ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಮಾಸಿಕ ಪಾಸ್‌ಗಳ ದರವನ್ನು ಹೆಚ್ಚಿಸಲಾಗಿದೆ ಎಂಬ ವದಂತಿಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದ್ದು, ಇದು ಸಂಪೂರ್ಣವಾಗಿ ವಾಸ್ತವಕ್ಕೆ ದೂರವಾಗಿದೆ ಎಂದು ಸಾರಿಗೆ ಸಂಸ್ಥೆಯು ಅಧಿಕೃತ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ. ಸೀಮಿತ ವ್ಯಾಪ್ತಿಯಲ್ಲಿ ಎಂದಿನಂತೆ ಸಂಚರಿಸುವ ಲಕ್ಷಾಂತರ ಸಾಮಾನ್ಯ ಪ್ರಯಾಣಿಕರಿಗೆ ಯಾವುದೇ ಹೆಚ್ಚುವರಿ ಆರ್ಥಿಕ ಹೊರೆ ಮಾಡಲಾಗಿಲ್ಲ ಎಂದು ಸಂಸ್ಥೆ ತಿಳಿಸಿದೆ.
ಸಾರ್ವಜನಿಕರ ಹಿತದೃಷ್ಟಿಯಿಂದ ಈಗಾಗಲೇ ಚಾಲ್ತಿಯಲ್ಲಿರುವ ಎಲ್ಲಾ ರೀತಿಯ ಪಾಸ್‌ಗಳನ್ನು ಹಳೇ ದರದಲ್ಲೇ ಮುಂದುವರಿಸಲಾಗಿದೆ. ಆದರೆ, ಇತ್ತೀಚೆಗೆ ಸಂಸ್ಥೆಯ ಕಾರ್ಯಾಚರಣೆ ವ್ಯಾಪ್ತಿಯನ್ನು 70 ಕಿಲೋಮೀಟರ್‌ವರೆಗೆ ವಿಸ್ತರಿಸಲಾಗಿರುವ ಹೊಸ ಮಾರ್ಗಗಳ ಪ್ರಯಾಣಿಕರ ಅನುಕೂಲಕ್ಕಾಗಿ ಮಾತ್ರ 2026ರ ಜೂನ್ 2ರಿಂದ “ಸಾಮಾನ್ಯ ವಿಸ್ತಾರ” ಹೆಸರಿನ ನೂತನ ದೈನಿಕ, ಸಾಪ್ತಾಹಿಕ ಹಾಗೂ ಮಾಸಿಕ ಪಾಸ್‌ಗಳನ್ನು ಪ್ರತ್ಯೇಕವಾಗಿ ಪರಿಚಯಿಸಲಾಗಿದೆ. ಪ್ರಸ್ತುತ ಬಿಎಂಟಿಸಿ ಕಾರ್ಯಾಚರಣೆ ನಡೆಸುತ್ತಿರುವ ಒಟ್ಟು 1,819 ಮಾರ್ಗಗಳ ಪೈಕಿ 96 ಮಾರ್ಗಗಳು ಹೊಸದಾಗಿ ವಿಸ್ತರಣೆಗೊಂಡ ಪ್ರದೇಶಗಳಲ್ಲಿ ಸಂಚರಿಸುತ್ತಿದ್ದು, ಇವುಗಳಿಗೆ ಮಾತ್ರ ಈ ಹೊಸ ಪಾಸ್ ಅನ್ವಯವಾಗುತ್ತದೆ.
ಜೂನ್ 2ರಿಂದ ಜೂನ್ 21ರವರೆಗಿನ ಪಾಸ್ ಮಾರಾಟದ ಅಂಕಿ-ಅಂಶಗಳನ್ನು ಬಿಎಂಟಿಸಿ ಬಿಡುಗಡೆ ಮಾಡಿದ್ದು, ಸಾಂಪ್ರದಾಯಿಕ 1,200 ರೂಪಾಯಿ ಮುಖಬೆಲೆಯ ಸಾಮಾನ್ಯ ಮಾಸಿಕ ಪಾಸ್‌ಗಳು ಬರೋಬ್ಬರಿ 60,400ರಷ್ಟು ಮಾರಾಟವಾಗಿವೆ. ಇನ್ನು ಹೊಸದಾಗಿ ಜಾರಿಗೆ ತರಲಾದ 1,500 ರೂಪಾಯಿ ಮುಖಬೆಲೆಯ ‘ಸಾಮಾನ್ಯ ವಿಸ್ತಾರ ಮಾಸಿಕ ಪಾಸ್’ ಕೇವಲ 160 ಮಾರಾಟವಾಗಿದೆ. ಇದಲ್ಲದೆ 120 ರೂಪಾಯಿಯ ದೈನಿಕ ವಿಸ್ತಾರ ಪಾಸ್‌ಗಳು 29 ಹಾಗೂ 550 ರೂಪಾಯಿಯ ಸಾಪ್ತಾಹಿಕ ವಿಸ್ತಾರ ಪಾಸ್‌ಗಳು 3 ಮಾರಾಟವಾಗಿವೆ.
