Sat. Aug 29th, 2026

ವಾಲ್ಮೀಕಿ ನಿಗಮದ ಹಣ ವಾಪಸ್ ಬರುವವರೆಗೆ ಹೋರಾಟ ನಿಲ್ಲದು; ಅಕ್ರಮದ ಹಿಂದಿನ ‘ತಿಮಿಂಗಿಲ’ಗಳು ಹೊರಬರಲಿ: ಬಿ.ವೈ. ವಿಜಯೇಂದ್ರ

Share this with Friends

ಶಿವಮೊಗ್ಗ: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ₹185 ಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಹೋರಾಟವು ಕೇವಲ ಮಾಜಿ ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಸೀಮಿತವಾಗಿಲ್ಲ. ಲೂಟಿಯಾಗಿರುವ ಇಡೀ ಹಣ ಸಂಪೂರ್ಣವಾಗಿ ನಿಗಮದ ಖಾತೆಗೆ ಮರುಜಮೆಯಾಗಬೇಕು ಮತ್ತು ಅಕ್ರಮದ ಹಿಂದಿರುವ ದೊಡ್ಡ ಪ್ರಭಾವಿಗಳ ಮುಖವಾಡ ಕಳಚಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಒತ್ತಾಯಿಸಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯೇಂದ್ರ, ನಿಗಮದಿಂದ ಅಕ್ರಮವಾಗಿ ವರ್ಗಾವಣೆಯಾಗಿರುವ ₹185 ಕೋಟಿ ಹಣದ ಸಂಪೂರ್ಣ ಪತ್ತೆ ಇನ್ನೂ ಆಗಿಲ್ಲ. ಜಾರಿ ನಿರ್ದೇಶನಾಲಯ (ED) ನಡೆಸಿರುವ ತನಿಖೆಯ ಪ್ರಕಾರ, ಈ ಪಂಗಡಗಳ ಕಲ್ಯಾಣದ ಹಣವನ್ನು ಚಿನ್ನ ಖರೀದಿ, ಮದ್ಯ ಖರೀದಿ ಹಾಗೂ ಬಾರ್‌ಗಳ ಬಿಲ್ ಪಾವತಿಗೆ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬ ಕಳವಳಕಾರಿ ಅಂಶಗಳು ಹೊರಬಂದಿವೆ. ಹಾಗಿದ್ದಲ್ಲಿ, ಈ ಕೋಟ್ಯಂತರ ರೂಪಾಯಿ ಹಣ ಯಾರ ಯಾರ ಪಾಲಾಗಿದೆ ಎಂಬುದಕ್ಕೆ ರಾಜ್ಯ ಸರ್ಕಾರ ಉತ್ತರಿಸಬೇಕಿದೆ ಎಂದು ಅವರು ಆಗ್ರಹಿಸಿದರು.

ಶೋಷಿತರ ಹಣ ಮರುಪಾವತಿಗೆ ಪಟ್ಟು:

“ಸಚಿವರೊಬ್ಬರು ಅಧಿಕಾರದಿಂದ ಕೆಳಗಿಳಿಯುವುದು ಒಂದು ಹಂತವಾದರೆ, ಶೋಷಿತ ಸಮುದಾಯಗಳ ಪ್ರಗತಿಗಾಗಿ ಮೀಸಲಿಟ್ಟಿದ್ದ ಹಣವನ್ನು ಮರಳಿ ತರುವುದು ಅತ್ಯಂತ ಮುಖ್ಯವಾದ ವಿಚಾರವಾಗಿದೆ. ಲೂಟಿಯಾಗಿರುವ ಪ್ರತಿಯೊಂದು ಪೈಸೆಯೂ ನಿಗಮದ ಬ್ಯಾಂಕ್ ಖಾತೆಗೆ ವಾಪಸ್ ಬರುವವರೆಗೂ ನಮ್ಮ ಪಕ್ಷದ ಹೋರಾಟ ವಿಶ್ರಮಿಸುವುದಿಲ್ಲ” ಎಂದು ಅವರು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಕಪ್ಪ ಕಾಣಿಕೆ ಆರೋಪದ ತನಿಖೆಗೆ ಆಗ್ರಹ:

