Thu. Jun 25th, 2026

ಒಸಿ ಇಲ್ಲದ ಮನೆಗಳಿಗೆ ಶಾಶ್ವತ ವಿದ್ಯುತ್‌ ಸಂಪರ್ಕ: ಬೆಸ್ಕಾಂ ವ್ಯಾಪ್ತಿಯ ಗ್ರಾಹಕರಿಗೆ ಜುಲೈ 6ರ ಕೊನೆಯ ಗಡುವು, ರಜೆ ದಿನಗಳಲ್ಲೂ ಕಚೇರಿ ಓಪನ್

Share this with Friends

ಬೆಂಗಳೂರು:ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ವ್ಯಾಪ್ತಿಯಲ್ಲಿ ವಸತಿ ಕಟ್ಟಡಗಳನ್ನು ನಿರ್ಮಿಸಿ, ಸ್ವಾಧೀನಾನುಭವ ಪ್ರಮಾಣಪತ್ರ (OC) ಇಲ್ಲದೆ ಸಂಕಷ್ಟ ಎದುರಿಸುತ್ತಿದ್ದ ಮನೆ ಮಾಲೀಕರಿಗೆ ರಾಜ್ಯ ಸರ್ಕಾರ ಮತ್ತು ಬೆಸ್ಕಾಂ ಬಿಗ್ ರಿಲೀಫ್ ನೀಡಿವೆ. 2400 ಚದರ ಅಡಿವರೆಗಿನ ನಿವೇಶನಗಳಲ್ಲಿ ನಿರ್ಮಿಸಲಾಗಿರುವ ವಸತಿ ಕಟ್ಟಡಗಳಿಗೆ ಒಸಿ ನಿಬಂಧನೆಯಿಂದ ಒಂದು ಬಾರಿಯ ವಿಶೇಷ ವಿನಾಯಿತಿ ನೀಡಲಾಗಿದ್ದು, ಜುಲೈ 6, 2026ರ ಒಳಗೆ ಶಾಶ್ವತ ವಿದ್ಯುತ್ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸುವಂತೆ ಬೆಸ್ಕಾಂ ಕೋರಿದೆ.

ಸರ್ಕಾರದ ನಿಯಮಾವಳಿಗಳ ಪ್ರಕಾರ, ಜಿ+3 ಅಥವಾ ಸಿಲ್ಟ್‌ ಪಾರ್ಕಿಂಗ್‌ ಸೇರಿದಂತೆ 4 ಮಹಡಿಗಳಿರುವ ವಸತಿ ಕಟ್ಟಡಗಳ ಮಾಲೀಕರು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು. ಮೇ 31, 2026ರಂದು ಅಥವಾ ಅದಕ್ಕೂ ಮುಂಚಿತವಾಗಿ ನಿರ್ಮಾಣ ಕಾರ್ಯ ಪೂರ್ಣಗೊಂಡಿರುವ ಕಟ್ಟಡಗಳಿಗೆ ಮಾತ್ರ ಈ ವಿನಾಯಿತಿ ಅನ್ವಯವಾಗುತ್ತದೆ. ಜೂನ್ 22ರಂದು ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದ ಸರ್ಕಾರ, ಅರ್ಹ ಫಲಾನುಭವಿಗಳಿಗೆ ಅರ್ಜಿ ಸಲ್ಲಿಸಲು ಕೇವಲ 15 ದಿನಗಳ ಸೀಮಿತ ಕಾಲಾವಕಾಶವನ್ನು ನೀಡಿದೆ.

ರಜೆ ದಿನಗಳಲ್ಲೂ ಬೆಸ್ಕಾಂ ಕಚೇರಿಗಳು ಓಪನ್:

ಅಲ್ಪಾವಧಿಯ ಗಡುವು ಇರುವುದರಿಂದ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಬೆಸ್ಕಾಂ ಮಹತ್ವದ ನಿರ್ಧಾರ ಕೈಗೊಂಡಿದೆ. ಮುಂಬರುವ ಸಾರ್ವತ್ರಿಕ ರಜೆ ದಿನಗಳಾದ ಜೂನ್ 26 (ಮೊಹರಂ ಕೊನೆದಿನ), ಜೂನ್ 27 (ನಾಲ್ಕನೇ ಶನಿವಾರ), ಜೂನ್ 28 (ಭಾನುವಾರ) ಮತ್ತು ಜುಲೈ 5 (ಭಾನುವಾರ) ರಂದೂ ಸಹ ಬೆಸ್ಕಾಂನ ಎಲ್ಲಾ ಉಪ ವಿಭಾಗ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.

ಅರ್ಹ ಕಟ್ಟಡ ಮಾಲೀಕರು ತಮ್ಮ ಹತ್ತಿರದ ಬೆಸ್ಕಾಂ ಕಚೇರಿಗೆ ನೇರವಾಗಿ ಭೇಟಿ ನೀಡಿ ಅಥವಾ ಬೆಸ್ಕಾಂನ ಅಧಿಕೃತ ಆನ್‌ಲೈನ್ ಜಾಲತಾಣದ (Portal) ಮೂಲಕ ಜುಲೈ 6ರೊಳಗೆ ಅರ್ಜಿಗಳನ್ನು ಸಲ್ಲಿಸಿ ಶಾಶ್ವತ ವಿದ್ಯುತ್ ಸಂಪರ್ಕದ ಸದುಪಯೋಗ ಪಡೆದುಕೊಳ್ಳಬಹುದು ಎಂದು ಬೆಸ್ಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

ಜಿಯೋ ಟ್ಯಾಗ್ ಫೋಟೋ ಕಡ್ಡಾಯ:

