರಿಕರಲ್ಲಿ ಮತದಾನದ ಹಕ್ಕಿನ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಲು ಎಲ್ಲಾ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಸ್ವೀಪ್ (SVEEP) ಹಾಗೂ ಮಾಹಿತಿ, ಶಿಕ್ಷಣ ಮತ್ತು ಸಂವಹನ (IEC) ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಾರ್ವಜನಿಕರನ್ನು ತಲುಪಲು ಕಸದ ಆಟೋ ಟಿಪ್ಪರ್‌ಗಳ ಮೂಲಕವೂ ಜಾಗೃತಿ ಧ್ವನಿವರ್ಧಕ ಕಾರ್ಯಕ್ರಮಗಳನ್ನು ನಡೆಸಲು ನಿರ್ಧರಿಸಲಾಗಿದೆ. ಪ್ರತಿಯೊಬ್ಬ ಅರ್ಹ ನಾಗರಿಕರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಸಾರ್ವಜನಿಕರು ಅಧಿಕಾರಿಗಳೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಲಾಗಿದೆ ಎಂದರು.

