ಬೆಳಗಾವಿ: “ಪ್ರಸ್ತುತ ಜಗತ್ತಿನಲ್ಲಿ ಕೃತಕ ಬುದ್ಧಿಮತ್ತೆ (AI) ಕಲಿಕೆ ಇನ್ನು ಮುಂದೆ ಕೇವಲ ಐಚ್ಛಿಕವಾಗಿ ಉಳಿದಿಲ್ಲ. ಯುವ ಇಂಜಿನಿಯರ್‌ಗಳು ಕೇವಲ ಬುದ್ಧಿವಂತ ವ್ಯವಸ್ಥೆಗಳನ್ನು ಬಳಸುವುದನ್ನು ಮಾತ್ರ ಕಲಿಯಬಾರದು, ಬದಲಿಗೆ ತಂತ್ರಜ್ಞಾನವನ್ನು ತಾವೇ ನಿರ್ಮಿಸುವುದನ್ನು, ಪ್ರಶ್ನಿಸುವುದನ್ನು ಮತ್ತು ಜವಾಬ್ದಾರಿಯುತವಾಗಿ ಅಳವಡಿಸಿಕೊಳ್ಳುವುದನ್ನು ಕಲಿಯಬೇಕು” ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಪ್ರತಿಪಾದಿಸಿದ್ದಾರೆ.
ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (VTU) 26ನೇ ವಾರ್ಷಿಕ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.
ಯಂತ್ರಗಳನ್ನು ನೀವು ನಿಯಂತ್ರಿಸಿ:
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI), ರೊಬೊಟಿಕ್ಸ್, ಕ್ವಾಂಟಮ್ ಕಂಪ್ಯೂಟಿಂಗ್, ಬಯೋಟೆಕ್ನಾಲಜಿ, ಕ್ಲೀನ್ ಎನರ್ಜಿ ಮತ್ತು ಬಾಹ್ಯಾಕಾಶ ತಂತ್ರಜ್ಞಾನಗಳು ಇಂದಿನ ಉದ್ಯೋಗ ಕ್ಷೇತ್ರ ಹಾಗೂ ಸಮಾಜವನ್ನು ವೇಗವಾಗಿ ಮರುರೂಪಿಸುತ್ತಿವೆ. “ಈ AI ಮತ್ತು AGI ಯುಗದಲ್ಲಿ, ಯಂತ್ರಕ್ಕೆ ಈಗಾಗಲೇ ತಿಳಿದಿರುವುದನ್ನು ತಿಳಿದುಕೊಳ್ಳುವುದರಿಂದ ನಿಮಗೆ ಯಾವುದೇ ಪ್ರಯೋಜನವಿಲ್ಲ. ಬದಲಿಗೆ ಏನನ್ನು ಕೇಳಬೇಕು, ಏನನ್ನು ನಿರ್ಮಿಸಬೇಕು, ಯಾವುದನ್ನು ನಂಬಬೇಕು ಮತ್ತು ತಂತ್ರಜ್ಞಾನವು ಅಂತಿಮವಾಗಿ ಯಾವ ಉದ್ದೇಶವನ್ನು ಪೂರೈಸಬೇಕು ಎಂಬುದನ್ನು ತಿಳಿಯುವುದು ಮುಖ್ಯ. ಇಂಜಿನಿಯರ್‌ಗಳು ಯಂತ್ರವನ್ನು ನಿಯಂತ್ರಿಸಬೇಕೇ ಹೊರತು, ಯಂತ್ರದಿಂದ ನಿಯಂತ್ರಿಸಲ್ಪಡಬಾರದು” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ತಂತ್ರಜ್ಞಾನ ಗ್ರಾಮೀಣ ಭಾರತ ತಲುಪಲಿ:
AI ಕ್ರಾಂತಿಯು ಕೇವಲ ತಂತ್ರಜ್ಞಾನ ಕಂಪನಿಗಳಿಗೆ ಸೀಮಿತವಾಗಬಾರದು. ಅದು ನಮ್ಮ ಹೊಲಗದ್ದೆಗಳು, ಕಾರ್ಖಾನೆಗಳು, ಆಸ್ಪತ್ರೆಗಳು, ನಿರ್ಮಾಣ ಸ್ಥಳಗಳು ಮತ್ತು ಸಾರ್ವಜನಿಕ ಸಂಸ್ಥೆಗಳನ್ನು ತಲುಪಬೇಕು. ಭಾರತದ ಮುಂದಿನ ಶ್ರೇಷ್ಠ ಆವಿಷ್ಕಾರವು ಕರ್ನಾಟಕದ ಹಳ್ಳಿಯೊಂದರ ಕೃಷಿ ಭೂಮಿಯಿಂದ ಅಥವಾ ಸಣ್ಣ ಕಾರ್ಖಾನೆಯಿಂದ ಹೊರಹೊಮ್ಮಬಹುದು. ಕೇವಲ ಸ್ವಯಂಚಾಲಿತಗೊಳಿಸುವುದಷ್ಟೇ ನಮ್ಮ ಸವಾಲಲ್ಲ, ಬದಲಿಗೆ ಪ್ರತಿಯೊಬ್ಬ ಭಾರತೀಯನ ಉತ್ಪಾದಕತೆ, ಸಾಮರ್ಥ್ಯ ಮತ್ತು ಸಮೃದ್ಧಿಯನ್ನು ಹೆಚ್ಚಿಸುವುದಾಗಿದೆ ಎಂದರು.
