Fri. Sep 25th, 2026

ವೈದ್ಯಕೀಯ ಆಕಾಂಕ್ಷಿಗಳಿಗೆ ಕೆಇಎ ಬಿಗ್ ರಿಲೀಫ್: ಚಾಯ್ಸ್-4 ಆರಿಸಿದವರಿಗೂ 3ನೇ ಸುತ್ತಿನ ಕೌನ್ಸೆಲಿಂಗ್‌ಗೆ ಲಕ್ಕಿ ಚಾನ್ಸ್

Share this with Friends

ಬೆಂಗಳೂರು: ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಯ ನಿಯಮಗಳಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಮಹತ್ವದ ಬದಲಾವಣೆ ಮಾಡಿದೆ. ಮೊದಲ ಮತ್ತು ಎರಡನೇ ಸುತ್ತಿನಲ್ಲಿ ಸೀಟು ಸಿಕ್ಕರೂ ಪ್ರವೇಶ ಪಡೆಯದೆ ‘ಚಾಯ್ಸ್-4’ ಆಯ್ಕೆ ಮಾಡಿದ್ದ ಅಭ್ಯರ್ಥಿಗಳಿಗೂ ಇದೀಗ ಮೂರನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಭಾಗವಹಿಸಲು ವಿಶೇಷ ಅವಕಾಶ ಕಲ್ಪಿಸಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.

ಪತ್ರಿಕಾಪ್ರಕಟಣೆ ಮೂಲಕ ಮಾಹಿತಿ ನೀಡಿರುವ ಅವರು,ಅಭ್ಯರ್ಥಿಗಳು ಮತ್ತು ಪೋಷಕರ ನಿರಂತರ ಮನವಿಯ ಮೇರೆಗೆ ಮೆರಿಟ್ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಬಾರಿ ಇಂತಹದೊಂದು ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಹಿಂದೆ ಇಂತಹ ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್‌ನಿಂದ ಹೊರಗುಳಿಯಬೇಕಾದ ನಿಯಮವಿತ್ತು ಆದರೆ ಈಗ ಅವಕಾಶ ಸಿಗಲಿದೆ ಎಂದರು.

ಯಾರಿಗೆಲ್ಲ ಅವಕಾಶವಿದೆ? ಯಾರಿಗೆ ನಿರ್ಬಂಧ?

ಚಾಯ್ಸ್-4 ಆರಿಸಿದವರು: ತಾತ್ಕಾಲಿಕ ಫಲಿತಾಂಶದ ಬಳಿಕ ಚಾಯ್ಸ್-4 ಆಯ್ಕೆ ಮಾಡಿ ಸೀಟು ಬೇಡವೆಂದು ಬಿಟ್ಟು ಹೋದವರು ನಿಗದಿತ ಕಾಷನ್ ಡೆಪಾಸಿಟ್ ಪಾವತಿಸಿ 3ನೇ ಸುತ್ತಿನಲ್ಲಿ ಭಾಗವಹಿಸಬಹುದು.

ದಂಡ ಪಾವತಿಸಿದವರು: ಎರಡನೇ ಸುತ್ತಿನ ಅಂತಿಮ ಫಲಿತಾಂಶದ ಬಳಿಕ ದಂಡ ಕಟ್ಟಿ ಸೀಟು ರದ್ದುಪಡಿಸಿಕೊಂಡವರಿಗೂ ಅವಕಾಶವಿದೆ.

ದಂಡ ಕಟ್ಟದವರಿಗೆ ದಂಡದ ಮುಖಾಂತರ ಎಂಟ್ರಿ: ಎಂಸಿಸಿ ಅಥವಾ ಇತರ ರಾಜ್ಯಗಳಲ್ಲಿ ಸೀಟು ಸಿಕ್ಕಿದೆ ಎಂದು ಹೇಳಿ, ದಂಡ ಪಾವತಿಸದೆ ಚಾಯ್ಸ್-4 ಆರಿಸಿದವರು ₹10,000 ದಂಡ ಪಾವತಿಸಿ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಬಹುದಾಗಿದೆ.

