Sat. Oct 10th, 2026

ಮಠಮಾನ್ಯಗಳ ಸಮಾಜಮುಖಿ ಸೇವೆ ಶ್ಲಾಘನೀಯ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

Share this with Friends

ಬೆಂಗಳೂರು: “ಸರ್ಕಾರಗಳು ಏನೇ ಯೋಜನೆಗಳನ್ನು ಜಾರಿಗೆ ತಂದರೂ, ಸಮಾಜದಲ್ಲಿ ಗುರುಗಳು ಮತ್ತು ಮಠಮಾನ್ಯಗಳು ಮಾಡುತ್ತಿರುವ ಕಾರ್ಯಗಳು ಅತ್ಯಂತ ಶ್ಲಾಘನೀಯ. ಅಕ್ಷರ, ಅನ್ನ ಹಾಗೂ ಧರ್ಮ ದಾಸೋಹದ ಮೂಲಕ ಮಠಾಧೀಶರು ಸಮಾಜದ ಏಳಿಗೆಗೆ ಶ್ರಮಿಸುತ್ತಿದ್ದಾರೆ,” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಗದಗ ಜಿಲ್ಲೆಯ ಶಿರಹಟ್ಟಿ ಭಾವೈಕ್ಯತಾ ಫಕೀರೇಶ್ವರ ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಅವರ ನೇತೃತ್ವದಲ್ಲಿ ಆಗಮಿಸಿದ್ದ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ 25ಕ್ಕೂ ಹೆಚ್ಚು ಮಠಾಧೀಶರ ನಿಯೋಗವನ್ನು ಶನಿವಾರ ತಮ್ಮ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಬರಮಾಡಿಕೊಂಡು ಅವರು ಮಾತನಾಡಿದರು.

ಸಮಾಜ ಒಗ್ಗೂಡಿಸುವುದೇ ನಮ್ಮ ಧರ್ಮ

ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, “ಹಿಂದೆ ವೀರಶೈವ-ಲಿಂಗಾಯತ ಸಮುದಾಯವನ್ನು ವಿಭಜಿಸುವ ಪ್ರಯತ್ನ ನಡೆದಾಗ ನಾನು ಮುಕ್ತವಾಗಿ ಗುರುಗಳ ಕ್ಷಮೆ ಕೇಳಿದ್ದೆ. ನಮ್ಮದು ಸಮಾಜವನ್ನು ಸೂಜಿಯಂತೆ ಹೊಲಿದು ಒಗ್ಗೂಡಿಸುವ ಕೆಲಸವೇ ಹೊರತು, ಕತ್ತರಿಯಂತೆ ಕತ್ತರಿಸಿ ವಿಭಜಿಸುವುದಲ್ಲ. ಒಗ್ಗಟ್ಟಿನಲ್ಲಿಯೇ ನಿಜವಾದ ಶಕ್ತಿ ಅಡಗಿದೆ,” ಎಂದರು.

ತಮ್ಮ ಧಾರ್ಮಿಕ ನಂಬಿಕೆಗಳನ್ನು ಸ್ಮರಿಸಿದ ಅವರು, “ನಾನು ವೀರ ಗಂಗಾಧರ ಅಜ್ಜಯ್ಯನವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದನ್ನು ನೋಡಿ ದೇಶದ ನಾಯಕರೇ ಅಚ್ಚರಿ ಪಟ್ಟಿದ್ದರು. ಬಾಳೆಹೊನ್ನೂರು ಮಠ ಸೇರಿದಂತೆ ಹಲವು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ಅಲ್ಲಿನ ಆಚಾರ-ವಿಚಾರಗಳನ್ನು ಹತ್ತಿರದಿಂದ ಗಮನಿಸಿದ್ದೇನೆ. ಮಾನವೀಯತೆಯೇ ನಿಜವಾದ ಧರ್ಮ,” ಎಂದು ಪ್ರತಿಪಾದಿಸಿದರು.

ದಸರಾ ಉದ್ಘಾಟನೆ ವಿಚಾರ: ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ

ಇದೇ ವೇಳೆ ಮೈಸೂರು ದಸರಾ ಉದ್ಘಾಟನೆಗೆ ಸಂಬಂಧಿಸಿದ ಗೊಂದಲಗಳಿಗೆ ತೆರೆ ಎಳೆದ ಅವರು, “ಈ ಬಾರಿಯ ದಸರಾ ಮಹೋತ್ಸವವನ್ನು ಕೊಪ್ಪಳದ ಗವಿಸಿದ್ದೇಶ್ವರ ಮಠದ ಶ್ರೀಗಳು ಉದ್ಘಾಟಿಸಲಿದ್ದಾರೆ. ಅವರ ಮಹೋನ್ನತ ವ್ಯಕ್ತಿತ್ವ ಮತ್ತು ಸಮಾಜಸೇವೆಯನ್ನು ಇಡೀ ನಾಡು ಒಪ್ಪಿದೆ. ಅವರೊಂದಿಗೆ ಸಮಾಲೋಚನೆ ನಡೆಸಿಯೇ ಹೆಸರನ್ನು ಅಂತಿಮಗೊಳಿಸಲಾಗಿತ್ತು. ಆದರೆ, ಕೆಲವರು ಶ್ರೀಗಳು ಉದ್ಘಾಟನೆಗೆ ಒಪ್ಪಿಲ್ಲ ಎಂಬ ಸುಳ್ಳು ಸುದ್ದಿ ಹಬ್ಬಿಸಿ ರಾಜಕೀಯ ಮಾಡಲು ಯತ್ನಿಸಿದರು,” ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರಕ್ಕೆ ಶ್ರೀಗಳ ಆಶೀರ್ವಾದ

ತಮಗೆ ಸಿಕ್ಕಿರುವ ಅಧಿಕಾರದ ಅವಧಿಯಲ್ಲಿ ಜನರ ಹೃದಯ ಗೆದ್ದು ಕೆಲಸ ಮಾಡುವುದೇ ಏಕೈಕ ಗುರಿ ಎಂದ ಸಿಎಂ, “ಪೂಜ್ಯ ಸ್ವಾಮೀಜಿಗಳು ನೀಡಿರುವ ಆಶೀರ್ವಾದ ಕೇವಲ ನನಗಷ್ಟೇ ಅಲ್ಲ, ಇಡೀ ಸರ್ಕಾರಕ್ಕೆ ಸಂದಿದ್ದಾಗಿದೆ. ಮಠಮಾನ್ಯಗಳ ಸಹಕಾರ ಮತ್ತು ಮಾರ್ಗದರ್ಶನ ಮುಂದೆಯೂ ಹೀಗೆಯೇ ಇರಲಿ,” ಎಂದು ಮನವಿ ಮಾಡಿದರು.

 


Share this with Friends

Related Post