ಈ ಹಗರಣದಲ್ಲಿ ಕೇವಲ ಸಣ್ಣಪುಟ್ಟ ವ್ಯಕ್ತಿಗಳಲ್ಲದೆ ದೊಡ್ಡ ತಿಮಿಂಗಿಲಗಳೇ ಶಾಮೀಲಾಗಿವೆ. ಅಷ್ಟೇ ಅಲ್ಲದೆ, ಈ ಹಣದ ಒಂದು ಭಾಗ ಕಾಂಗ್ರೆಸ್ ಹೈಕಮಾಂಡ್‌ಗೆ ಕಪ್ಪ ಕಾಣಿಕೆಯಾಗಿ ಸಲ್ಲಿಕೆಯಾಗಿದೆ ಎಂಬ ಗಂಭೀರ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ನಡೆಯುತ್ತಿವೆ. ಈ ಎಲ್ಲಾ ಆರೋಪಗಳ ಸತ್ಯಾಸತ್ಯತೆ ತನಿಖೆಯ ಮೂಲಕ ಹೊರಬರಬೇಕಾಗಿದೆ. ತಪ್ಪಿತಸ್ಥರು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ವಿಜಯೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ನಾಗೇಂದ್ರ ಅವರಿಗೆ ಕ್ಲೀನ್‌ಚಿಟ್ ಸಿಗದಿದ್ದರೂ ಸಂಪುಟಕ್ಕೆ ಮರುಸೇರ್ಪಡೆ ಏಕೆ?

ಮಾಜಿ ಸಚಿವ ನಾಗೇಂದ್ರ ಅವರಿಗೆ ಪ್ರಕರಣದಿಂದ ಸಂಪೂರ್ಣ ಕ್ಲೀನ್‌ಚಿಟ್ ಸಿಕ್ಕಿದೆ ಎಂಬುದು ಎಲ್ಲಿಯೂ ಸ್ಪಷ್ಟವಾಗಿಲ್ಲ. ಹಾಗಿದ್ದರೂ ತರಾತುರಿಯಲ್ಲಿ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಅಗತ್ಯವೇನಿತ್ತು? ಸ್ವತಃ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ನಾಗೇಂದ್ರ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳುವ ಆಸಕ್ತಿ ಇರಲಿಲ್ಲ ಎಂಬ ಚರ್ಚೆಯೂ ಇದೆ.ಹಾಗಾದರೆ ಮುಖ್ಯಮಂತ್ರಿಗಳ ಮೇಲೆ ಯಾರ ಒತ್ತಡವಿತ್ತು? ಆ ಒತ್ತಡ ಕಾಂಗ್ರೆಸ್ ಹೈಕಮಾಂಡ್‌ನಿಂದಲೇ ಬಂದಿತೇ? ಈ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸಬೇಕು. ಪ್ರಕರಣದಲ್ಲಿ ಕಾಂಗ್ರೆಸ್ ಹೈಕಮಾಂಡ್‌ನ ಪಾತ್ರವೂ ಇದೆಯೇ ಎಂಬ ಅನುಮಾನಗಳಿಗೆ ತನಿಖೆಯ ಮೂಲಕ ತೆರೆ ಬೀಳಬೇಕು.

ಚಂದ್ರಶೇಖರ್ ಕುಟುಂಬಕ್ಕೆ ನ್ಯಾಯ ನೀಡದಿರುವುದು ಅಮಾನವೀಯ

ಶಿವಮೊಗ್ಗದ ಪ್ರಾಮಾಣಿಕ ಅಧಿಕಾರಿ, ಭೋವಿ ಸಮಾಜಕ್ಕೆ ಸೇರಿದ ಚಂದ್ರಶೇಖರ್ ಅವರು ಆತ್ಮಹತ್ಯೆ ಮಾಡಿಕೊಂಡು ಹಲವು ದಿನಗಳು ಕಳೆದರೂ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಿಲ್ಲ. ಅವರ ಕುಟುಂಬಕ್ಕೆ ಬರಬೇಕಾದ ಪಿಎಫ್ ಸೇರಿದಂತೆ ಇತರೆ ಸೌಲಭ್ಯಗಳೂ ಇನ್ನೂ ದೊರೆತಿಲ್ಲ. ಅಧಿಕಾರಿಗಳು ಬರುತ್ತಾರೆ, ಹೋಗುತ್ತಾರೆ; ಆದರೆ ಮೃತ ಅಧಿಕಾರಿಯ ಕುಟುಂಬಕ್ಕೆ ನ್ಯಾಯ ದೊರಕಿಸುವ ಜವಾಬ್ದಾರಿಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿಲ್ಲ. ಇದು ಕಾಂಗ್ರೆಸ್ ಸರ್ಕಾರಕ್ಕೆ ಮಾನವೀಯತೆ ಇಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸುತ್ತದೆ.ಚಂದ್ರಶೇಖರ್ ಅವರ ಕುಟುಂಬಕ್ಕೆ ತಕ್ಷಣ ಸೂಕ್ತ ಪರಿಹಾರ ನೀಡಬೇಕು. ಅವರ ಕುಟುಂಬಕ್ಕೆ ಬರಬೇಕಾದ ಎಲ್ಲ ಕಾನೂನುಬದ್ಧ ಸೌಲಭ್ಯಗಳನ್ನು ವಿಳಂಬವಿಲ್ಲದೆ ಒದಗಿಸಬೇಕು ಎಂದರು.

