Fri. Oct 9th, 2026

ಸಾಹಸಸಿಂಹ ವಿಷ್ಣುವರ್ಧನ ಅಮೃತ ಮಹೋತ್ಸವ ಸಾರ್ಥಕತೆ: ಕಿದ್ವಾಯಿ ಕ್ಯಾನ್ಸರ್ ರೋಗಿಗಳಿಗೆ 50 ಯೂನಿಟ್ ರಕ್ತದಾನ

Share this with Friends

ಬೆಂಗಳೂರು: ಕನ್ನಡ ಚಿತ್ರರಂಗದ ದೃವತಾರೆ, ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಅಮೃತ ಮಹೋತ್ಸವದ (75ನೇ ಜನ್ಮದಿನೋತ್ಸವ) ಅಂಗವಾಗಿ ವಿಷ್ಣು ಸೇನಾ ಸಮಿತಿ ಬಿ ಎಸ್ ಕೆ ಜೀವಾಶ್ರಯ ರಕ್ತ ಕೇಂದ್ರದ ಸಹಯೋಗದಲ್ಲಿ ಅಭಿಮಾನಿಗಳು ಹಮ್ಮಿಕೊಂಡಿದ್ದ ಬೃಹತ್ ರಕ್ತದಾನ ಶಿಬಿರವು ಅತ್ಯಂತ ಸಾರ್ಥಕತೆಯನ್ನು ಪಡೆದುಕೊಂಡಿದೆ. ಈ ಅಭಿಯಾನದಲ್ಲಿ ಸಂಗ್ರಹಿಸಲಾದ ರಕ್ತದ ಪೈಕಿ 50 ಯೂನಿಟ್‌ಗಳಷ್ಟು ರಕ್ತವನ್ನು ನಗರದ ಕಿದ್ವಾಯಿ ಸ್ಮಾರಕ ಗ್ರಂಥಿ ರೋಗಗಳ ಸಂಸ್ಥೆಯಲ್ಲಿ (Kidwai Hospital) ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವ ಬಡ ರೋಗಿಗಳ ತುರ್ತು ಬಳಕೆಗೆ ಹಸ್ತಾಂತರಿಸಲಾಗಿದೆ. ಈ ಮೂಲಕ ರಕ್ತ ಕೇಂದ್ರವು ತನ್ನ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಿ ಮಾದರಿಯಾಗಿದೆ.

ಅಭಿಮಾನಿಗಳ ಪ್ರೀತಿಯ ‘ಯಜಮಾನ’ನ ಜನ್ಮದಿನವನ್ನು ಕೇವಲ ಆಡಂಬರದ ಆಚರಣೆಗಳಿಗೆ ಸೀಮಿತಗೊಳಿಸದೆ, ಸಮಾಜಮುಖಿ ಕಾರ್ಯಗಳ ಮೂಲಕ ಆಚರಿಸುವ ವಿಷ್ಣು ಅವರ ಆಶಯವನ್ನು ಅಭಿಮಾನಿ ಸಂಘಟನೆಗಳು ಈ ಬಾರಿಯೂ ಮುಂದುವರಿಸಿವೆ.

ಕ್ಯಾನ್ಸರ್ ಪೀಡಿತರಿಗೆ ಜೀವರಕ್ಷಕ:

ಕ್ಯಾನ್ಸರ್ ರೋಗಿಗಳಿಗೆ ಕಿಮೋಥೆರಪಿ ಹಾಗೂ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ರಕ್ತದ ಅವಶ್ಯಕತೆ ಹೆಚ್ಚಾಗಿರುತ್ತದೆ. ಅದರಲ್ಲೂ ಆರ್ಥಿಕವಾಗಿ ಹಿಂದುಳಿದ ನೂರಾರು ರೋಗಿಗಳು ಪ್ರತಿದಿನ ಚಿಕಿತ್ಸೆಗಾಗಿ ಕಿದ್ವಾಯಿ ಆಸ್ಪತ್ರೆಯನ್ನು ಅವಲಂಬಿಸಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿರುವ ರೋಗಿಗಳಿಗೆ ನೆರವಾಗುವ ನಿಟ್ಟಿನಲ್ಲಿ ವಿಷ್ಣು ಅಮೃತ ಮಹೋತ್ಸವದ ರಕ್ತವನ್ನು ಕಿದ್ವಾಯಿಗೆ ನೀಡಲು ಅಭಿಮಾನಿಗಳು ತೀರ್ಮಾನಿಸಿದ್ದರು. ಅಭಿಮಾನಿಗಳ ಈ ಅಪರೂಪದ ಮಾನವೀಯ ಕಾರ್ಯವನ್ನು ಆಸ್ಪತ್ರೆಯ ವೈದ್ಯರು ಹಾಗೂ ಸಾರ್ವಜನಿಕರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. “ಡಾ. ವಿಷ್ಣುವರ್ಧನ್ ಅವರು ಬದುಕಿದ್ದಾಗಲೂ ರಕ್ತದಾನ ಮತ್ತು ನೇತ್ರದಾನದಂತಹ ಸಾಮಾಜಿಕ ಜಾಗೃತಿ ಮೂಡಿಸುತ್ತಿದ್ದರು. ಅವರ ಅಗಲಿಕೆಯ ನಂತರವೂ ಅವರ ಹೆಸರಿನಲ್ಲಿ ಜೀವ ಉಳಿಸುವ ಮಹತ್ಕಾರ್ಯ ನಡೆಯುತ್ತಿರುವುದು ಅವರ ಮೇಲಿರುವ ಭಕ್ತಿಗೆ ಸಾಕ್ಷಿ” ಎಂದು ಅಭಿಮಾನಿಗಳು ಹೆಮ್ಮೆಯಿಂದ ಹಂಚಿಕೊಂಡಿದ್ದಾರೆ.

ಈ ವೇಳೆ ಬಿ ಎಸ್ ಕೆ ಜೀವಾಶ್ರಯ ರಕ್ತ ಕೇಂದ್ರದ ಸಂಸ್ಥಾಪಕರಾದ ವೆಂಕಟ ರೆಡ್ಡಿ. ಕೆ, ಟ್ರಸ್ಟಿ ರಚನಾ ಮಂಜುನಾಥ್, ಕಿದ್ವಾಯಿ ರಕ್ತ ಕೇಂದ್ರದ ಶರತ್ ಮತ್ತು ಇತರರು ಇದ್ದರು.

 


Share this with Friends

Related Post