ಇವರಿಗೆ ಪ್ರವೇಶವಿಲ್ಲ: ವೈದ್ಯಕೀಯ ಸೀಟು ಹಂಚಿಕೆಯಾದ ಬಳಿಕ ಶುಲ್ಕ ಪಾವತಿಸದ ಹಾಗೂ ಕಾಲೇಜಿಗೆ ದಾಖಲಾಗದ ಅಭ್ಯರ್ಥಿಗಳಿಗೆ ಮತ್ತು ಎಂಜಿನಿಯರಿಂಗ್ ಸೇರಿದಂತೆ ಇತರ ಕೋರ್ಸ್‌ಗಳಿಗೆ ಪ್ರವೇಶ ಪಡೆಯದ ಅಭ್ಯರ್ಥಿಗಳಿಗೆ ಈ ಸುತ್ತಿನಲ್ಲಿ ಭಾಗವಹಿಸಲು ನಿರ್ಬಂಧ ಹೇರಲಾಗಿದೆ.

ಎಂಜಿನಿಯರಿಂಗ್ ಆಕಾಂಕ್ಷಿಗಳಿಗೆ ಕಿವಿಮಾತು:

ಎಂಜಿನಿಯರಿಂಗ್ ಮತ್ತು ಇತರ ಕೋರ್ಸ್‌ಗಳಿಗೆ ಈಗಾಗಲೇ ಪ್ರವೇಶ ಪಡೆದು, ಇನ್ನೂ ಉತ್ತಮ ಕಾಲೇಜಿಗಾಗಿ ಈ ಸುತ್ತಿನಲ್ಲಿ ಭಾಗವಹಿಸುವವರು ಎಚ್ಚರಿಕೆ ವಹಿಸಬೇಕು. 3ನೇ ಸುತ್ತಿನಲ್ಲಿ ಹೊಸ ಕಾಲೇಜು ಹಂಚಿಕೆಯಾದರೆ, ಹಾಲಿ ಓದುತ್ತಿರುವ ಕಾಲೇಜಿನಿಂದ ಮೂಲ ದಾಖಲಾತಿಗಳನ್ನು ಸುಲಭವಾಗಿ ಪಡೆಯಬಹುದೇ ಎಂಬುದನ್ನು ಮೊದಲೇ ಖಾತರಿಪಡಿಸಿಕೊಂಡು ಆಪ್ಷನ್ ದಾಖಲಿಸಲು ಸೂಚಿಸಲಾಗಿದೆ.

ಆಯುಷ್ ಕೌನ್ಸೆಲಿಂಗ್ ಹಾಗೂ ಮಧ್ಯವರ್ತಿಗಳ ಎಚ್ಚರಿಕೆ:

ಸೀಟ್ ಮ್ಯಾಟ್ರಿಕ್ಸ್ ಲಭ್ಯವಾಗುವುದು ತಡವಾದ ಕಾರಣ ಆಯುಷ್ (AYUSH) ಕೌನ್ಸೆಲಿಂಗ್ ವಿಳಂಬವಾಗಿದ್ದು, ಸದ್ಯ 70 ಕಾಲೇಜುಗಳ ಸೀಟ್ ಮ್ಯಾಟ್ರಿಕ್ಸ್ ಲಭ್ಯವಾಗಿದೆ. ಹೀಗಾಗಿ ಶೀಘ್ರದಲ್ಲೇ ಆಯುಷ್ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭವಾಗಲಿದೆ. ಇದೇ ವೇಳೆ, ವೈದ್ಯಕೀಯ ಸೀಟು ಕೊಡಿಸುವುದಾಗಿ ಹಣದ ಆಮಿಷ ಒಡ್ಡುವ ಮಧ್ಯವರ್ತಿಗಳ ಜಾಲದ ಬಗ್ಗೆ ಪೋಷಕರು ಜಾಗರೂಕರಾಗಿರಬೇಕು. ಇಂತಹ ವಂಚಕರು ಕಂಡುಬಂದರೆ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡುವಂತೆ ಪ್ರಸನ್ನ ಮನವಿ ಮಾಡಿದ್ದಾರೆ.

 


Share this with Friends

Related Post