Fri. Sep 25th, 2026

ಪೌರಕಾರ್ಮಿಕರಿಗೆ ಹಬ್ಬದ ಗಿಫ್ಟ್: ಉಪಹಾರ ಭತ್ಯೆ ₹70 ಕ್ಕೆ ಏರಿಕೆ, ಬಾಕಿ ಹುದ್ದೆಗಳ ಕಾಯಂಗೆ ಸಿಎಂ ಡಿ.ಕೆ. ಶಿವಕುಮಾರ್ ಭರವಸೆ!

Share this with Friends

ಬೆಂಗಳೂರು: “ಶ್ರಮದಲ್ಲೇ ಶಿವನನ್ನು ಕಾಣುವ ಪೌರಕಾರ್ಮಿಕರು ಸ್ವಚ್ಛತೆ ಕ್ರಾಂತಿಯ ನಿಜವಾದ ಸರದಾರರು” ಎಂದು ಶ್ಲಾಘಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಪೌರಕಾರ್ಮಿಕರ ದಿನನಿತ್ಯದ ಉಪಹಾರ ಭತ್ಯೆಯನ್ನು ₹35 ರಿಂದ ₹70 ಕ್ಕೆ ದ್ವಿಗುಣಗೊಳಿಸಿ ಶೀಘ್ರದಲ್ಲೇ ಅಧಿಕೃತ ಆದೇಶ ಹೊರಡಿಸುವುದಾಗಿ ಪ್ರಕಟಿಸಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಶುಕ್ರವಾರ ನಡೆದ ಪೌರಕಾರ್ಮಿಕರ ದಿನಾಚರಣೆ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸ್ವಾಭಿಮಾನದ ಬದುಕಿಗೆ ಸರ್ಕಾರ ಬದ್ಧ:

ಪೌರಕಾರ್ಮಿಕರು ಯಾವುದೇ ಕೀಳರಿಮೆಯಿಲ್ಲದೆ ಸ್ವಾಭಿಮಾನದಿಂದ ಬದುಕಬೇಕು ಎಂದು ಕರೆ ನೀಡಿದ ಸಿಎಂ, “ನೀವು ಮಾಡುತ್ತಿರುವುದು ದೇಶಸೇವೆ. ನೀವಿಲ್ಲದಿದ್ದರೆ ಇಡೀ ಮಹಾನಗರವೇ ತಿಪ್ಪೆಗುಂಡಿಯಾಗುತ್ತದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆರ್ಥಿಕ ಒತ್ತಡಗಳಿದ್ದರೂ ಸಾವಿರಾರು ಕಾರ್ಮಿಕರನ್ನು ಕಾಯಂ ಮಾಡಲಾಗಿದೆ. ಬಿಡಬ್ಲ್ಯೂಎಸ್‌ಎಸ್‌ಬಿ (BWSSB) ಸೇರಿದಂತೆ ನೀರು ಸರಬರಾಜು ಇಲಾಖೆಗಳಲ್ಲಿ ಬಾಕಿ ಉಳಿದಿರುವ ಎಲ್ಲ ಪೌರಕಾರ್ಮಿಕರನ್ನು ಹಂತಹಂತವಾಗಿ ಕಾಯಂ ಮಾಡಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ” ಎಂದು ಭರವಸೆ ನೀಡಿದರು.

ಸಚಿವ ಸಂಪುಟ ಉಪಸಮಿತಿ ರಚನೆ:

ಪೌರಕಾರ್ಮಿಕರ ಕಲ್ಯಾಣ ನಿಧಿ, ಮಂಡಳಿ ಸ್ಥಾಪನೆ ಹಾಗೂ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಮತ್ತು ನಗರಾಭಿವೃದ್ಧಿ ಇಲಾಖೆಗಳನ್ನೊಳಗೊಂಡ ವಿಶೇಷ ಸಚಿವ ಸಂಪುಟ ಉಪಸಮಿತಿಯನ್ನು (Cabinet Sub-Committee) ರಚಿಸಲಾಗುವುದು. ಆರ್ಥಿಕ ಇಲಾಖೆಯ ಸಹಮತಿ ಪಡೆದು ಈ ಸಮಿತಿಯ ಮೂಲಕ ಶೀಘ್ರದಲ್ಲೇ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು. ಇದಕ್ಕಾಗಿ ಯಾವುದೇ ಮಧ್ಯವರ್ತಿಗಳ ಅಗತ್ಯವಿಲ್ಲ ಎಂದ ಅವರು, ಇದಕ್ಕಾಗಿಯೇ ‘ಪ್ರಜಾಸೇವೆ ಇಲಾಖೆ’ಯನ್ನು ಆರಂಭಿಸಿರುವುದಾಗಿ ತಿಳಿಸಿದರು.

