ಬೆಂಗಳೂರು:ಸಾರ್ವಜನಿಕರ ಜ್ವಲಂತ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವ ಮತ್ತು ಸೂಕ್ತವಾಗಿ ಚರ್ಚಿಸುವ ಯೋಗ್ಯ ವ್ಯಕ್ತಿಗಳು ವಿಧಾನಪರಿಷತ್ತಿಗೆ ಆಯ್ಕೆಯಾಗಿ ಬರಬೇಕಾದ ಅಗತ್ಯವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ಅಭಿಪ್ರಾಯಪಟ್ಟಿದ್ದಾರೆ. ಪ್ರಜಾಪ್ರಭುತ್ವದ ದೇಗುಲವಾದ ವಿಧಾನಸೌಧದಲ್ಲಿ ನಾಡಿನ ಪ್ರಮುಖ ವಿಷಯಗಳ ಕುರಿತು ಗಂಭೀರ ಚರ್ಚೆ ನಡೆಸಲು ಸಮರ್ಥ ಪ್ರತಿನಿಧಿಗಳ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.
ರಾಜಕೀಯ ಚಟಕ್ಕಾಗಿ ಸ್ಪರ್ಧಿಸುವವರ ವಿರುದ್ಧ ವಾಗ್ದಾಳಿ:
ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕೆಲವರು ಕೇವಲ ತಮ್ಮ ರಾಜಕೀಯ ಚಪಲ ಹಾಗೂ ಚಟಕ್ಕಾಗಿ ಮೇಲ್ಮನೆಗೆ ಬರಲು ಯತ್ನಿಸುತ್ತಿದ್ದಾರೆ. ಹಣದ ಬಲ ಮತ್ತು ಅಹಂನಿಂದಲೇ ಚುನಾವಣೆಯನ್ನು ಸುಲಭವಾಗಿ ಗೆಲ್ಲಬಹುದು ಎಂಬ ಭ್ರಮೆಯಲ್ಲಿ ಕೆಲವರು ಸ್ಪರ್ಧಿಸುತ್ತಿರುವುದು ಕಾಣಿಸುತ್ತಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪದವೀಧರ ಮತ್ತು ಶಿಕ್ಷಣ ಕ್ಷೇತ್ರಗಳು ಅತ್ಯಂತ ಜವಾಬ್ದಾರಿಯುತವಾಗಿದ್ದು, ಈ ಕ್ಷೇತ್ರವನ್ನು ಬಿಜೆಪಿ ಸತತ ಎಂಟು ಬಾರಿ ಪ್ರತಿನಿಧಿಸಿ ಮುನ್ನಡೆಸಿಕೊಂಡು ಬಂದಿದೆ ಎಂದು ನೆನಪಿಸಿದರು.
ಕಾರ್ಯಕರ್ತ ಸುರೇಶ್ ಪರ ಒಗ್ಗಟ್ಟಿನ ಕರೆ:
ಶಿಕ್ಷಣ ರಂಗದಲ್ಲಿ ದಶಕಗಳಿಂದ ಸಮಾಜಮುಖಿಯಾಗಿ ಸೇವೆ ಸಲ್ಲಿಸುತ್ತಿರುವ ಪ್ರಾಮಾಣಿಕ ಕಾರ್ಯಕರ್ತ ಕೆ.ಎಂ. ಸುರೇಶ್ ಅವರನ್ನು ಎನ್‌ಡಿಎ ಮೈತ್ರಿಕೂಟದ ಅಧಿಕೃತ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗಿದೆ. ಈ ಚುನಾವಣೆಯಲ್ಲಿ ಮತದಾರರ ಸಂಖ್ಯೆ 50 ಸಾವಿರ ದಾಟುವ ಸಾಧ್ಯತೆಯಿದ್ದು, ಅಭ್ಯರ್ಥಿಯು 5 ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ 33 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಬೇಕಿದೆ. ಹೀಗಾಗಿ ಚಿತ್ರದುರ್ಗ ಜಿಲ್ಲೆಯ ಮುಖಂಡರು ಹೆಚ್ಚಿನ ಹೊಣೆಗಾರಿಕೆ ವಹಿಸಿಕೊಂಡು ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೂ ಶಿಕ್ಷಣ ಮತ್ತು ಪದವೀಧರ ಕ್ಷೇತ್ರಗಳಲ್ಲಿ ಬಿಜೆಪಿ ನಿರಂತರವಾಗಿ ಜಯಭೇರಿ ಬಾರಿಸಿದೆ. ಪ್ರಸ್ತುತ ಆಡಳಿತ ಪಕ್ಷವು ಹಲವು ತಿಂಗಳುಗಳಿಂದ ಮತದಾರರ ನೋಂದಣಿ ಪ್ರಕ್ರಿಯೆ ಚುರುಕುಗೊಳಿಸಿದ್ದು, ಮುಂಬರುವ ದಿನಗಳಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಕೂಡ ಮತದಾರರ ನೋಂದಣಿ ಕಾರ್ಯವನ್ನು ಮತ್ತಷ್ಟು ವೇಗವಾಗಿ ಮಾಡಬೇಕಿದೆ ಎಂದು ವಿಜಯೇಂದ್ರ ಅವರು ತಿಳಿಸಿದರು.
