Mon. Sep 28th, 2026

ವದಂತಿಗಳಿಗೆ ತೆರೆ: ಮೈಸೂರು ದಸರಾ ಉದ್ಘಾಟನೆಗೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳಿಗೆ ಅಧಿಕೃತ ಆಹ್ವಾನ ಸಲ್ಲಿಕೆ

Share this with Friends

ಕೊಪ್ಪಳ: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟಕರ ಆಯ್ಕೆ ಹಾಗೂ ಆಹ್ವಾನದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಎಲ್ಲಾ ಗೊಂದಲ ಹಾಗೂ ವದಂತಿಗಳಿಗೆ ರಾಜ್ಯ ಸರ್ಕಾರ ಅಧಿಕೃತವಾಗಿ ತೆರೆ ಎಳೆದಿದೆ. ನಾಡಹಬ್ಬವನ್ನು ಉದ್ಘಾಟಿಸಲಿರುವ ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳಿಗೆ ಸೋಮವಾರ ಸರ್ಕಾರದ ವತಿಯಿಂದ ಯಶಸ್ವಿಯಾಗಿ ಅಧಿಕೃತ ಆಮಂತ್ರಣ ನೀಡಲಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್. ತಂಗಡಗಿ ಅವರು ಗವಿಮಠಕ್ಕೆ ಖುದ್ದು ಭೇಟಿ ನೀಡಿ, ಶ್ರೀಗಳಿಗೆ ಫಲಪುಷ್ಪ ನೀಡಿ ಗೌರವಪೂರ್ವಕವಾಗಿ ಆಹ್ವಾನಿಸಿದರು. ಮುಖ್ಯಮಂತ್ರಿಗಳು ಶ್ರೀಗಳ ಹೆಸರನ್ನು ಘೋಷಿಸಿದ ಬೆನ್ನಲ್ಲೇ, “ಶ್ರೀಗಳು ದಸರಾ ಉದ್ಘಾಟನೆಯ ಆಹ್ವಾನವನ್ನು ತಿರಸ್ಕರಿಸಿದ್ದಾರೆ” ಎಂಬ ಆಧಾರರಹಿತ ಮತ್ತು ಸುಳ್ಳು ಸುದ್ದಿಯೊಂದು ಜಾಲತಾಣಗಳಲ್ಲಿ ವೈರಲ್ ಆಗಿ ಸಾರ್ವಜನಿಕರಲ್ಲಿ ತೀವ್ರ ಗೊಂದಲ ಮೂಡಿಸಿತ್ತು. ಈ ಸುಳ್ಳು ಸುದ್ದಿ ಹರಡಿದ ಡಿಜಿಟಲ್ ಮಾಧ್ಯಮದ ವಿರುದ್ಧ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಸ್ವಯಂಪ್ರೇರಿತ (ಸುಮೋಟೋ) ಪ್ರಕರಣ ದಾಖಲಿಸಲಾಗಿದೆ.

ಈ ಗೊಂದಲದ ಬಗ್ಗೆ ಸ್ಪಷ್ಟನೆ ನೀಡಿದ ಸಚಿವ ತಂಗಡಗಿ ಹಾಗೂ ಸ್ಥಳೀಯ ಶಾಸಕ ರಾಘವೇಂದ್ರ ಹಿಟ್ನಾಳ್, “ಶ್ರೀಗಳ ಪೂರ್ವ ಸಮ್ಮತಿ ಪಡೆದೇ ಸರ್ಕಾರ ಅವರ ಹೆಸರನ್ನು ಅಂತಿಮಗೊಳಿಸಿತ್ತು. ಮಠದ ವತಿಯಿಂದಲೂ ಯಾವುದೇ ನಿರಾಕರಣೆಯ ಪ್ರಕಟಣೆ ಬಂದಿರಲಿಲ್ಲ. ಕೆಲವರು ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿಸಲು ಯತ್ನಿಸಿದ್ದರು” ಎಂದು ವದಂತಿಗಳನ್ನು ತಳ್ಳಿಹಾಕಿದರು.

ಈ ಸಂದರ್ಭದಲ್ಲಿ ಸಂಸದ ರಾಜಶೇಖರ್ ಹಿಟ್ನಾಳ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ನಾಗಪ್ಪ, ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಹಾಗೂ ಕೊಪ್ಪಳ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ಉಪಸ್ಥಿತರಿದ್ದು ಶ್ರೀಗಳ ಆಶೀರ್ವಾದ ಪಡೆದರು.

 


Share this with Friends

Related Post