ಈ ಅಂಕಿ-ಅಂಶಗಳೇ ಹೇಳುವಂತೆ ಸಾಮಾನ್ಯ ಮಾಸಿಕ ಪಾಸಿನ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಹಾಗೂ ಅದನ್ನು ಬಳಸುವ ಪ್ರಯಾಣಿಕರ ಸಂಖ್ಯೆಯೇ ಹೆಚ್ಚಾಗಿದೆ. ಹೊಸದಾಗಿ ಪರಿಚಯಿಸಲಾದ ವಿಸ್ತಾರ ಪಾಸ್‌ಗಳು ಕೇವಲ ದೂರದ ಊರುಗಳಿಂದ ನಗರಕ್ಕೆ ಸಂಪರ್ಕ ಕಲ್ಪಿಸುವ ಸೀಮಿತ ಮಾರ್ಗಗಳಿಗೆ ಮಾತ್ರ ಸೀಮಿತವಾಗಿವೆ. ಹೀಗಾಗಿ ಸಾರ್ವಜನಿಕರು ಯಾವುದೇ ಸುಳ್ಳು ಸುದ್ದಿಗಳಿಗೆ ಕಿವಿಗೊಡದೆ, ಬಿಎಂಟಿಸಿ ಒದಗಿಸಿರುವ ಅಧಿಕೃತ ವಾಸ್ತವ ಮಾಹಿತಿಯನ್ನು ಅರಿತು ಸಹಕರಿಸಬೇಕು ಎಂದು ಸಂಸ್ಥೆಯು ಪ್ರಯಾಣಿಕರಲ್ಲಿ ವಿನಂತಿಸಿದೆ.
ಕನಕಪುರ, ರಾಮನಗರ, ಮಾಲೂರಿಗೂ ಸಿಗಲಿದೆ ಬಿಎಂಟಿಸಿ ಬಸ್ ಸೌಲಭ್ಯ
ಸಾರ್ವಜನಿಕರ ಪ್ರಯಾಣದ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ತನ್ನ ಬಸ್ ಸೇವೆಗಳ ಕಾರ್ಯಾಚರಣೆ ವ್ಯಾಪ್ತಿಯನ್ನು ಬರೋಬ್ಬರಿ 65 ರಿಂದ 70 ಕಿಲೋಮೀಟರ್‌ಗಳವರೆಗೆ ವಿಸ್ತರಿಸಿದ್ದು, ಸುತ್ತಮುತ್ತಲಿನ ಜಿಲ್ಲೆಗಳ ಸಾವಿರಾರು ಪ್ರಯಾಣಿಕರಿಗೆ ಭಾರಿ ಅನುಕೂಲ ಕಲ್ಪಿಸಿದೆ.ರಾಜ್ಯ ಸರ್ಕಾರವು ಕಾಲಕಾಲಕ್ಕೆ ಹೊರಡಿಸಿರುವ ಅಧಿಸೂಚನೆಗಳ ಅನ್ವಯ ಬಿಎಂಟಿಸಿ ವ್ಯಾಪ್ತಿಯನ್ನು ವಿಸ್ತರಿಸುತ್ತಾ ಬಂದಿದೆ. ಈ ಹಿಂದೆ 1961ರ ಅಧಿಸೂಚನೆ ಪ್ರಕಾರ ಬೆಂಗಳೂರು ನಗರ ಪಾಲಿಕೆ ವ್ಯಾಪ್ತಿಯಿಂದ ಕೇವಲ 20 ಕಿ.ಮೀ (12 ಮೈಲಿ) ವರೆಗೆ ಇದ್ದ “ಬಿಟಿಎಸ್ ಯೋಜನೆ”ಯ ವ್ಯಾಪ್ತಿಯನ್ನು, 2014ರಲ್ಲಿ 25 ಕಿ.