ತುಮಕೂರು: ರಾಜ್ಯದ ಕಾಂಗ್ರೆಸ್ ಸರ್ಕಾರವು ಆರ್ಥಿಕ ವ್ಯವಸ್ಥೆಯನ್ನು ಸಂಪೂರ್ಣವಾಗಿ ಹದಗೆಡಿಸಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ಹಣಕಾಸಿನ ಕೊರತೆಯಿಂದಾಗಿ ಸರ್ಕಾರವು ‘ಗ್ರೇಟರ್ ಬೆಂಗಳೂರು’ ಚುನಾವಣೆ ನಡೆಸಲು ಹಿಂದೇಟು ಹಾಕುತ್ತಿದೆ ಎಂದು ಅವರು ನೇರ ಆರೋಪ ಮಾಡಿದ್ದಾರೆ.
ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಸೊರವನಹಳ್ಳಿ ಮತ್ತು ಕುಣಿಗಲ್ ತಾಲ್ಲೂಕಿನ ಮಾದಪ್ಪನಹಳ್ಳಿ ಗ್ರಾಮಗಳಲ್ಲಿ ನಡೆದ ನೂತನ ದೇವಾಲಯಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಖಜಾನೆ ಖಾಲಿ, ಸಾಲದ ಹೊರೆ ಹೆಚ್ಚು
ಸರ್ಕಾರದ ಉಚಿತ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದ ಸಚಿವರು, “ಗ್ಯಾರಂಟಿಗಳನ್ನು ನೀಡುವ ಭರದಲ್ಲಿ ಸರ್ಕಾರ ರಾಜ್ಯದ ಖಜಾನೆಯನ್ನು ಖಾಲಿ ಮಾಡಿದೆ. ರಾಜ್ಯದ ಒಟ್ಟು ಸಾಲ ಈಗ 7,26,000 ಕೋಟಿ ರೂಪಾಯಿಗಳನ್ನು ಮೀರಿದೆ. ಇದರಿಂದಾಗಿ ಇಂದು ಪ್ರತಿಯೊಬ್ಬ ಕನ್ನಡಿಗನ ಮೇಲೆ ಸರಾಸರಿ ಒಂದು ಲಕ್ಷ ರೂಪಾಯಿಗಳ ಸಾಲದ ಹೊರೆಯಿದೆ,” ಎಂದು ಕಳವಳ ವ್ಯಕ್ತಪಡಿಸಿದರು.
ಚುನಾವಣೆ ಮುಂದೂಡಿಕೆಗೆ ಆರ್ಥಿಕ ಸಂಕಷ್ಟವೇ ಕಾರಣ?
ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಚುನಾವಣೆಯನ್ನು ಮುಂದೂಡಲು ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿರುವ ವಿಚಾರವನ್ನು ಪ್ರಸ್ತಾಪಿಸಿದ ಕುಮಾರಸ್ವಾಮಿ, “ಚುನಾವಣಾ ಆಯೋಗವೇ ಹಣದ ಕೊರತೆಯ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಿದೆ. ಸರ್ಕಾರ ಹಣ ಬಿಡುಗಡೆ ಮಾಡದ ಕಾರಣ ಚುನಾವಣೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂಬುದು ರಾಜ್ಯದ ದುಸ್ಥಿತಿಯನ್ನು ತೋರಿಸುತ್ತದೆ,” ಎಂದರು.
ಇದೇ ಕಾರಣಕ್ಕೆ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳೂ ವಿಳಂಬವಾಗುತ್ತಿವೆ. ಆರ್ಥಿಕವಾಗಿ ಹದಗೆಟ್ಟಿರುವ ಈ ಸರ್ಕಾರಕ್ಕೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸುವ ಶಕ್ತಿಯಿಲ್ಲ ಎಂದು ಅವರು ಲೇವಡಿ ಮಾಡಿದರು.
