Sat. Jun 6th, 2026

ಹರಿಹರ ಪಂಚಮಸಾಲಿ ಪೀಠದಲ್ಲಿ ಸಂಘರ್ಷ ಸ್ಫೋಟ: ಮೂವರು ಟ್ರಸ್ಟಿಗಳ ಉಚ್ಚಾಟನೆ

Share this with Friends

ದಾವಣಗೆರೆ: ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಆಂತರಿಕ ಕಲಹ ಈಗ ಬೀದಿಗೆ ಬಂದಿದೆ. ಏಪ್ರಿಲ್ 13ರಿಂದಲೇ ಜಾರಿಗೆ ಬರುವಂತೆ ಪೀಠದ ಮೂವರು ಪ್ರಮುಖ ಟ್ರಸ್ಟಿಗಳನ್ನು ಉಚ್ಚಾಟಿಸಿರುವುದಾಗಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ಘೋಷಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಸೋಮನಗೌಡ ಎಂ. ಪಾಟೀಲ್, “ಮಠದ ಘನತೆಗೆ ಚ್ಯುತಿ ತರುವ ರೀತಿಯಲ್ಲಿ ನಡೆದುಕೊಂಡ ಹಿನ್ನೆಲೆಯಲ್ಲಿ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ, ಸದಸ್ಯರಾದ ಚಂದ್ರಶೇಖರ್ ಪೂಜಾರ್ ಮತ್ತು ಜ್ಯೋತಿ ಪ್ರಕಾಶ್ ಅವರನ್ನು ಟ್ರಸ್ಟ್‌ನಿಂದ ವಜಾಗೊಳಿಸಲಾಗಿದೆ,” ಎಂದು ತಿಳಿಸಿದರು.

ಸಂಘರ್ಷದ ಕೇಂದ್ರಬಿಂದು ಲೆಕ್ಕಪತ್ರ:

ಮಠದ ಹಣಕಾಸು ವ್ಯವಹಾರಗಳಲ್ಲಿ ಪಾರದರ್ಶಕತೆ ಇಲ್ಲದಿರುವುದು ಮತ್ತು ಬೈಲಾ ನಿಯಮಗಳನ್ನು ಉಲ್ಲಂಘಿಸಿರುವುದು ಈ ಉಚ್ಚಾಟನೆಗೆ ಪ್ರಮುಖ ಕಾರಣ ಎಂದು ಹೇಳಲಾಗಿದೆ. ವಚನಾನಂದ ಶ್ರೀಗಳ ಬೆಂಬಲಿಗರು ‘ಲೆಕ್ಕ ಕೊಡಿ’ ಅಭಿಯಾನ ಆರಂಭಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಈ ಹಿಂದೆ ಇದೇ ಟ್ರಸ್ಟಿಗಳು ವಚನಾನಂದ ಶ್ರೀಗಳನ್ನು ಪೀಠದಿಂದ ಉಚ್ಚಾಟಿಸುವ ನಿರ್ಧಾರ ಕೈಗೊಂಡಿದ್ದರು. ಅದಕ್ಕೆ ಪ್ರತಿಯಾಗಿ ಈಗ ರಾಜ್ಯ ಸಂಘವು ಟ್ರಸ್ಟಿಗಳನ್ನೇ ಉಚ್ಚಾಟಿಸಿ ತಿರುಗೇಟು ನೀಡಿದೆ.

ಮುಂದುವರಿದ ಬಿಗುವಿನ ವಾತಾವರಣ:

ಈ ಉಚ್ಚಾಟನೆಯಿಂದಾಗಿ ಪೀಠದ ಆಡಳಿತ ಮಂಡಳಿ ಮತ್ತು ಮಠದ ಭಕ್ತರ ನಡುವೆ ಎರಡು ಬಣಗಳಾಗಿವೆ. ಏಪ್ರಿಲ್ 27ರಂದು ಮಠದ ಆವರಣದಲ್ಲಿ ಬಹಿರಂಗವಾಗಿ ಲೆಕ್ಕಪತ್ರ ಸಲ್ಲಿಕೆ ಮಾಡುವುದಾಗಿ ಟ್ರಸ್ಟ್ ಮಂಡಳಿ ತಿಳಿಸಿದ್ದು, ಮುಂದಿನ ಬೆಳವಣಿಗೆಗಳು ಕುತೂಹಲ ಮೂಡಿಸಿವೆ.

 


Share this with Friends

Related Post