Wed. Nov 25th, 2026

ಗೊರಗುಂಟೆಪಾಳ್ಯದಿಂದ ಬೊಮ್ಮಸಂದ್ರಕ್ಕೆ ದಾನಿಯ ಹೃದಯ ಯಶಸ್ವಿ ಸಾಗಣೆ:ಇದು ಬಿಎಂಆರ್‌ಸಿಎಲ್‌ನ 8ನೇ ಅಂಗಾಂಗ ಸಾಗಣೆ

Share this with Friends

ಬೆಂಗಳೂರು: ರಾಜಧಾನಿಯ ಸಂಚಾರ ದಟ್ಟಣೆಯ ನಡುವೆಯೂ ಅಮೂಲ್ಯ ಜೀವವೊಂದನ್ನು ಉಳಿಸಲು ‘ನಮ್ಮ ಮೆಟ್ರೋ’ ಮತ್ತೊಮ್ಮೆ ನೆರವಾಗಿದೆ. ಗೊರಗುಂಟೆಪಾಳ್ಯ ಮೆಟ್ರೋ ನಿಲ್ದಾಣದಿಂದ ಬೊಮ್ಮಸಂದ್ರ ಮೆಟ್ರೋ ನಿಲ್ದಾಣದವರೆಗೆ ದಾನಿಯೊಬ್ಬರ ಹೃದಯವನ್ನು ಅತ್ಯಂತ ಸುರಕ್ಷಿತವಾಗಿ ಹಾಗೂ ತ್ವರಿತವಾಗಿ ಸಾಗಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಯಶಸ್ವಿಯಾಗಿ ನೆರವು ನೀಡಿದೆ.

ಮಂಗಳವಾರ (ನ. 24) ಮಧ್ಯಾಹ್ನ 12:20ಕ್ಕೆ ಸ್ಪರ್ಶ್ ಆಸ್ಪತ್ರೆಯ ಐವರು ವೈದ್ಯಕೀಯ ಸಿಬ್ಬಂದಿಯ ತಂಡವು ಹೃದಯ ಸಾಗಣೆ ಪೆಟ್ಟಿಗೆಯೊಂದಿಗೆ ಗೊರಗುಂಟೆಪಾಳ್ಯ ಮೆಟ್ರೋ ನಿಲ್ದಾಣವನ್ನು ಪ್ರವೇಶಿಸಿತು. ನಿಗದಿತ ಪ್ರಮಾಣಿತ ಕಾರ್ಯಾಚರಣಾ ವಿಧಾನದಂತೆ (SOP) ಅಗತ್ಯ ಸುರಕ್ಷತಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ವೈದ್ಯಕೀಯ ತಂಡವು ಮಧ್ಯಾಹ್ನ 12:23ಕ್ಕೆ ಮೆಟ್ರೋ ರೈಲನ್ನು ಹತ್ತಿತು. ಪ್ರಯಾಣದುದ್ದಕ್ಕೂ ಕರ್ತವ್ಯನಿರತ ಮೆಟ್ರೋ ಭದ್ರತಾ ಸಿಬ್ಬಂದಿ ವೈದ್ಯಕೀಯ ತಂಡಕ್ಕೆ ಬೆಂಗಾವಲಾಗಿ ತೆರಳಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಗೊರಗುಂಟೆಪಾಳ್ಯದಿಂದ ಹೊರಟ ರೈಲು ಮಧ್ಯಾಹ್ನ 1:24ಕ್ಕೆ (ಕೇವಲ 1 ಗಂಟೆ 10 ನಿಮಿಷಗಳ ಅವಧಿಯಲ್ಲಿ) ಬೊಮ್ಮಸಂದ್ರ ಮೆಟ್ರೋ ನಿಲ್ದಾಣವನ್ನು ಯಶಸ್ವಿಯಾಗಿ ತಲುಪಿತು. ಬಳಿಕ ಅಲ್ಲಿಂದ ಹೃದಯವನ್ನು ನಾರಾಯಣ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಕ್ ಸೈನ್ಸಸ್ ಆಸ್ಪತ್ರೆಗೆ ರವಾನಿಸಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು.

ಬಿಎಂಆರ್‌ಸಿಎಲ್‌ನ 5ನೇ ಹೃದಯ ಸಾಗಣೆ:

ಬೆಂಗಳೂರು ಮೆಟ್ರೋ ರೈಲು ನಿಗಮವು ಮಾನವ ಅಂಗಾಂಗ ಸಾಗಣೆಗೆ ನೆರವು ನೀಡುತ್ತಿರುವ ಎಂಟನೇ ಸಂದರ್ಭ ಇದಾಗಿದ್ದು, ಹೃದಯ ಸಾಗಣೆ ಮಾಡಿರುವ ಐದನೇ ಯಶಸ್ವಿ ಕಾರ್ಯಾಚರಣೆಯಾಗಿದೆ. ಆರೋಗ್ಯ ಸಂಸ್ಥೆಗಳ ಸಹಯೋಗದೊಂದಿಗೆ ಇಂತಹ ಸಮಯಸಂವೇದಿ ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಜೀವ ಉಳಿಸುವ ಕಾರ್ಯಕ್ಕೆ ನೆರವಾಗಲು ಬಿಎಂಆರ್‌ಸಿಎಲ್ ಸದಾ ಬದ್ಧವಾಗಿದೆ ಎಂದು ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 


Share this with Friends

Related Post