ಸಾಫ್ಟ್‌ವೇರ್ ರಫ್ತಿನಲ್ಲಿ ಕರ್ನಾಟಕದ್ದೇ ಸಿಂಹಪಾಲು:
ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕದ ಸಾಧನೆಯನ್ನು ಶ್ಲಾಘಿಸಿದ ಅವರು, “2024-25ರಲ್ಲಿ ರಾಜ್ಯದ STPI ನೋಂದಾಯಿತ ಘಟಕಗಳು ಸುಮಾರು ₹4.59 ಲಕ್ಷ ಕೋಟಿ ಸಾಫ್ಟ್‌ವೇರ್ ರಫ್ತು ದಾಖಲಿಸಿದ್ದು, ಇದು ರಾಷ್ಟ್ರದ ಒಟ್ಟು ರಫ್ತಿನ ಶೇಕಡಾ 43 ರಷ್ಟಾಗಿದೆ. ನಮ್ಮ ರಾಜ್ಯದಲ್ಲಿ 550 ಜಾಗತಿಕ ಸಾಮರ್ಥ್ಯ ಕೇಂದ್ರಗಳು (GCCs) ಮತ್ತು ಸುಮಾರು 18,000 ಸ್ಟಾರ್ಟ್‌ಅಪ್‌ಗಳಿವೆ. ಕರ್ನಾಟಕವು ಕೇವಲ ಭಾರತದ ತಂತ್ರಜ್ಞಾನದ ರಾಜಧಾನಿಯಾಗಿ ಉಳಿಯದೆ, ವಿಶ್ವದ ಶ್ರೇಷ್ಠ ಆವಿಷ್ಕಾರಗಳ ಕೇಂದ್ರವಾಗಬೇಕು” ಎಂದು ಆಶಿಸಿದರು.
ಅಂಬೇಡ್ಕರ್ ಆಶಯದ ತಂತ್ರಜ್ಞಾನ:
“ಡಾ. ಬಿ.ಆರ್. ಅಂಬೇಡ್ಕರ್ ಅವರ ಶಿಕ್ಷಣದ ದೃಷ್ಟಿಕೋನದಿಂದ ಪ್ರೇರಿತರಾಗಿ, ಯುವ ಇಂಜಿನಿಯರ್‌ಗಳು ಯಾವುದೇ ತಾಂತ್ರಿಕ ಪರಿಹಾರಗಳನ್ನು ವಿನ್ಯಾಸಗೊಳಿಸುವಾಗ ದೇಶದ ರೈತರು, ಚಮ್ಮಾರರು, ಪೌರಕಾರ್ಮಿಕರು, ನೇಕಾರರು, ಅಂಗವಿಕಲರು, ವೃದ್ಧರು ಮತ್ತು ದೂರದ ಹಳ್ಳಿಗಳ ಮಕ್ಕಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ತಂತ್ರಜ್ಞಾನವು ಅಸಮಾನತೆಯನ್ನು ಕಡಿಮೆ ಮಾಡಬೇಕೇ ಹೊರತು ಅದನ್ನು ಹೆಚ್ಚಿಸಬಾರದು” ಎಂದು ಕರೆ ನೀಡಿದರು.
ಪದವೀಧರರಿಗೆ 5 ಪ್ರಮುಖ ಸೂತ್ರಗಳು:
ಪದವಿ ಪಡೆದ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಐದು ತತ್ವಗಳನ್ನು ಅಳವಡಿಸಿಕೊಳ್ಳಬೇಕೆಂದು ಡಿಸಿಎಂ ಕರೆ ನೀಡಿದರು:
ನಿರಂತರ ಕಲಿಕೆ (Never stop learning)
ಆವಿಷ್ಕರಿಸುವ ಧೈರ್ಯ (Courage to innovate)
ಪ್ರಾಮಾಣಿಕತೆಯ ರಕ್ಷಣೆ (Protect integrity)
ಸಹಾನುಭೂತಿ ಉಳ್ಳವರಾಗಿರುವುದು (Remain compassionate)
ಜ್ಞಾನವು ಸಮಾಜ ಮತ್ತು ರಾಷ್ಟ್ರದ ಕಡೆಗಿನ ಜವಾಬ್ದಾರಿ ಎಂಬುದನ್ನು ನೆನಪಿನಲ್ಲಿಡುವುದು.
ಇದೇ ವೇಳೆ ಮಾತನಾಡಿದ ಅವರು, ವಿಟಿಯು ವಿಶ್ವವಿದ್ಯಾಲಯವು ತನ್ನ ಪಠ್ಯಕ್ರಮವನ್ನು ಆಧುನೀಕರಿಸಬೇಕು, ಸಂಶೋಧನೆ ಮತ್ತು ಉದ್ಯಮಗಳೊಂದಿಗಿನ ಸಹಯೋಗವನ್ನು ಬಲಪಡಿಸಬೇಕು ಮತ್ತು ಉದ್ಯಮಶೀಲತೆಯನ್ನು ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.

