ಬೆಂಗಳೂರು: ವಸತಿ ಯೋಜನೆಗಳ ಹೆಸರಿನಲ್ಲಿ ನೂರಾರು ಗ್ರಾಹಕರಿಗೆ ನೂರಾರು ಕೋಟಿ ರೂಪಾಯಿ ವಂಚಿಸಿದ ಗಂಭೀರ ಆರೋಪದ ಮೇಲೆ ಓಜೋನ್ ಅರ್ಬಾನಾ ಇನ್ಫ್ರಾ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ (M/s Ozone Urbana Infra Developers Pvt. Ltd.) ಕಂಪನಿಯ ಸಿಎಂಡಿ ಹಾಗೂ ಪ್ರವರ್ತಕರಾದ ಎಸ್. ವಾಸುದೇವನ್ ಅವರನ್ನು ಜಾರಿ ನಿರ್ದೇಶನಾಲಯ (ED) ಬಂಧಿಸಿದೆ.
ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA), 2002 ರ ಸೆಕ್ಷನ್ 19 ರ ಅಡಿಯಲ್ಲಿ ಬೆಂಗಳೂರು ವಲಯ ಇಡಿ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದು, ವಾಸುದೇವನ್ ಅವರನ್ನು ಬೆಂಗಳೂರಿನ ವಿಶೇಷ ಪಿಎಂಎಲ್ಎ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆರೋಪಿಯನ್ನು 14 ದಿನಗಳ ಕಾಲ ಇಡಿ ವಶಕ್ಕೆ ಒಪ್ಪಿಸಿ ಆದೇಶಿಸಿದೆ.
ಏನಿದು ಬ್ರಹ್ಮಾಂಡ ವಂಚನೆ ಹಗರಣ?
ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಓಜೋನ್ ಗ್ರೂಪ್ ಮತ್ತು ಅದರ ಪ್ರವರ್ತಕರ ವಿರುದ್ಧ ದಾಖಲಾಗಿದ್ದ ವಂಚನೆಗೆ ಸಂಬಂಧಿಸಿದ (ಐಪಿಸಿ ಸೆಕ್ಷನ್ 419, 420, 120B) ಹಲವು ಎಫ್ಐಆರ್ಗಳ ಆಧಾರದ ಮೇಲೆ ಇಡಿ ತನ್ನ ತನಿಖೆಯನ್ನು ಆರಂಭಿಸಿತ್ತು. ಇದಲ್ಲದೆ ಗೌರವಾನ್ವಿತ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ದೆಹಲಿಯ ಸಿಬಿಐ (CBI, EO-I) ಘಟಕ ಕೂಡ ಸಂಸ್ಥೆಯ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿತ್ತು.
ಕಂಪನಿಯು ನಿಗದಿತ ಸಮಯಕ್ಕೆ ವಸತಿ ಯೋಜನೆಯ ನಿರ್ಮಾಣವನ್ನು ಪೂರ್ಣಗೊಳಿಸದೆ ಗ್ರಾಹಕರಿಗೆ ಫ್ಲ್ಯಾಟ್ಗಳ ಸ್ವಾಧೀನ ಹಸ್ತಾಂತರಿಸದೆ ವಂಚಿಸಿದೆ ಎನ್ನುವುದು ಮುಖ್ಯ ಆರೋಪವಾಗಿದೆ. ಫ್ಲ್ಯಾಟ್ ಖರೀದಿದಾರರಿಗೆ ಹಸ್ತಾಂತರ ಪ್ರಕ್ರಿಯೆ ಮುಗಿಯುವವರೆಗೂ ‘ಪ್ರೀ-ಕನ್ಸ್ಟ್ರಕ್ಷನ್ ಇಎಂಐ’ (Pre-construction EMIs) ಪಾವತಿಸುವ ಆಮಿಷವೊಡ್ಡಿ ಹಣ ಹೂಡಿಕೆ ಮಾಡಿಸಿಕೊಳ್ಳಲಾಗಿತ್ತು. ಆದರೆ, ಬಿಲ್ಡರ್ ತನ್ನ ಭರವಸೆಯನ್ನು ಈಡೇರಿಸದೆ ಗ್ರಾಹಕರಿಗೆ ವಸತಿ ಘಟಕಗಳನ್ನು ನೀಡದೆ, ಮುಂಗಡವಾಗಿ ಪಡೆದಿದ್ದ ಕೋಟ್ಯಂತರ ರೂಪಾಯಿ ಸಾಲದ ಮೊತ್ತ ಹಾಗೂ ಬುಕ್ಕಿಂಗ್ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
927 ಕೋಟಿ ವಂಚನೆ, 423 ಕೋಟಿ ಮೌಲ್ಯದ ಆಸ್ತಿ ಜಪ್ತಿ:
ಇಡಿ ಕೈಗೊಂಡಿರುವ ತನಿಖೆಯ ಪ್ರಕಾರ, ಓಜೋನ್ ಅರ್ಬಾನಾ ಇನ್ಫ್ರಾ ಡೆವಲಪರ್ಸ್ ಲಿಮಿಟೆಡ್ ಮತ್ತು ಮುಖ್ಯ ಪ್ರವರ್ತಕ ಎಸ್. ವಾಸುದೇವನ್ ಅವರು ಫ್ಲ್ಯಾಟ್ ಖರೀದಿದಾರರಿಗೆ ಬರೋಬ್ಬರಿ ₹927.22 ಕೋಟಿ ರೂಪಾಯಿ ವಂಚಿಸಿದ್ದಾರೆ. ಅಪಾರ ಪ್ರಮಾಣದ ಈ ನಿಧಿಯನ್ನು ವಂಚನೆಯ ಮಾರ್ಗದ ಮೂಲಕ ಇತರ ಉದ್ದೇಶಗಳಿಗೆ ವರ್ಗಾಯಿಸಿರುವುದು ಬೆಳಕಿಗೆ ಬಂದಿದೆ.
ಈ ಹಿಂದೆ ತನಿಖಾ ಸಂಸ್ಥೆಯು ನಡೆಸಿದ ಕಾರ್ಯಾಚರಣೆಯ ಭಾಗವಾಗಿ ₹423.378 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಲಾಗಿತ್ತು. ಇದೀಗ ಎಸ್. ವಾಸುದೇವನ್ ಅವರ ಬಂಧನದೊಂದಿಗೆ, ವಂಚನೆಯ ಹಣ ಎಲ್ಲೆಲ್ಲಿ ಹೂಡಿಕೆಯಾಗಿದೆ, ಯಾರಿಗೆಲ್ಲ ವರ್ಗಾವಣೆಯಾಗಿದೆ ಮತ್ತು ಇತರ ಪ್ರಭಾವಿಗಳ ಪಾತ್ರದ ಕುರಿತು ಮತ್ತಷ್ಟು ಆಳವಾದ ತನಿಖೆಯನ್ನು ಮುಂದುವರಿಸಲಾಗಿದೆ ಎಂದು ಇಡಿ ತಿಳಿಸಿದೆ.

