Mon. Jun 22nd, 2026

ಸಿದ್ದರಾಮಯ್ಯ ಜೊತೆಗಿನ ಅಧಿಕಾರ ಹಂಚಿಕೆ ಗುಟ್ಟು ರಟ್ಟು ಮಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

Share this with Friends

ಬೆಂಗಳೂರು: “ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ವರಿಷ್ಠರು ನನ್ನನ್ನೇ ಮುಖ್ಯಮಂತ್ರಿ ಮಾಡುತ್ತಾರೆ ಎಂದು ನಾನು ಬಲವಾಗಿ ನಂಬಿದ್ದೆ. ಆದರೆ, ಹೈಕಮಾಂಡ್ ಸಿದ್ದರಾಮಯ್ಯ ಹಾಗೂ ನನ್ನ ನಡುವೆ ಅಧಿಕಾರ ಹಂಚಿಕೆ ಮಾಡಿಕೊಳ್ಳುವಂತೆ ಸೂಚಿಸಿತು” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮಗೂ ಮತ್ತು ಸಿದ್ದರಾಮಯ್ಯ ಅವರಿಗೂ ನಡೆದಿರುವ ಆಂತರಿಕ ಒಪ್ಪಂದದ ಗುಟ್ಟನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದಾರೆ.

ನಗರದಲ್ಲಿಂದು ತಮ್ಮನ್ನು ಭೇಟಿ ಮಾಡಿದ್ದ ಮುಖಂಡರ ನಿಯೋಗದೊಂದಿಗೆ ರಾಜಕೀಯ ವಿದ್ಯಮಾನಗಳ ಕುರಿತು ಮುಕ್ತವಾಗಿ ಮಾತನಾಡಿದ ಅವರು, ಈ ರಹಸ್ಯ ನಿರ್ಧಾರದ ಬಗ್ಗೆ ಆರಂಭದಲ್ಲಿ ಕೆಲವರನ್ನು ಹೊರತುಪಡಿಸಿದರೆ ಬೇರೆ ಯಾರಿಗೂ ತಿಳಿದಿರಲಿಲ್ಲ ಎಂದು ನೆನಪಿಸಿಕೊಂಡರು.

ಕಾಂಗ್ರೆಸ್ ಹೈಕಮಾಂಡ್ ಹಾಕಿಕೊಟ್ಟ ಈ ಸೂತ್ರದ ಹಿನ್ನೆಲೆಯಲ್ಲಿಯೇ ಪ್ರಸ್ತುತ ತಾವು ಈ ಜವಾಬ್ದಾರಿಯನ್ನು ನಿಭಾಯಿಸುತ್ತಿರುವುದಾಗಿ ಸಿಎಂ ಸ್ಪಷ್ಟಪಡಿಸಿದರು. ಇದೇ ವೇಳೆ ರಾಜಕೀಯದಲ್ಲಿ ತಾಳ್ಮೆಯ ಮಹತ್ವವನ್ನು ಒತ್ತಿ ಹೇಳಿದ ಅವರು, “ನನಗೂ ಕೂಡ ಅಧಿಕಾರ ತಡವಾಗಿಯೇ ಸಿಕ್ಕಿದೆ. ಹಿಂದೆ ಧರಂ ಸಿಂಗ್ ಅವರ ಸರ್ಕಾರದ ಅವಧಿಯಲ್ಲಿ ನನಗಾಗಲಿ ಅಥವಾ ಜಿ. ಪರಮೇಶ್ವರ್ ಅವರಿಗಾಗಲಿ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಆದರೂ ನಾವು ತಾಳ್ಮೆ ಕಳೆದುಕೊಳ್ಳದೆ ಪಕ್ಷಕ್ಕಾಗಿ ದುಡಿದಿದ್ದೆವು” ಎಂದರು.

ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಎಲ್ಲ ವರ್ಗ ಹಾಗೂ ಸಮುದಾಯಗಳಿಂದಲೂ ಸಚಿವ ಸ್ಥಾನಕ್ಕಾಗಿ ಭಾರಿ ಒತ್ತಡವಿದೆ. ಇಂತಹ ಸನ್ನಿವೇಶದಲ್ಲಿ ಏಕಕಾಲಕ್ಕೆ ಎಲ್ಲರನ್ನೂ ತೃಪ್ತಿಪಡಿಸುವುದು ಮುಖ್ಯಮಂತ್ರಿ ಹಾಗೂ ಪಕ್ಷದ ಮಟ್ಟದಲ್ಲಿ ಕಷ್ಟಕರವಾದ ತೀರ್ಮಾನವಾಗುತ್ತದೆ. ಆದ್ದರಿಂದ ಪಕ್ಷ ಮತ್ತು ಸರ್ಕಾರದ ಹಿತದೃಷ್ಟಿಯಿಂದ ಕೆಲವೊಮ್ಮೆ ಹಿರಿಯ ನಾಯಕರು ತ್ಯಾಗ ಮಾಡಲು ಸಿದ್ಧರಿರಬೇಕು ಎಂದು ಡಿ.ಕೆ. ಶಿವಕುಮಾರ್ ಮನವಿ ಮಾಡಿದರು.

 


Share this with Friends

Related Post