ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ, ನಿಯೋಜಿತ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಿದ್ದರಾಮಯ್ಯ ಅವರ ಆಡಳಿತ ವೈಖರಿ ಮತ್ತು 50 ವರ್ಷಗಳ ರಾಜಕೀಯ ಯಾನವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಹಾಗೂ ಭಾವನಾತ್ಮಕ ಸಂದೇಶವೊಂದನ್ನು ಹಂಚಿಕೊಂಡಿರುವ ಅವರು, ಸಿದ್ದರಾಮಯ್ಯ ಅವರನ್ನು “ಭಾರತೀಯ ರಾಜಕಾರಣದ ಧೀಮಂತ ನಾಯಕ” ಎಂದು ಬಣ್ಣಿಸಿದ್ದಾರೆ.
“ದೇವರು ಅವಕಾಶ ಮಾತ್ರ ಕೊಡುತ್ತಾನೆ”:
ತಮ್ಮ ಸಂದೇಶದ ಆರಂಭದಲ್ಲೇ ಅತ್ಯಂತ ಅರ್ಥಗರ್ಭಿತ ಸಾಲುಗಳನ್ನು ಬರೆದುಕೊಂಡಿರುವ ಡಿ.ಕೆ. ಶಿವಕುಮಾರ್, “ದೇವರು ವರನೂ ಕೊಡಲ್ಲ, ಶಾಪನೂ ಕೊಡಲ್ಲ. ಅವಕಾಶ ಮಾತ್ರ ಕೊಡುತ್ತಾನೆ. ಆ ಕೊಟ್ಟಿರುವ ಅವಕಾಶದಲ್ಲಿ ನಾವು ಏನು ಸಾಧನೆ ಮಾಡುತ್ತೇವೆ ಎಂಬುದು ಮುಖ್ಯ. ಇದಕ್ಕೆ ಅತ್ಯುತ್ತಮ ಉದಾಹರಣೆಯೇ ನಮ್ಮ ಸಿದ್ದರಾಮಯ್ಯನವರು” ಎಂದು ಕೊಂಡಾಡಿದ್ದಾರೆ.
ಸಾಮಾಜಿಕ ನ್ಯಾಯದ ಹರಿಕಾರ:
ಮೈಸೂರಿನ ಹಳ್ಳಿಯೊಂದರಿಂದ ಬಂದು ಹೋರಾಟದ ಮೂಲಕ ಉನ್ನತ ಸ್ಥಾನಕ್ಕೇರಿದ ಸಿದ್ದರಾಮಯ್ಯ ಅವರ ಹಾದಿಯನ್ನು ಸ್ಮರಿಸಿರುವ ಡಿ.ಕೆ. ಶಿವಕುಮಾರ್, “ಸಾಮಾಜಿಕ ನ್ಯಾಯದ ಹರಿಕಾರ ಹಾಗೂ ಬಡವರ ಬಂಧುವಾಗಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ನನ್ನ ಆತ್ಮೀಯರಾದ ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಯಶಸ್ವಿ, ಪ್ರಭಾವಶಾಲಿ ಹಾಗೂ ದೀರ್ಘಾವಧಿ ಮುಖ್ಯಮಂತ್ರಿಯಾಗಿ ಅವರು ಜನಮಾನಸದಲ್ಲಿ ನೆಲೆಸಿದ್ದಾರೆ. ಅವರ ಜನಪರ ಯೋಜನೆಗಳು ಹಾಗೂ ಅಭಿವೃದ್ಧಿ ಕೊಡುಗೆಗಳು ಅವಿಸ್ಮರಣೀಯ” ಎಂದು ಹೇಳಿದ್ದಾರೆ.
ಹೆಗಲಿಗೆ ಹೆಗಲು ಕೊಟ್ಟ ನಾಯಕ:
ತಮ್ಮ ಕೆಪಿಸಿಸಿ ಅಧ್ಯಕ್ಷ ಅವಧಿಯ ದಿನಗಳನ್ನು ನೆನೆದ ಡಿ.ಕೆ. ಶಿವಕುಮಾರ್, “2020ರಲ್ಲಿ ನಾನು ಕೆಪಿಸಿಸಿ ಅಧ್ಯಕ್ಷನಾಗಿ ಆಯ್ಕೆಯಾದ ದಿನದಿಂದಲೂ ಇಂದಿನವರೆಗೆ, ಸಿದ್ದರಾಮಯ್ಯನವರು ನನ್ನ ಹೆಗಲಿಗೆ ಹೆಗಲು ಕೊಟ್ಟು ಪಕ್ಷ ಸಂಘಟನೆಯಲ್ಲಿ ಜೊತೆಯಾಗಿ ನಿಂತಿದ್ದಾರೆ. ಅವರ ಆಡಳಿತದಲ್ಲಿ ನಾನು ಸಚಿವನಾಗಿ, ಉಪಮುಖ್ಯಮಂತ್ರಿಯಾಗಿ ಮಾರ್ಗದರ್ಶನ ಪಡೆದುಕೊಂಡಿದ್ದು ನನ್ನ ಭಾಗ್ಯ. ಮುಂದಿನ ದಿನಗಳಲ್ಲೂ ರಾಜ್ಯದ ಹಿತದೃಷ್ಟಿಯಿಂದ ಹಾಗೂ ನಮ್ಮ ಪಕ್ಷದ ಬಲವರ್ಧನೆಗೆ ಅವರ ಮಾರ್ಗದರ್ಶನ, ಹಿರಿಯ ಅನುಭವ ನಮಗೆ ಹೀಗೆಯೇ ಮುಂದುವರಿಯಲಿ. ಕರ್ನಾಟಕದ ಪ್ರಗತಿಗಾಗಿ ನಾವೆಲ್ಲರೂ ಒಟ್ಟಾಗಿ ನಡೆಯೋಣ” ಎಂದು ಒಗ್ಗಟ್ಟಿನ ಕರೆ ನೀಡಿದ್ದಾರೆ.