ಮೈಗಳ್ಳರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ:

ಇದೇ ವೇಳೆ ಇಲಾಖೆಯಲ್ಲಿನ ಲೋಪದೋಷಗಳ ಬಗ್ಗೆ ಮಾತನಾಡಿದ ಸಿಎಂ, ಶೇ. 60 ರಷ್ಟು ಜನ ಪೌರಕಾರ್ಮಿಕರು ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ. ಆದರೆ ಉಳಿದ ಕೆಲವು ಮೈಗಳ್ಳರು ಮತ್ತು ಮಹಿಳಾ ಸಿಬ್ಬಂದಿ ಮೇಲೆ ದರ್ಪ ತೋರುವವರ ಬಗ್ಗೆ ಮಾಹಿತಿ ಇದ್ದು, ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದರು. ಪೌರಕಾರ್ಮಿಕರ ಆರೋಗ್ಯ ಸುರಕ್ಷತೆಗೆ ಗ್ಯಾರಂಟಿ ನೀಡುವುದು ಸರ್ಕಾರದ ಕರ್ತವ್ಯವಾಗಿದ್ದು, ಇವರ ವೃತ್ತಿಯನ್ನು ದೇವರ ಸೇವೆ ಎಂದು ಸಮಾಜ ಗೌರವಿಸುವಂತಾಗಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು

ದೇಶದಲ್ಲೇ ಮೊದಲ ಸಂದೇಶ – ಮುಜರಾಯಿ ಸಚಿವರ ನೇಮಕ:

ಸರ್ವರಿಗೂ ಸಮಬಾಳು, ಸಮಪಾಲು ಎಂಬ ನೀತಿಗೆ ಬದ್ಧವಾಗಿರುವ ನಮ್ಮ ಸರ್ಕಾರ, ಇಡೀ ದೇಶಕ್ಕೇ ಮಾದರಿಯಾದ ಹೊಸ ಸಂದೇಶ ನೀಡಿದೆ ಎಂದು ಸಿಎಂ ಹೆಮ್ಮೆಯಿಂದ ಹೇಳಿದರು. ಒಂದು ಕಾಲದಲ್ಲಿ ದೇವಾಲಯಗಳ ಪ್ರವೇಶಕ್ಕೆ ತಾರತಮ್ಯ ಎದುರಿಸುತ್ತಿದ್ದ ಸಮುದಾಯದ ನೋವನ್ನು ಅರಿತು, ಇತಿಹಾಸದಲ್ಲೇ ಮೊದಲ ಬಾರಿಗೆ ಪೌರಕಾರ್ಮಿಕನ ಮಗನಿಗೆ ಭಗವಂತನ ಸೇವೆ ಮಾಡುವ ಪ್ರತಿಷ್ಠಿತ ಮುಜರಾಯಿ ಇಲಾಖೆಯ ಜವಾಬ್ದಾರಿಯನ್ನು ನೀಡಲಾಗಿದೆ ಎಂದರು. ಇದರೊಂದಿಗೆ ಅವರಿಗೆ ಮತ್ತಷ್ಟು ಆಡಳಿತಾತ್ಮಕ ಶಕ್ತಿ ತುಂಬಲು ಮೀನುಗಾರಿಕೆ ಮತ್ತು ಬಂದರು ಸಚಿವಾಲಯದ ಹೊಣೆಯನ್ನೂ ವಹಿಸಲಾಗಿದೆ ಎಂದು ವಿವರಿಸಿದರು.

