ಬೆಂಗಳೂರು: ಸಿಲಿಕಾನ್ ಸಿಟಿಯ ಹೆಬ್ಬಾಗಿಲಿನಲ್ಲಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಪರಿಸರಕ್ಕೆ ಯಾವುದೇ ಧಕ್ಕೆಯಾಗದಂತೆ ಸುಸ್ಥಿರ ಪ್ರಕೃತಿ ಆಧಾರಿತ ಪ್ರವಾಸೋದ್ಯಮವನ್ನು (Eco-Tourism) ಅಭಿವೃದ್ಧಿಪಡಿಸಲು ಸರ್ಕಾರ ಹೊಸ ಯೋಜನೆಗಳನ್ನು ರೂಪಿಸುತ್ತಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಬನ್ನೇರುಘಟ್ಟದ ಸೌಂದರ್ಯ ಹಾಗೂ ಪರಿಸರ ಪ್ರವಾಸೋದ್ಯಮದ ಕುರಿತು ವಿಶೇಷ ಪೋಸ್ಟ್ ಹಂಚಿಕೊಂಡಿರುವ ಅವರು, ಇಂದಿನ ಪ್ರವಾಸಿಗರಿಗೂ ಮತ್ತು ನಾಳಿನ ಪೀಳಿಗೆಗೂ ಪ್ರಕೃತಿಯನ್ನು ರಕ್ಷಿಸಿಕೊಡುವ ನಿಟ್ಟಿನಲ್ಲಿ ಹೊಸ ಹೆಜ್ಜೆ ಇಡಲಾಗುತ್ತಿದೆ ಎಂದು ವಿವರಿಸಿದ್ದಾರೆ.
ಕಾಡಿನ ಅನುಭವ – ಮರೆಯಲಾಗದ ಸಫಾರಿ:
ಬನ್ನೇರುಘಟ್ಟದ ದಟ್ಟ ಕಾಡಿನ ನಡುವೆ ಕೈಗೊಳ್ಳುವ ಸಫಾರಿಯ ರೋಮಾಂಚನ ಮತ್ತು ಅಲ್ಲಿ ಸಿಗುವ ನೆಮ್ಮದಿಯ ಅನುಭವ ಅಪರೂಪದ್ದು. ಪ್ರವಾಸಿಗರ ಅನುಕೂಲಕ್ಕಾಗಿ ಇಲಾಖೆಯು ಅತ್ಯಂತ ಸುಲಭವಾದ ಆನ್ಲೈನ್ ಬುಕಿಂಗ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಇದರೊಂದಿಗೆ, ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ (JLR) ವತಿಯಿಂದ ಪ್ರವಾಸಿಗರಿಗೆ ಉತ್ತಮ ದರ್ಜೆಯ ವಸತಿ ಮತ್ತು ಆಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದ್ದು, ಪ್ರಕೃತಿಯ ಮಡಲಿನಲ್ಲಿ ಕಾಲ ಕಳೆಯಲು ಮರೆಯಲಾಗದ ಯೋಜನೆಗಳನ್ನು ಸಿದ್ಧಪಡಿಸಲಾಗಿದೆ ಎಂದು ಸಚಿವರು ಶ್ಲಾಘಿಸಿದ್ದಾರೆ.
ಸುಸ್ಥಿರ ಪ್ರವಾಸೋದ್ಯಮದ ಚರ್ಚೆ:
ಅಭಿವೃದ್ಧಿಯ ಹೆಸರಿನಲ್ಲಿ ಕಾಡು ಮತ್ತು ಪರಿಸರ ನಾಶವಾಗಬಾರದು ಎಂಬ ಕಾಳಜಿ ವ್ಯಕ್ತಪಡಿಸಿರುವ ಕೆ.ಜೆ. ಜಾರ್ಜ್, ಪ್ರಕೃತಿಯ ಸಹಜ ಸೌಂದರ್ಯಕ್ಕೆ ಯಾವುದೇ ಧಕ್ಕೆ ಬಾರದಂತೆ ಪ್ರವಾಸೋದ್ಯಮವನ್ನು ಹೇಗೆ ಬೆಳೆಸಬೇಕು ಎಂಬುದರ ಕುರಿತು ಪ್ರವಾಸೋದ್ಯಮ ಇಲಾಖೆ ಹಾಗೂ ಕೆಎಸ್ಟಿಡಿಸಿ (KSTDC) ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ. ಕರ್ನಾಟಕ ಪ್ರವಾಸೋದ್ಯಮದ ‘ಒಂದೇ ರಾಜ್ಯ ಹಲವು ಜಗತ್ತು’ (One State Many Worlds) ಎಂಬ ಧ್ಯೇಯವಾಕ್ಯದಡಿ ಪರಿಸರಸ್ನೇಹಿ ಪ್ರವಾಸೋದ್ಯಮಕ್ಕೆ ಭವಿಷ್ಯದಲ್ಲಿ ಮತ್ತಷ್ಟು ವೇಗ ಸಿಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

