ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಏಪ್ರಿಲ್ 23 ಮತ್ತು 24ರಂದು ನಡೆಸಲಾದ ಸಾಮಾನ್ಯ ಪ್ರವೇಶ ಪರೀಕ್ಷೆಯ (CET-2026) ಎಲ್ಲಾ ವಿಷಯಗಳ ತಾತ್ಕಾಲಿಕ ಕೀ ಉತ್ತರಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ.
ಆಕ್ಷೇಪಣೆಗೆ ಏ.30 ಕೊನೆ ದಿನ
ಪ್ರಕಟಿತ ಕೀ ಉತ್ತರಗಳಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಏನಾದರೂ ಆಕ್ಷೇಪಣೆಗಳನ್ನು ಹೊಂದಿದ್ದರೆ, ಅವುಗಳನ್ನು ಸಲ್ಲಿಸಲು ಏಪ್ರಿಲ್ 30ರವರೆಗೆ ಕಾಲಾವಕಾಶ ನೀಡಲಾಗಿದೆ. ಆಕ್ಷೇಪಣೆ ಸಲ್ಲಿಸುವವರು ವೆಬ್‌ಸೈಟ್‌ನಲ್ಲಿ ನೀಡಿರುವ ಲಿಂಕ್ ಬಳಸಿ ಆನ್‌ಲೈನ್ ಮೂಲಕವೇ ದೂರು ದಾಖಲಿಸಬೇಕು. ಆಕ್ಷೇಪಣೆ ಸಲ್ಲಿಸುವಾಗ ಪ್ರಶ್ನೆ ಸಂಖ್ಯೆ, ವರ್ಷನ್ ಕೋಡ್ ಹಾಗೂ ಪೂರಕ ದಾಖಲೆಗಳನ್ನು ನಿಖರವಾಗಿ ಒದಗಿಸುವುದು ಕಡ್ಡಾಯವಾಗಿದೆ. ಸರಿಯಾದ ಮಾಹಿತಿ ಇಲ್ಲದ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಮತ್ತು ತಜ್ಞರ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.
ಪಿಜಿಸಿಇಟಿ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
ಇದೇ ವೇಳೆ, ಎಂಬಿಎ, ಎಂಸಿಎ, ಎಂ.ಟೆಕ್ ಸೇರಿದಂತೆ ವಿವಿಧ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಕ್ಕೆ (PGCET) ಅರ್ಜಿ ಸಲ್ಲಿಸುವ ಅವಧಿಯನ್ನು ಕೂಡ ಏಪ್ರಿಲ್ 30ರವರೆಗೆ ವಿಸ್ತರಿಸಲಾಗಿದೆ. ಅಭ್ಯರ್ಥಿಗಳ ಒತ್ತಾಯದ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಇದೇ ಕೊನೆಯ ಅವಕಾಶವಾಗಲಿದೆ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.
ಅರ್ಜಿ ಸಲ್ಲಿಸಿದವರು ಮೇ 5ರ ಒಳಗಾಗಿ ನಿಗದಿತ ಶುಲ್ಕವನ್ನು ಪಾವತಿಸಬೇಕಿದೆ. ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಕೆಇಎ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಲು ಸೂಚಿಸಲಾಗಿದೆ.

