Mon. Sep 28th, 2026

ಬರ ಪರಿಹಾರ ನಿಯೋಗಕ್ಕೆ ಬಿಜೆಪಿ ಬಾರದಿದ್ದರೆ ಕಪಟ ನಾಟಕ ಸಾಬೀತು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಾಗ್ದಾಳಿ

Share this with Friends

ಬೆಂಗಳೂರು: ರಾಜ್ಯದ ಬರ ಪರಿಸ್ಥಿತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಜಂಟಿ ಮನವಿ ಸಲ್ಲಿಸಲು ಕರೆಯಲಾಗಿರುವ ಸರ್ವಪಕ್ಷ ನಿಯೋಗದಲ್ಲಿ ಬಿಜೆಪಿ ಪಾಲ್ಗೊಳ್ಳದಿದ್ದರೆ, ಅವರ ರೈತ ವಿರೋಧಿ ಧೋರಣೆ ಮತ್ತು ಕಪಟ ನಾಟಕ ಬಹಿರಂಗವಾಗಲಿದೆ ಎಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷಗಳು ಕೈಜೋಡಿಸದಿದ್ದರೂ ರಾಜ್ಯ ಸರ್ಕಾರವು ರೈತರ ಹಿತರಕ್ಷಣೆಯಿಂದ ಹಿಂದೆ ಸರಿಯುವುದಿಲ್ಲ ಮತ್ತು ಅವರ ಕಲ್ಯಾಣಕ್ಕಾಗಿ ಸ್ವತಂತ್ರವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.

ರಾಜ್ಯದ ರೈತರಿಗೆ ತಲಾ 25 ರಿಂದ 50 ಸಾವಿರ ರೂಪಾಯಿ ಪರಿಹಾರ ನೀಡಬೇಕೆಂದು ಒತ್ತಾಯಿಸುವ ಬಿಜೆಪಿ ನಾಯಕರಿಗೆ ಕೇಂದ್ರದಿಂದ ಹಣ ಕೊಡಿಸುವ ಧೈರ್ಯವಿಲ್ಲ ಎಂದು ಟೀಕಿಸಿದ ಅವರು, ವಿಪಕ್ಷಗಳ ಈ ನಡೆಯಿಂದ ಅವರಿಗೆ ಅನ್ನದಾತರ ಬಗ್ಗೆ ನಿಜವಾದ ಕಾಳಜಿ ಇಲ್ಲದಿರುವುದು ಸಾಬೀತಾಗಿದೆ ಎಂದರು. ಇದೇ ಅಕ್ಟೋಬರ್ 3 ರಂದು ಬರ ಅಧ್ಯಯನಕ್ಕಾಗಿ ಕೇಂದ್ರದ ವಿಶೇಷ ತಂಡವು ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಕಾನೂನಿನ ಚೌಕಟ್ಟಿನಲ್ಲಿ ನಮ್ಮ ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಬರ ಪರಿಸ್ಥಿತಿ ಹಾಗೂ ವಿವಾದಿತ ಕಸ್ತೂರಿರಂಗನ್ ವರದಿ ಕುರಿತು ಸುದೀರ್ಘವಾಗಿ ಚರ್ಚಿಸಲು ಶೀಘ್ರದಲ್ಲೇ ಸರ್ವಪಕ್ಷ ಸಭೆಯ ದಿನಾಂಕವನ್ನು ನಿಗದಿಪಡಿಸಲಾಗುವುದು. ಜೊತೆಗೆ, ಕಸ್ತೂರಿರಂಗನ್ ವರದಿ ಜಾರಿ ತಡೆ ಹಾಗೂ ರಾಜ್ಯದ ಹಿತಾಸಕ್ತಿ ಕಾಯುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಮತ್ತು ಸಂಬಂಧಪಟ್ಟ ಕೇಂದ್ರ ಸಚಿವರ ಭೇಟಿಗೆ ಸಮಯ ಕೋರಲಾಗಿದ್ದು, ದೆಹಲಿಗೆ ತೆರಳಿ ರಾಜ್ಯದ ಪರವಾಗಿ ಅಧಿಕೃತ ಮನವಿ ಸಲ್ಲಿಸಲಾಗುವುದು ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು

 


Share this with Friends

Related Post