Wed. Nov 25th, 2026

ಸ್ಯಾಂಕಿ ಕೆರೆ ಏರಿ ಸಂರಕ್ಷಣೆಗೆ ಜಂಟಿ ಕಾರ್ಯಪಡೆ ರಚನೆ

Share this with Friends

ಬೆಂಗಳೂರು: ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ (BWCC) ಆಯುಕ್ತೆ ಶಿಲ್ಪಾ ನಾಗ್ ಅವರು ಮಂಗಳವಾರ ಬೆಳಗ್ಗೆ ಪಾಲಿಕೆಯ ಗಡಿ ಪ್ರದೇಶಗಳಾದ ವಿಜಯನಗರ, ಗೋವಿಂದರಾಜನಗರ ಮತ್ತು ಮಲ್ಲೇಶ್ವರ ವಿಭಾಗಗಳಲ್ಲಿ ವ್ಯಾಪಕ ಸಂಚಾರ ನಡೆಸಿ, ವಿವಿಧ ಅಭಿವೃದ್ಧಿ ಕಾಮಗಾರಿಗಳು, ಘನತ್ಯಾಜ್ಯ ನಿರ್ವಹಣೆ ಹಾಗೂ ಕೆರೆಗಳ ನಿರ್ವಹಣೆಯನ್ನು ಖುದ್ದು ಪರಿಶೀಲಿಸಿದರು.

ವಿಜಯನಗರ ವಿಭಾಗದಲ್ಲಿ ಪರಿಶೀಲನೆ:

ದೀಪಾಂಜಲಿನಗರ ವಾರ್ಡ್‌ನ ರಾಜಕಾಲುವೆಗೆ ಕಲುಷಿತ ನೀರು (ಬ್ಲ್ಯಾಕ್ ವಾಟರ್) ಹರಿಯಬಿಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಆಯುಕ್ತರು, ತಪ್ಪಿತಸ್ಥರ ವಿರುದ್ಧ ತಕ್ಷಣವೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಬಳಿಕ ಚಂದ್ರಾ ಲೇಔಟ್‌ನಲ್ಲಿರುವ ಬೃಹತ್ ರಾಷ್ಟ್ರಧ್ವಜ ಸ್ತಂಭ ಹಾಗೂ ಮಕ್ಕಳ ಆಟದ ಮೈದಾನವನ್ನು ವೀಕ್ಷಿಸಿ, ‘ಬೆಂಗಳೂರು ಜಾತ್ರೆ’ಯ ಅಂಗವಾಗಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಪ್ರತಿದಿನ ದೇಶಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮ ಆಯೋಜಿಸುವಂತೆ ನಿರ್ದೇಶನ ನೀಡಿದರು.

ಗೋವಿಂದರಾಜನಗರ ವಿಭಾಗ:

ಮಾಗಡಿ ರಸ್ತೆ ಮೆಟ್ರೋ ನಿಲ್ದಾಣದ ಸುತ್ತಮುತ್ತ ಬಿದ್ದಿರುವ ಕಸದ ರಾಶಿಯನ್ನು ತಕ್ಷಣವೇ ತೆರವುಗೊಳಿಸಿ, ಆ ಪ್ರದೇಶವನ್ನು ಆಕರ್ಷಕವಾಗಿ ಸೌಂದರ್ಯೀಕರಣಗೊಳಿಸುವಂತೆ (ಬ್ಯೂಟಿಫಿಕೇಶನ್) ಅಧಿಕಾರಿಗಳಿಗೆ ಆದೇಶಿಸಿದರು.

ಮಲ್ಲೇಶ್ವರ ವಿಭಾಗ:

ಸಿ.ವಿ. ರಾಮನ್ ರಸ್ತೆಯ ರಸ್ತೆ ವಿಭಜಕಗಳಲ್ಲಿರುವ (ಮೀಡಿಯನ್) ಗಿಡಗಳ ಸಮರ್ಪಕ ನಿರ್ವಹಣೆ ಹಾಗೂ ವಿಭಜಕಗಳಿಗೆ ಬಣ್ಣ ಬಳಿಯುವಂತೆ ಸೂಚಿಸಿದರು. ಅಲ್ಲದೆ, ಯಶವಂತಪುರ ರೈಲ್ವೆ ಮೇಲ್ಸೇತುವೆ ಹಾಗೂ ಲೆವೆಲ್ ಕ್ರಾಸಿಂಗ್‌ಗೆ ಸಂಬಂಧಿಸಿದ ಭೂಸ್ವಾಧೀನ ಮತ್ತು ಸರ್ವೆ ಕಾರ್ಯಗಳನ್ನು ತ್ವರಿತಗೊಳಿಸಲು ರೈಲ್ವೆ ಇಲಾಖೆಯೊಂದಿಗೆ ಸಮನ್ವಯ ಸಾಧಿಸುವಂತೆ ತಿಳಿಸಿದರು. ವಾರ್ಡ್‌ಗಳಲ್ಲಿ ತ್ಯಾಜ್ಯ ನಿರ್ವಹಣೆ ಸುಧಾರಿಸಲು ಮತ್ತು ಕಸ ಸುರಿಯುವ ಸ್ಥಳಗಳನ್ನು (ಬ್ಲ್ಯಾಕ್ ಸ್ಪಾಟ್) ಸಂಪೂರ್ಣವಾಗಿ ತೆರವುಗೊಳಿಸಲು ವಾರ್ಡ್ ಮಾರ್ಷಲ್‌ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸ್ಯಾಂಕಿ ಕೆರೆ ಏರಿ ಸಂರಕ್ಷಣೆಗೆ ಜಂಟಿ ಕಾರ್ಯಪಡೆ:

ಸ್ಯಾಂಕಿ ಕೆರೆಯ ಗಣೇಶ ವಿಸರ್ಜನಾ ಕಲ್ಯಾಣಿ ಹಾಗೂ ಕೆರೆ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದ ಆಯುಕ್ತರು, ಕೆರೆಯ ನೀರಿನ ಗುಣಮಟ್ಟ ಮತ್ತು ನೀರು ಸೋರಿಕೆಯಿಂದ ಸ್ಯಾಂಕಿ ಏರಿ ರಸ್ತೆಗೆ ಉಂಟಾಗುತ್ತಿರುವ ಹಾನಿಯ ಕುರಿತು ಭಾರತೀಯ ವಿಜ್ಞಾನ ಸಂಸ್ಥೆಯ (IISc) ತಜ್ಞರೊಂದಿಗೆ ಸಮಾಲೋಚನೆ ನಡೆಸಿದರು. ಈ ವೇಳೆ ತಜ್ಞರು ರಸ್ತೆ ಬದಿಯಲ್ಲಿ ಬೆಳೆದಿರುವ ‘ಪೇಪರ್ ಮಲ್ಬೆರಿ’ (Paper Mulberry) ಕಳೆ ಗಿಡಗಳನ್ನು ತೆರವುಗೊಳಿಸುವಂತೆ ಶಿಫಾರಸು ಮಾಡಿದರು. ಕೆರೆ ಮತ್ತು ರಸ್ತೆಯ ಸಂರಕ್ಷಣೆಗಾಗಿ ವಲಯ-2ರ ಮುಖ್ಯ ಎಂಜಿನಿಯರ್ ನೇತೃತ್ವದಲ್ಲಿ, ಕೆರೆ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಹಾಗೂ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರನ್ನೊಳಗೊಂಡ ‘ಜಂಟಿ ಕಾರ್ಯಪಡೆ’ ರಚಿಸಲು ಆಯುಕ್ತರು ನಿರ್ದೇಶಿಸಿದರು. ಈ ತಂಡವು ಸಮಸ್ಯೆಯ ಅಧ್ಯಯನ ನಡೆಸಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಕಳೆ ಗಿಡಗಳನ್ನು ತೆರವುಗೊಳಿಸಿ ಸೂಕ್ತ ಪರ್ಯಾಯ ಸಸಿಗಳನ್ನು ನೆಡಲು ಕ್ರಮ ಕೈಗೊಳ್ಳಲಿದೆ.

ಪರಿಶೀಲನೆ ವೇಳೆ ವಲಯ-2ರ ಮುಖ್ಯ ಎಂಜಿನಿಯರ್ ಬಿ.ಎಸ್. ಜಯಶಂಕರ್, ವಿಭಾಗೀಯ ಕಾರ್ಯಪಾಲಕ ಎಂಜಿನಿಯರ್‌ಗಳು ಹಾಗೂ ಪಾಲಿಕೆ ಸಿಬ್ಬಂದಿ ಉಪಸ್ಥಿತರಿದ್ದರು.

 


Share this with Friends

Related Post