ಬರ ನಿರ್ವಹಣೆಯಲ್ಲೂ ಸರ್ಕಾರದ ಎಡವಟ್ಟು

ರಾಜ್ಯದಲ್ಲಿ ಬರದ ಪರಿಸ್ಥಿತಿ ಎದುರಿಸುತ್ತಿರುವ ಸಂದರ್ಭದಲ್ಲಿ ತಾಲೂಕುಗಳನ್ನು ಘೋಷಿಸುವ ವಿಚಾರದಲ್ಲಿಯೂ ರಾಜ್ಯ ಸರ್ಕಾರ ಕಾಟಾಚಾರಕ್ಕೆ ನಡೆದುಕೊಳ್ಳುತ್ತಿದೆ. ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳ ಅರ್ಹ ತಾಲೂಕುಗಳ ಹೆಸರುಗಳನ್ನೇ ಪರಿಗಣಿಸಿಲ್ಲ. ಕೆಲವು ತಾಲೂಕುಗಳನ್ನು ಮಾತ್ರ ತರಾತುರಿಯಲ್ಲಿ ಘೋಷಿಸಿ, ಬಹುತೇಕ ಜಿಲ್ಲೆಗಳ ವಿಚಾರದಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.

ಬರದ ಕುರಿತು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಸಮರ್ಪಕ ಹಾಗೂ ವಾಸ್ತವಿಕ ವರದಿ ಸಲ್ಲಿಸುತ್ತಿದೆಯೇ ಎಂಬುದೇ ಅನುಮಾನ ಮೂಡಿಸುತ್ತಿದೆ. ಸರಿಯಾದ ರೀತಿಯಲ್ಲಿ ಕೇಂದ್ರಕ್ಕೆ ವರದಿ ಸಲ್ಲಿಸಿದರೆ ರಾಜ್ಯದ ವಾಸ್ತವ ಪರಿಸ್ಥಿತಿ ಏನು ಎಂಬುದು ಸ್ಪಷ್ಟವಾಗುತ್ತದೆ. ಆದರೆ ಬರ ನಿರ್ವಹಣೆಯ ವಿಚಾರದಲ್ಲಿಯೂ ಕಾಂಗ್ರೆಸ್ ಸರ್ಕಾರ ಪದೇಪದೇ ಎಡವುತ್ತಿದೆ.ಬರಪೀಡಿತ ಪ್ರದೇಶಗಳಿಗೆ ಸೂಕ್ತ ಪರಿಹಾರ, ರೈತರಿಗೆ ನೆರವು ಮತ್ತು ಅಗತ್ಯ ಕ್ರಮ ಕೈಗೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ ಎಂದರು.

ವಾಲ್ಮೀಕಿ ನಿಗಮದ ₹185 ಕೋಟಿ ಹಣ ವಾಪಸ್ ಬರುವವರೆಗೆ, ಅಕ್ರಮದ ಹಿಂದಿರುವ ಪ್ರತಿಯೊಬ್ಬರ ಸತ್ಯ ಬಹಿರಂಗವಾಗುವವರೆಗೆ ಹಾಗೂ ಚಂದ್ರಶೇಖರ್ ಕುಟುಂಬಕ್ಕೆ ನ್ಯಾಯ ದೊರೆಯುವವರೆಗೆ ಭಾರತೀಯ ಜನತಾ ಪಕ್ಷದ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಅಂತ ಹೇಳಿದರು.

 

 


Share this with Friends

Related Post