ಶಿಕ್ಷಣ ಕ್ರಾಂತಿ – ಕೆಪಿಎಸ್ ಮಾದರಿ ವಸತಿ ಶಾಲೆ:

ಪೌರಕಾರ್ಮಿಕರ ಮಕ್ಕಳು ಕೇವಲ ಕಾರ್ಮಿಕರಾಗಿಯೇ ಉಳಿಯಬಾರದು, ಅವರು ಚೆನ್ನಾಗಿ ಓದಿ ಐಎಎಸ್, ಕೆಎಎಸ್ ಅಧಿಕಾರಿಗಳಾಗಬೇಕು ಮತ್ತು ಉದ್ಯೋಗ ಸೃಷ್ಟಿಸುವ ನಾಯಕರಾಗಬೇಕು ಎಂಬುದು ಸರ್ಕಾರದ ಆಶಯವಾಗಿದೆ. ಈ ಉದ್ದೇಶಕ್ಕಾಗಿ ನಗರ ಪ್ರದೇಶಗಳಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ (KPS) ಮಾದರಿಯ ಅತ್ಯಾಧುನಿಕ ವಸತಿ ಶಾಲೆಗಳನ್ನು ನಿರ್ಮಿಸಲಾಗುವುದು ಎಂದು ಸಿಎಂ ಭರವಸೆ ನೀಡಿದರು.

ಸೂರು ಮತ್ತು ಸ್ವಾಭಿಮಾನದ ಭವನ:

ವಸತಿ ಯೋಜನೆ: ಪೌರಕಾರ್ಮಿಕರ ಸ್ವಂತ ಮನೆಯ ಕನಸನ್ನು ನನಸು ಮಾಡಲು ತಲಾ ₹7.50 ಲಕ್ಷ ರೂಪಾಯಿಗಳ ಆರ್ಥಿಕ ಸಹಾಯಧನ ನೀಡಲು ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ.

ಪೌರ ಭವನ ನಿರ್ಮಾಣ: ಪೌರಕಾರ್ಮಿಕರ ಸಾಂಸ್ಕೃತಿಕ ಮತ್ತು ಸಾಮಾಜಿಕ ಚಟುವಟಿಕೆಗಳಿಗಾಗಿ ಪ್ರತ್ಯೇಕ ‘ಪೌರ ಭವನ’ ನಿರ್ಮಿಸಲು ಜಾಗವನ್ನು ಗುರುತಿಸಲಾಗಿದ್ದು, ಮುಂದಿನ ಎರಡು ತಿಂಗಳಲ್ಲಿ ಇದರ ಕಾಮಗಾರಿ ಆರಂಭವಾಗಲಿದೆ. ಇನ್ನು ಮುಂದೆ ಪ್ರತಿ ವರ್ಷ ಸರ್ಕಾರವೇ ಅಧಿಕೃತವಾಗಿ ‘ಪೌರಕಾರ್ಮಿಕ ದಿನ’ವನ್ನು ಆಚರಿಸಲಿದೆ.

ಐತಿಹಾಸಿಕ ನೇಮಕಾತಿ ಮತ್ತು ಭ್ರಷ್ಟಾಚಾರ ಮುಕ್ತ ಸೇವೆ:

ಕಾಂಗ್ರೆಸ್ ಸರ್ಕಾರವು ಸದಾ ಶ್ರಮಜೀವಿಗಳ ಪರವಾಗಿ ನಿಂತಿದೆ. 2017ರಲ್ಲಿ 10 ಸಾವಿರ ಸಿಬ್ಬಂದಿಯನ್ನು ನೇಮಕ ಮಾಡಲಾಗಿತ್ತು. ಇನ್ನು 2023ರಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ 12,609 ಪೌರಕಾರ್ಮಿಕರನ್ನು ಕಾಯಂ ಮಾಡುವ ಮೂಲಕ ಇತಿಹಾಸ ಸೃಷ್ಟಿಸಲಾಗಿದೆ. ಒಂದೇ ಒಂದು ರೂಪಾಯಿ ಭ್ರಷ್ಟಾಚಾರವಿಲ್ಲದೆ ಕಾಯಂ ಉದ್ಯೋಗ ನೀಡಿ, ₹40 ಸಾವಿರ ಗೌರವಯುತ ವೇತನ ನಿಗದಿಪಡಿಸಲಾಗಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಈಗಾಗಲೇ 6 ಸಾವಿರ ಜನರನ್ನು ನಿಯೋಜಿಸಲಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ನೇಮಕಾತಿ ಮಾಡಿಕೊಳ್ಳುವ ಕುರಿತು ಚರ್ಚೆಗಳು ನಡೆಯುತ್ತಿವೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.

 


Share this with Friends

Related Post