ಸ್ವಾಧೀನಾನುಭವ ಪ್ರಮಾಣಪತ್ರ (OC) ವಿನಾಯಿತಿಯಡಿ 2,400 ಚದರ ಅಡಿವರೆಗಿನ ವಸತಿ ಕಟ್ಟಡಗಳಿಗೆ ಶಾಶ್ವತ ವಿದ್ಯುತ್ ಸಂಪರ್ಕ ಕಲ್ಪಿಸಲು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಅಧಿಕೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಅರ್ಹ ಕಟ್ಟಡಗಳ ಮಾಲೀಕರು ಜುಲೈ 6, 2026ರ ಒಳಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ಮೂರು ಪ್ರಮುಖ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಎಲ್ಲಾ ಪ್ರಕರಣಗಳಿಗೂ ಮೇ 31, 2026ರೊಳಗೆ ಕಟ್ಟಡ ನಿರ್ಮಾಣ ಪೂರ್ಣಗೊಂಡಿರುವುದು ಕಡ್ಡಾಯವಾಗಿದೆ.

ಬೆಸ್ಕಾಂ ಬಿಡುಗಡೆ ಮಾಡಿರುವ ಮೂರು ಹಂತದ ಮಾರ್ಗಸೂಚಿಗಳು:

ಈಗಾಗಲೇ ಶಾಶ್ವತ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿರುವ ಪ್ರಕರಣಗಳು:
ಒಂದು ವೇಳೆ ಕಟ್ಟಡ ಪೂರ್ಣಗೊಂಡು, ಶಾಶ್ವತ ವಿದ್ಯುತ್ ಪ್ರಕ್ರಿಯೆಗಾಗಿ ಈಗಾಗಲೇ ಅರ್ಜಿ ಸಲ್ಲಿಸಿದ್ದರೆ, ಮಾಲೀಕರು ಸೇವಾ ಸಂಪರ್ಕ ಕಲ್ಪಿಸುವ ಬೆಸ್ಕಾಂ ಅಧಿಕಾರಿಗಳ ಸಮ್ಮುಖದಲ್ಲಿ ತಮ್ಮ ಕಟ್ಟಡದ ಜಿಯೋ ಟ್ಯಾಗ್ (Geo-tagged) ಆಧರಿತ ಫೋಟೋವನ್ನು ಕಚೇರಿಗೆ ಸಲ್ಲಿಸಿ ಕನೆಕ್ಷನ್ ಪಡೆದುಕೊಳ್ಳಬಹುದು.

ತಾತ್ಕಾಲಿಕ ವಿದ್ಯುತ್ ಸಂಪರ್ಕ ಮಾತ್ರ ಹೊಂದಿರುವ ಪ್ರಕರಣಗಳು:
ಮೇ 31ರೊಳಗೆ ಮನೆ ನಿರ್ಮಾಣ ಮುಗಿದು, ಪ್ರಸ್ತುತ ಕೇವಲ ಕನ್ಸ್ಟ್ರಕ್ಷನ್ ಅಥವಾ ತಾತ್ಕಾಲಿಕ (Temporary) ಮೀಟರ್ ಬಳಸುತ್ತಿದ್ದು, ಶಾಶ್ವತ ಸಂಪರ್ಕಕ್ಕೆ ಇನ್ನು ಅರ್ಜಿ ಸಲ್ಲಿಸದಿದ್ದರೆ, ಮಾಲೀಕರು ಕಟ್ಟಡದ ಮುಂದೆ ನಿಂತು ತೆಗೆಸಿದ ಜಿಯೋ ಟ್ಯಾಗ್ ಫೋಟೋವನ್ನು ಲಗತ್ತಿಸಬೇಕು. ನಂತರ ಹತ್ತಿರದ ಬೆಸ್ಕಾಂ ಉಪ ವಿಭಾಗ ಕಚೇರಿಗೆ ಭೇಟಿ ನೀಡಿ ಅಥವಾ ಆನ್‌ಲೈನ್ ಪೋರ್ಟಲ್ ಮೂಲಕ ಹೊಸದಾಗಿ ಅರ್ಜಿ ನೋಂದಾಯಿಸಬೇಕು.

ಯಾವುದೇ ಸಂಪರ್ಕ ಪಡೆಯದ ಹೊಸ ಪ್ರಕರಣಗಳು:
ನಿಗದಿತ ಅವಧಿಯೊಳಗೆ ವಸತಿ ಕಟ್ಟಡ ಸಂಪೂರ್ಣ ಸಿದ್ಧವಾಗಿದ್ದರೂ, ಇದುವರೆಗೆ ಯಾವುದೇ ತಾತ್ಕಾಲಿಕ ಅಥವಾ ಶಾಶ್ವತ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸದ ಮಾಲೀಕರು ನೇರವಾಗಿ ಬೆಸ್ಕಾಂ ಕಚೇರಿಗೆ ಭೇಟಿ ನೀಡಬೇಕು. ಈ ಸಂದರ್ಭದಲ್ಲೂ ಕಟ್ಟಡದ ಮುಂಭಾಗದ ಜಿಯೋ ಟ್ಯಾಗ್ ಆಧರಿತ ಭಾವಚಿತ್ರವನ್ನು ಕಡ್ಡಾಯವಾಗಿ ಸಲ್ಲಿಸಿ ಹೊಸದಾಗಿ ಶಾಶ್ವತ ವಿದ್ಯುತ್ ಸಂಪರ್ಕಕ್ಕಾಗಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ.

 

 


Share this with Friends

Related Post