ಹುಬ್ಬಳ್ಳಿ: ರಾಜ್ಯದ ಅನ್ನದಾತರು ತೀವ್ರ ಬರಗಾಲದಿಂದ ಕಂಗಾಲಾಗಿದ್ದು, ಸರ್ಕಾರ ತಕ್ಷಣವೇ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು ಎಂದು ಕುಂದಗೋಳ ಕ್ಷೇತ್ರದ ಬಿಜೆಪಿ ಶಾಸಕ ಎಂ.ಆರ್. ಪಾಟೀಲ್ ಒತ್ತಾಯಿಸಿದ್ದಾರೆ. ಸರ್ಕಾರ ಒಂದು ವೇಳೆ ಈ ನಿರ್ಧಾರ ಕೈಗೊಂಡರೆ, ರೈತರ ನೆರವಿಗಾಗಿ ತಾವು ತಮ್ಮ ಒಂದು ವರ್ಷದ ಸಂಪೂರ್ಣ ವೇತನವನ್ನು ಸರ್ಕಾರಕ್ಕೆ ಬಿಟ್ಟುಕೊಡುವುದಾಗಿ ಅವರು ಮಹತ್ವದ ಘೋಷಣೆ ಮಾಡಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಧಾರವಾಡ ಜಿಲ್ಲೆ ಹಾಗೂ ಕುಂದಗೋಳ ತಾಲೂಕು ವ್ಯಾಪ್ತಿಯಲ್ಲಿ ಮಳೆಯಿಲ್ಲದೆ ಭೀಕರ ಬರಗಾಲ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಯ ಕೊರತೆಯಿಂದಾಗಿ ರೈತರು ಎರಡು ಬಾರಿ ಬಿತ್ತನೆ ಮಾಡಿದ್ದರೂ ಬೆಳೆಗಳೆಲ್ಲ ಒಣಗಿ ಕೈಗೆ ಬಾರದಂತಾಗಿ ತೀವ್ರ ನಷ್ಟ ಅನುಭವಿಸಿದ್ದಾರೆ. ಹೀಗಾಗಿ ಸರ್ಕಾರ ಪ್ರಸ್ತುತ ಘೋಷಿಸಿರುವ ಸಾಧಾರಣ ಬರಗಾಲದ ನಿಯಮಗಳನ್ನು ಕೈಬಿಟ್ಟು, ಇದನ್ನು ‘ತೀವ್ರ ಬರಗಾಲ’ ಎಂದು ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಪರಿಹಾರ ಕಣ್ಣೊರೆಸುವ ತಂತ್ರ:
ಪ್ರಸ್ತುತ ಸರ್ಕಾರ ನೀಡುತ್ತಿರುವ 2,500 ರೂಪಾಯಿ ಬೆಳೆಹಾನಿ ಸಹಾಯಧನ ಹಾಗೂ ಮನೆ ಹಾನಿಗೆ ನೀಡುತ್ತಿರುವ 5,000 ದಿಂದ 7,000 ರೂಪಾಯಿಗಳ ಪರಿಹಾರವು ತೀರಾ ಅತ್ಯಲ್ಪವಾಗಿದ್ದು, ಇದು ಕೇವಲ ಕಣ್ಣೊರೆಸುವ ತಂತ್ರವಾಗಿದೆ ಎಂದು ಪಾಟೀಲ್ ಕಟುವಾಗಿ ಟೀಕಿಸಿದರು. ಇದರ ಬದಲಾಗಿ ಸರ್ಕಾರ ಎಕರೆಗೆ ಕನಿಷ್ಠ 50,000 ರೂಪಾಯಿಗಳಷ್ಟು ಬೆಳೆಹಾನಿ ಪರಿಹಾರವನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಗೋಶಾಲೆ ಆರಂಭಕ್ಕೆ ಆಗ್ರಹ:
ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುತ್ತಿದ್ದು, ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದೆ. ಆದ್ದರಿಂದ ಸರ್ಕಾರ ವಿಳಂಬ ಮಾಡದೆ ತಕ್ಷಣವೇ ಮೇವಿನ ಬ್ಯಾಂಕುಗಳನ್ನು ತೆರೆಯಬೇಕು ಮತ್ತು ಗೋಶಾಲೆಗಳನ್ನು ಸ್ಥಾಪಿಸಿ ಜಾನುವಾರುಗಳನ್ನು ರಕ್ಷಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

