Tue. Nov 24th, 2026

ಸಿಎಂ ಕ್ಲೀನ್ ಚಿಟ್ ಕೊಟ್ಟ ಮೇಲೆ ತನಿಖೆ ಯಾವ ಪುರುಷಾರ್ಥಕ್ಕೆ?: ಸೈಬರ್ ಕ್ರೈಂ ನೋಟಿಸ್‌ಗೆ ಎಚ್.ಡಿ. ಕುಮಾರಸ್ವಾಮಿ ಆಕ್ರೋಶ

Share this with Friends

ನವದೆಹಲಿ: ಹಾಸನ ಜಿಲ್ಲಾಧಿಕಾರಿ ಕಚೇರಿಯ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಸೈಬರ್ ಕ್ರೈಂ ಪೊಲೀಸರು ನೋಟಿಸ್ ನೀಡಿರುವ ವಿಚಾರಕ್ಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಾಟ್‌ನಲ್ಲಿ ಉಲ್ಲೇಖವಾಗಿದ್ದ ಅಧಿಕಾರಿಗೆ ಸ್ವತಃ ಮುಖ್ಯಮಂತ್ರಿಗಳೇ ಕ್ಲೀನ್ ಚಿಟ್ ನೀಡಿದ ಮೇಲೆ ಇನ್ನೇನು ತನಿಖೆ ನಡೆಸುತ್ತೀರಿ ಎಂದು ಅವರು ರಾಜ್ಯ ಸರ್ಕಾರವನ್ನು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ ಡಿಸಿ ಕಚೇರಿಯ ಲಂಚಾವತಾರದ ಕುರಿತು ತಮಗೆ ದೊರೆತ ವಾಟ್ಸಾಪ್ ಚಾಟ್ ದಾಖಲೆಗಳನ್ನು ಆಧರಿಸಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದೇನೆಯೇ ಹೊರತು ಯಾವುದೇ ವೈಯಕ್ತಿಕ ಆರೋಪ ಮಾಡಿಲ್ಲ. ಚಾಟ್‌ನಲ್ಲಿ ಹೆಸರಿಸಲಾದ ವ್ಯಕ್ತಿಗಳ ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಿ ತನಿಖೆ ನಡೆಸುವಂತೆ ಒತ್ತಾಯಿಸಿದ್ದೆ. ಆದರೆ ಅದೇ ದಿನ ಮುಖ್ಯಮಂತ್ರಿಗಳು ಸಂಬಂಧಪಟ್ಟ ಅಧಿಕಾರಿಗೆ ಕ್ಲೀನ್ ಚಿಟ್ ನೀಡಿದರು. ಹೀಗಿರುವಾಗ ನನ್ನನ್ನು ವಿಚಾರಣೆ ನಡೆಸಲು ಮತ್ತು ನೋಟಿಸ್ ಕೊಡಲು ಪೊಲೀಸರು ಯಾರು? ನನ್ನಿಂದ ಯಾವ ಮಾಹಿತಿ ಪಡೆಯುತ್ತಾರೆ ಎಂದು ಕಿಡಿಕಾರಿದರು.

ಡಿಸಿ ಪಿಎ ಮೊಬೈಲ್ ಜಪ್ತಿಗೆ ಒತ್ತಾಯ:

ಯಾರಾದರೂ 10 ರೂಪಾಯಿ ಲಂಚ ಕೇಳಿದರೂ ಗಮನಕ್ಕೆ ತನ್ನಿ ಎಂದು ಮುಖ್ಯಮಂತ್ರಿಗಳು ಹೇಳುತ್ತಾರೆ. ಅದರಂತೆ ನನಗೆ ಬಂದ ಮಾಹಿತಿಯನ್ನು ನೀಡಿ ತನಿಖೆ ನಡೆಸಿ ಎಂದಿದ್ದೇನೆ. ನನಗೆ ನೋಟಿಸ್ ಕೊಟ್ಟು ಯಾವುದೇ ಪ್ರಯೋಜನವಿಲ್ಲ. ಜಿಲ್ಲಾಧಿಕಾರಿಗಳ ಆಪ್ತ ಸಹಾಯಕನ (ಪಿಎ) ಮೂಲ ಮೊಬೈಲ್ ಫೋನ್ ಅನ್ನು ಜಪ್ತಿ ಮಾಡಿ ಪರಿಶೀಲಿಸಿದರೆ ಎಲ್ಲಾ ಸತ್ಯಾಸತ್ಯತೆ ಹೊರಬರಲಿದೆ. ಅಧಿಕಾರಿಗಳನ್ನು ಮುಂದಿಟ್ಟುಕೊಂಡು ನನ್ನ ಬಳಿ ಆಟವಾಡಲು ಬರಬೇಡಿ ಎಂದು ಎಚ್ಚರಿಸಿದ ಕುಮಾರಸ್ವಾಮಿ, ನೋಟಿಸ್ ಕೊಡಲು ಯಾರು ಕಳುಹಿಸಿದ್ದಾರೆ ಎಂಬುದು ತಮಗೆ ಚೆನ್ನಾಗಿ ತಿಳಿದಿದೆ ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

2028ಕ್ಕೆ ಎನ್‌ಡಿಎ ಸರ್ಕಾರ ತರುವುದೇ ಗುರಿ:

2028ರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಅಧಿಕಾರಕ್ಕೆ ಬರಲಿದ್ದು, ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅದು ಅವರ ವೈಯಕ್ತಿಕ ಅಭಿಪ್ರಾಯ. ಇದೆಲ್ಲವೂ ಕೂಸು ಹುಟ್ಟುವ ಮುನ್ನವೇ ಕುಲಾಯಿ ಹೊಲಿಸಿದಂತೆ. ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಸಮ್ಮಿಶ್ರದ ಎನ್‌ಡಿಎ ಸರ್ಕಾರವನ್ನು ಅಧಿಕಾರಕ್ಕೆ ತರುವುದಷ್ಟೇ ನನ್ನ ಏಕೈಕ ಗುರಿ ಎಂದು ಸ್ಪಷ್ಟಪಡಿಸಿದರು.

ಹಿರಿಯೂರು ಉಪಚುನಾವಣೆ:

ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ ಕುರಿತು ನವೆಂಬರ್ 26ರಂದು ಮಹತ್ವದ ಸಭೆ ನಡೆಯಲಿದ್ದು, ಅಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಕ್ಷೇತ್ರದ ವಾಸ್ತವ ವರದಿ (ಗ್ರೌಂಡ್ ರಿಪೋರ್ಟ್) ಆಧರಿಸಿ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡಲಾಗುವುದು. ಒಟ್ಟಿನಲ್ಲಿ ಎನ್‌ಡಿಎ ಅಭ್ಯರ್ಥಿಯನ್ನು ಗೆಲ್ಲಿಸುವುದೇ ನಮ್ಮ ಮುಖ್ಯ ಉದ್ದೇಶ ಎಂದು ಕುಮಾರಸ್ವಾಮಿ ತಿಳಿಸಿದರು.

 

 


Share this with Friends

Related Post