ಕಾಂಗ್ರೆಸ್ ವಿರುದ್ಧ ಜನರಲ್ಲಿ ಅಸಮಾಧಾನ:
ಚಂದ್ರಣ್ಣ ಅವರು ನನ್ನನ್ನು ಭವಿಷ್ಯದ ಮುಖ್ಯಮಂತ್ರಿ ಎಂಬ ಮಾತನ್ನು ಪ್ರೀತಿಯಿಂದ ವಿಶ್ವಾಸವಿಟ್ಟು ಹೇಳಿದ್ದಾರೆ. ಅದುವೇ ನಮಗೆ ಸಮಸ್ಯೆ ಆಗಿದೆ. ನಾನು ಒಬ್ಬ ರಾಜ್ಯ ಅಧ್ಯಕ್ಷನಾಗಿ ಕಿವಿಮಾತು ಹೇಳಲು ಬಯಸುತ್ತೇನೆ. ಯಾರು ಮುಖ್ಯಮಂತ್ರಿ ಆಗಬೇಕೆಂಬುದು ಮುಖ್ಯವಲ್ಲ; ರಾಜ್ಯದ ಮತದಾರರು ಈ ಭ್ರಷ್ಟ- ಜನವಿರೋಧಿ, ಹಿಂದೂ ವಿರೋಧಿ ಸರಕಾರದ ವಿರುದ್ಧ, ಪರಿಶಿಷ್ಟ ಜಾತಿ, ವರ್ಗದ ದುಡ್ಡನ್ನು ಕೊಳ್ಳೆ ಹೊಡೆಯುವ ಕಾಂಗ್ರೆಸ್ ಸರಕಾರದ ವಿರುದ್ಧ ಬೇಸತ್ತಿದ್ದಾರೆ. ಹಾಗಾಗಿ ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಹೆಚ್ಚಾಗಿದೆ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಮಾಜಿ ಶಾಸಕರಾದ ತಿಪ್ಪಾರೆಡ್ಡಿ, ಬಸವರಾಜ್, ಶಾಸಕ ಚಂದ್ರಣ್ಣ, ವಿಧಾನಪರಿಷತ್ ಮಾಜಿ ಸದಸ್ಯ ಶಿವಯೋಗಿ ಸ್ವಾಮಿ, ವಿಧಾನಪರಿಷತ್ ಸದಸ್ಯ ಹಾಗೂ ಚುನಾವಣಾ ಜವಾಬ್ದಾರಿ ಹೊತ್ತಿರುವ ಕೇಶವಪ್ರಸಾದ್, ವಿಧಾನಪರಿಷತ್ ಸದಸ್ಯ ನವೀನ್, ಆಗ್ನೇಯ ಪದವೀಧರ ಕ್ಷೇತ್ರದ ಬಿಜೆಪಿ, ಎನ್‍ಡಿಎ ಅಭ್ಯರ್ಥಿ ಕೆ.ಎಂ.ಸುರೇಶ್, ಕಾಡುಗೊಲ್ಲರ ಸಮಾಜದ ರಾಜ್ಯ ಅಧ್ಯಕ್ಷ ರಾಜಣ್ಣ, ಮುಖಂಡರಾದ ಕುಮಾರಸ್ವಾಮಿ, ರಘುಚಂದನ್, ಸಿದ್ಧಾರ್ಥ, ಮಂಡಲ ಅಧ್ಯಕ್ಷ ನಾಗರಾಜ್, ನಗರ ಮಂಡಲ ಅಧ್ಯಕ್ಷ ಲೋಕೇಶ್, ಮಾಜಿ ಜಿಲ್ಲಾಧ್ಯಕ್ಷ ರವೀಂದ್ರನಾಥ್, ಲಕ್ಷ್ಮೀಕಾಂತ್, ಮಧುಗಿರಿ ಗಿರೀಶ್, ಪಕ್ಷದ ಪ್ರಮುಖರು ಇದ್ದರು.

