ಬೆಂಗಳೂರು:ಐಪಿಎಲ್ ಅಬ್ಬರದ ನಡುವೆ ಸಿಲಿಕಾನ್ ಸಿಟಿಯ ಹೃದಯಭಾಗದಲ್ಲಿ ದೊಡ್ಡ ಸಂಚೊಂದು ಬಯಲಾಗಿದೆ! ಸಾವಿರಾರು ಜನ ಮೈದಾನದಲ್ಲಿ ಮೈಮರೆತು ಕುಳಿತಿದ್ದಾಗ, ಅತ್ತ ಕ್ರೀಡಾಂಗಣದ ಕಣ್ಗಾವಲು ವ್ಯವಸ್ಥೆಯನ್ನೇ ಕುರುಡು ಮಾಡುವ ಪ್ರಯತ್ನ ನಡೆದಿದೆ. ಬೆವರಿಳಿಸುವ ಈ ಕ್ರೈಂ ಸ್ಟೋರಿಯ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.
ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಮತ್ತು ಗುಜರಾತ್ ಟೈಟಾನ್ಸ್ ನಡುವೆ ಕಾದಾಟ ನಡೆಯುತ್ತಿದ್ದರೆ, ಅತ್ತ ಸರ್ವರ್ ರೂಮ್‌ನಲ್ಲಿ ಅಸಲಿ ‘ಗೇಮ್’ ಶುರುವಾಗಿತ್ತು. ಕ್ರೀಡಾಂಗಣದ ಮೂಲೆ ಮೂಲೆಯನ್ನು ಕಾಯುತ್ತಿದ್ದ ಬರೋಬ್ಬರಿ 240 ಸಿಸಿಟಿವಿ ಕ್ಯಾಮೆರಾಗಳು ಏಕಾಏಕಿ ಸ್ತಬ್ಧವಾಗಿದ್ದವು. ಇದು ಕೇವಲ ತಾಂತ್ರಿಕ ದೋಷವಲ್ಲ, ಬದಲಿಗೆ ವ್ಯವಸ್ಥಿತವಾಗಿ ನಡೆದ ‘ವಿಧ್ವಂಸಕ ಕೃತ್ಯ’ ಎಂಬುದು ಈಗ ಪೊಲೀಸರ ತನಿಖೆಯಿಂದ ಬಹಿರಂಗವಾಗಿದೆ.
ಯಾರು ಈ ‘ಬ್ಲ್ಯಾಕ್ ಔಟ್’ ಕಿಂಗ್‌ಗಳು?
ಕಬ್ಬನ್ ಪಾರ್ಕ್ ಪೊಲೀಸರ ಬಲೆಗೆ ಬಿದ್ದಿರುವ ಆರೋಪಿಗಳಾದ ಮಂಜುನಾಥ್ ಮತ್ತು ಅಬ್ದುಲ್ ಕಲಾಂ, ಇದೇ ಕ್ರೀಡಾಂಗಣದ ಸಿಸಿಟಿವಿ ನಿರ್ವಹಣಾ ಕೆಲಸದಲ್ಲಿ ತೊಡಗಿದ್ದವರು. ಬೇಲಿ ಎದ್ದೇ ಹೊಲ ಮೇಯ್ದಂತೆ, ರಕ್ಷಣಾ ಕವಚವಾಗಿದ್ದ ಕೇಬಲ್‌ಗಳನ್ನೇ ಈ ಕಿಡಿಗೇಡಿಗಳು ಕತ್ತರಿಸಿ ಹಾಕಿದ್ದಾರೆ.
ಕ್ರೈಂ ಹಿಂದಿನ ‘ಮಾಸ್ಟರ್ ಪ್ಲಾನ್’ ಮತ್ತು ಮೋಟಿವ್:
ಹಣದ ಕಿರಿಕ್: ಸಿಸಿಟಿವಿ ಅಳವಡಿಸಿದ ಸಂಸ್ಥೆಯಿಂದ ಆರೋಪಿಗಳಿಗೆ ಬರಬೇಕಿದ್ದ 10 ಲಕ್ಷ ರೂಪಾಯಿ ಬಾಕಿ ಉಳಿದಿತ್ತು.
ಸೇಡಿನ ಹಾದಿ: ಹಲವು ಬಾರಿ ಕೇಳಿದರೂ ಹಣ ಸಿಗದಿದ್ದಾಗ, ಪಂದ್ಯದ ದಿನವೇ ವ್ಯವಸ್ಥೆಯನ್ನು ಹದಗೆಡಿಸಿ ಕಂಪನಿಗೆ ಮುಖಭಂಗ ಮಾಡಲು ಈ ಸ್ಕೆಚ್ ಹಾಕಿದ್ದರು.
ಭದ್ರತಾ ಲೋಪ: ಸರ್ವರ್ ರೂಮ್‌ಗೆ ಅನಾಯಾಸವಾಗಿ ನುಗ್ಗಿದ ಆರೋಪಿಗಳು, ಅಲ್ಲಿನ ಡೇಟಾ ಕೇಬಲ್ ಮತ್ತು ಎನ್‌ವಿಆರ್ (NVR) ಯಂತ್ರಗಳನ್ನು ಜಖಂಗೊಳಿಸಿ ಕಣ್ಗಾವಲು ವ್ಯವಸ್ಥೆಯನ್ನೇ ನಾಶಮಾಡಿದ್ದರು.
ಪಂದ್ಯದ ವೇಳೆ ಸಿಸಿಟಿವಿಗಳು ಆಫ್ ಆಗುತ್ತಿದ್ದಂತೆ ಅಲರ್ಟ್ ಆದ ಭದ್ರತಾ ಪಡೆ, ಕೂಡಲೇ ತಾಂತ್ರಿಕ ತಂಡದೊಂದಿಗೆ ಸರ್ವರ್ ರೂಮ್‌ಗೆ ಧಾವಿಸಿತ್ತು. ಅಲ್ಲಿ ನಡೆದಿದ್ದ ಕೃತ್ಯ ನೋಡಿ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದರು. ತಕ್ಷಣ ಕಾರ್ಯಾಚರಣೆಗಿಳಿದ ಪೊಲೀಸರು ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಇಬ್ಬರನ್ನೂ ಹೆಡೆಮುರಿ ಕಟ್ಟಿದ್ದಾರೆ.
ಹಣದ ವಿಚಾರಕ್ಕಾಗಿ ಇಡೀ ಕ್ರೀಡಾಂಗಣದ ಮತ್ತು ಸಾವಿರಾರು ಪ್ರೇಕ್ಷಕರ ಸುರಕ್ಷತೆಯನ್ನು ಅಪಾಯಕ್ಕೆ ತಳ್ಳಿದ ಈ ಆರೋಪಿಗಳು ಈಗ ಜೈಲು ಪಾಲಾಗಿದ್ದಾರೆ. ಆದರೆ, ಹೈ ಸೆಕ್ಯೂರಿಟಿ ಇರುವ ಜಾಗದಲ್ಲೇ ಇಂತಹ ಕೃತ್ಯ ನಡೆದಿದ್ದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