ಮೀ ವರೆಗೆ ಹೆಚ್ಚಿಸಲಾಗಿತ್ತು. ಇದೀಗ ಸರ್ಕಾರದ ಇತ್ತೀಚಿನ ನೂತನ ಅಧಿಸೂಚನೆ (ಸಂಖ್ಯೆ: ಟಿಡಿ 167 ಟಿಡಿಒ 2025, ದಿನಾಂಕ 05-01-2026) ಅನ್ವಯ, ಬಿಎಂಟಿಸಿ ಬಸ್ ಕಾರ್ಯಾಚರಣೆಯ ಗಡಿಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಿಂದ 40 ಕಿ.ಮೀ ವರೆಗೆ ವಿಸ್ತರಿಸಲಾಗಿದೆ. ಈ ಮಹತ್ವದ ತೀರ್ಮಾನದಿಂದಾಗಿ ನಗರದ ಕೇಂದ್ರ ಭಾಗದಿಂದ ಈವರೆಗೆ 40-42 ಕಿ.ಮೀ ವರೆಗೆ ಮಾತ್ರ ಸಂಚರಿಸುತ್ತಿದ್ದ ಬಸ್‌ಗಳು, ಇನ್ನು ಮುಂದೆ ಸುಮಾರು 65 ರಿಂದ 70 ಕಿ.ಮೀ ದೂರದವರೆಗೂ ಸಂಚರಿಸಲು ಕಾನೂನಾತ್ಮಕ ಅವಕಾಶ ದೊರೆತಿದೆ.
ಈ ಐತಿಹಾಸಿಕ ತೀರ್ಮಾನದ ಫಲವಾಗಿ ಬೆಂಗಳೂರು ನಗರದ ನೆರೆಹೊರೆಯ ಪ್ರಮುಖ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಾದ ಕನಕಪುರ, ರಾಮನಗರ, ಚನ್ನಪಟ್ಟಣ, ಮಾಗಡಿ, ಚಿಕ್ಕಬಳ್ಳಾಪುರ ಹಾಗೂ ಮಾಲೂರು ಸೇರಿದಂತೆ ಹಲವು ಭಾಗಗಳಿಗೆ ಬಿಎಂಟಿಸಿ ತನ್ನ ಸಾರ್ವಜನಿಕ ಸಾರಿಗೆ ಸೇವೆಯನ್ನು ಯಶಸ್ವಿಯಾಗಿ ವಿಸ್ತರಿಸಿದೆ. ಇದರಿಂದ ಉದ್ಯೋಗಸ್ಥರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ನಗರದೊಂದಿಗಿನ ಸಂಪರ್ಕ ಮತ್ತಷ್ಟು ಸುಗಮವಾಗಿದೆ.
ಹೊಸದಾಗಿ ವಿಸ್ತರಣೆಯಾಗಿರುವ ಈ ಬೃಹತ್ ವ್ಯಾಪ್ತಿಯನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಬಿಎಂಟಿಸಿ ಹೊಸ ಯೋಜನೆಯೊಂದನ್ನು ರೂಪಿಸಿದೆ. ನಗರದ ಕೇಂದ್ರ ಭಾಗದಿಂದ ಸುಮಾರು 40 ಕಿ.ಮೀ ವರೆಗಿನ ಪ್ರದೇಶವನ್ನು “ಸೀಮಿತ ವ್ಯಾಪ್ತಿ” ಎಂದು ಹಾಗೂ ಅದರಾಚೆಗಿನ ಹೊಸ ಮಾರ್ಗಗಳನ್ನು “ವಿಸ್ತಾರ ವ್ಯಾಪ್ತಿ” ಎಂದು ವರ್ಗೀಕರಿಸಿ ಸಾರಿಗೆ ಸಂಸ್ಥೆಯು ಪರಿಣಾಮಕಾರಿ ಕಾರ್ಯಾಚರಣೆಗೆ ಚಾಲನೆ ನೀಡಿದೆ.