ಜನ ಸಂಕಷ್ಟದಲ್ಲಿದ್ದರೆ ಸರ್ಕಾರ ‘ಕುರ್ಚಿ’ ಕಾಳಗದಲ್ಲಿ ಮಗ್ನವಾಗಿದೆ:
ರಾಜ್ಯದ ಜನರು ಒಂದೆಡೆ ಕುಡಿಯುವ ನೀರಿಲ್ಲದೆ ತತ್ತರಿಸುತ್ತಿದ್ದರೆ, ಇನ್ನೊಂದೆಡೆ ಅಕಾಲಿಕ ಮಳೆಯಿಂದ ಬೆಳೆ ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ಜನರ ನೆರವಿಗೆ ಧಾವಿಸಬೇಕಾದ ಕಾಂಗ್ರೆಸ್ ಸರ್ಕಾರ ಸಿಎಂ ಕುರ್ಚಿ ಕಾಳಗದಲ್ಲಿ ಮೈಮರೆತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿ ರಾಜ್ಯ ಸರ್ಕಾರದ ಆಡಳಿತ ವೈಖರಿ ಮತ್ತು ಆರ್ಥಿಕ ಶಿಸ್ತಿನ ಬಗ್ಗೆ ಹರಿಹಾಯ್ದರು.
ಜನರ ಬಗ್ಗೆ ಕನಿಕರವಿಲ್ಲದ ಸರ್ಕಾರ
“ಬಿಸಿಲಿನ ತಾಪ ಮತ್ತು ಉಷ್ಣಗಾಳಿಗೆ ಜನರು ಹೈರಾಣಾಗಿದ್ದಾರೆ. ಆಲಿಕಲ್ಲು ಮಳೆಯಿಂದಾಗಿ ರೈತರ ಬೆಳೆಗಳು ನಾಶವಾಗಿವೆ. ಆದರೆ ಸರ್ಕಾರ ಸಂತ್ರಸ್ತರ ಬಗ್ಗೆ ಸಾಂತ್ವನದ ಮಾತುಗಳನ್ನಾಡಲೂ ಮನಸ್ಸು ಮಾಡುತ್ತಿಲ್ಲ. ಈ ಸರ್ಕಾರಕ್ಕೆ ಜನರ ಬಗ್ಗೆ ಕನಿಷ್ಠ ಭಯಭಕ್ತಿಯೂ ಇಲ್ಲದಂತಾಗಿದೆ” ಎಂದು ಅವರು ದೂರಿದರು.
ಸ್ವಾಭಿಮಾನಿ ಕನ್ನಡಿಗರನ್ನು ಪರಾವಲಂಬಿ ಮಾಡಿದರು
ಗ್ಯಾರಂಟಿ ಯೋಜನೆಗಳ ಬಗ್ಗೆ ವಾಗ್ದಾಳಿ ನಡೆಸಿದ ಸಚಿವರು, “ಕೇವಲ ಉಚಿತ ಯೋಜನೆಗಳಿಂದಲೇ ಜೀವನ ಉತ್ತಮವಾಗುತ್ತದೆ ಎಂದು ಸರ್ಕಾರ ನಂಬಿದೆ. ಆದರೆ ವಾಸ್ತವದಲ್ಲಿ ಸ್ವಾಭಿಮಾನಿ ಜನರನ್ನು ಪರಾವಲಂಬಿಗಳನ್ನಾಗಿ ಮಾಡಿ, ಕೈಯೊಡ್ಡಿ ಬೇಡುವ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ. ಗ್ಯಾರಂಟಿ ಹೆಸರಲ್ಲಿ ಖಜಾನೆ ಖಾಲಿ ಮಾಡಲಾಗುತ್ತಿದೆ” ಎಂದು ಕಿಡಿಕಾರಿದರು.
ಅಭಿವೃದ್ಧಿ ಹಿಮ್ಮುಖ ಚಲನೆ
ಭಾರತವು ಜಗತ್ತಿನ ಮೂರನೇ ಬೃಹತ್ ಆರ್ಥಿಕ ಶಕ್ತಿಯಾಗುವತ್ತ ಮುನ್ನುಗ್ಗುತ್ತಿದ್ದರೆ, ಕರ್ನಾಟಕ ಮಾತ್ರ ಕಾಂಗ್ರೆಸ್ ಆಡಳಿತದಲ್ಲಿ ಅಭಿವೃದ್ಧಿಯ ಪಥದಿಂದ ಹಿಂದೆ ಸರಿಯುತ್ತಿದೆ. ನೌಕರರಿಗೆ ಸಂಬಳ ನೀಡಲೂ ಪರದಾಡುವಂತಹ ದಾರುಣ ಸ್ಥಿತಿಗೆ ರಾಜ್ಯವನ್ನು ತಲುಪಿಸಲಾಗಿದೆ ಎಂದು ಹೆಚ್‌ಡಿಕೆ ಆತಂಕ ವ್ಯಕ್ತಪಡಿಸಿದರು.

