ಬೆಂಗಳೂರು: “ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೈದರಾಬಾದ್ ಮೂಲದ ಉದ್ಯಮಿ ಮಹೇಶ್ ರೆಡ್ಡಿ ಎಂಬುವವರ ಜೊತೆ ಶಾಮೀಲಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ನೈಸ್ (NICE) ಯೋಜನೆಯ ಭೂಮಿಯನ್ನು ಲಪಟಾಯಿಸಲು ಬ್ರಹ್ಮಾಂಡ ಸಂಚು ರೂಪಿಸಿದ್ದಾರೆ” ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ನೇರ ಹಾಗೂ ಗಂಭೀರ ಆರೋಪ ಮಾಡಿದ್ದಾರೆ.
ನೈಸ್ ಯೋಜನೆಯಿಂದ ಭೂಮಿ ಕಳೆದುಕೊಂಡು ಸಂಕಷ್ಟಕ್ಕೀಡಾಗಿರುವ ಮಾದಾವರ, ತೋಟದಗುಡ್ಡದಹಳ್ಳಿ, ಅಂಚೆಪಾಳ್ಯ ಸೇರಿದಂತೆ ವಿವಿಧ ಗ್ರಾಮಗಳ ಸಂತ್ರಸ್ತರನ್ನು! ಖುದ್ದಾಗಿ ಭೇಟಿ ಮಾಡಿ ಅಹವಾಲು ಸ್ವೀಕರಿಸಿದ ಬಳಿಕ ಅವರು ಮಾಧ್ಯಮಗಳ ಎದುರು ದಾಖಲೆಗಳನ್ನು ಬಿಡುಗಡೆ ಮಾಡಿದರು.
300 ಎಕರೆ ಕೃಷಿ ಭೂಮಿ ಕಬಳಿಕೆ ಆರೋಪ:
ಸುದ್ದಿಗಾರರನ್ನು ಬಿ.ಎಂ ಕಾವಲ್ ಪ್ರದೇಶಕ್ಕೆ ಕರೆದೊಯ್ದು ಫಲವತ್ತಾದ ಕೃಷಿ ಭೂಮಿಯನ್ನು ತೋರಿಸಿದ ಸಚಿವರು, “ಮುಖ್ಯಮಂತ್ರಿಗಳು ಈ ಭಾಗದಲ್ಲಿ ಅಕ್ರಮವಾಗಿ 200 ರಿಂದ 300 ಎಕರೆಯಷ್ಟು ಜಮೀನು ಖರೀದಿಸಿದ್ದಾರೆ. ರಸ್ತೆ ಉದ್ದೇಶಕ್ಕೆಂದು ಸ್ವಾಧೀನಪಡಿಸಿಕೊಂಡ ರೈತರ ಭೂಮಿಯಲ್ಲಿ ಈಗ ತೆಲಂಗಾಣದ ರಿಯಲ್ ಎಸ್ಟೇಟ್ ಉದ್ಯಮಿಗೆ ರೆಡ್ ಕಾರ್ಪೆಟ್ ಹಾಸಿ ಬೃಹತ್ ದಂಧೆ ನಡೆಸಲಾಗುತ್ತಿದೆ. ಡಿಕೆಶಿ ಅವರ ಪಾಪದ ಕೊಡ ತುಂಬಿದ್ದು, ಈ ಮಹಾ ಲೂಟಿಯ ಮೊದಲ ಕಂತಿನ ದಾಖಲೆಗಳನ್ನು ಮಾತ್ರ ಈಗ ಬಿಡುಗಡೆ ಮಾಡಿದ್ದೇನೆ. ಇನ್ನು ಹಲವು ಕಂತುಗಳ ದಾಖಲೆಗಳು ಬಾಕಿ ಇವೆ” ಎಂದು ಎಚ್ಚರಿಸಿದರು.
ಅಕ್ರಮ ಸಾಬೀತಾದರೆ ಸಾರ್ವಜನಿಕವಾಗಿ ನೇಣಿಗೆ ಶರಣು:
ತಮ್ಮ ಮೇಲಿನ ಸಿಎಂ ಆರೋಪಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಹೆಚ್‌ಡಿಕೆ, “ನೈಸ್ ವ್ಯಾಪ್ತಿಯಲ್ಲಿ ನಾನು ಒಂದು ಇಂಚು ಅಕ್ರಮ ಭೂಮಿ ಹೊಂದಿದ್ದರೂ ರುಜುವಾತುಪಡಿಸಲಿ, ನಾನು ಸಾರ್ವಜನಿಕವಾಗಿ ನೇಣು ಹಾಕಿಕೊಳ್ಳಲು ಸಿದ್ಧ. ಅಲ್ಲದೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ರಾಜಕೀಯಕ್ಕೆ ಬರುವ ಮುನ್ನವೇ ಬಿಡದಿಯಲ್ಲಿ 44 ಎಕರೆ ಜಮೀನು ಕೊಂಡು ಕೃಷಿ ಮಾಡುತ್ತಿದ್ದೇನೆಯೇ ಹೊರತು ಇವರಂತೆ ರಿಯಲ್ ಎಸ್ಟೇಟ್ ದಂಧೆಕೋರನಲ್ಲ. ಬ್ಲಾಕ್ ಮೇಲ್ ಅಥವಾ ಬೆನ್ನಿಗೆ ಚೂರಿ ಹಾಕುವುದು ನನ್ನ ಜಾಯಮಾನವಲ್ಲ” ಎಂದು ಗುಡುಗಿದರು.
ಆಮಿಷ ಒಡ್ಡಲು ಬಂದವರನ್ನು ಓಡಿಸಿದೆ:
“ಚುನಾವಣಾ ಖರ್ಚು ಸೇರಿದಂತೆ ನಿಮಗೇನು ಬೇಕೋ ಅದನ್ನು ನೀಡುತ್ತೇವೆ, ನೈಸ್ ಹೋರಾಟದಿಂದ ಹಿಂದೆ ಸರಿಯಿರಿ ಎಂದು ನನಗೆ ಕೋಟಿ ಕೋಟಿ ರೂಪಾಯಿಗಳ ಆಮಿಷ ಒಡ್ಡಲು ಕೆಲವರನ್ನು ಕಳುಹಿಸಲಾಗಿತ್ತು. ಅಂತಹವರನ್ನು ಮನೆ ಬಾಗಿಲಲ್ಲೇ ಬೈದು ಕಳಿಸಿದ್ದೇನೆ. ನನ್ನನ್ನು ಯಾರಿಂದಲೂ ಖರೀದಿ ಮಾಡಲು ಸಾಧ್ಯವಿಲ್ಲ” ಎಂದು ಕುಮಾರಸ್ವಾಮಿ ಆಕ್ರೋಶ ಹೊರಹಾಕಿದರು.
ಇದೇ ವೇಳೆ, ಸಿದ್ಧಗಂಗಾ ಮಠದ ಆಸ್ತಿ ಲೂಟಿ ಮಾಡಿರುವ ಹಾಗೂ ಶಿವಕುಮಾರ ಸ್ವಾಮೀಜಿಯವರ ಬಗ್ಗೆ ಲಘುವಾಗಿ ಮಾತನಾಡಿರುವ ನೈಸ್ ಗುತ್ತಿಗೆದಾರ ಅಶೋಕ್ ಖೇಣಿಯನ್ನು ತಕ್ಷಣವೇ ಬಂಧಿಸಬೇಕು ಎಂದು ಒತ್ತಾಯಿಸಿದರು. ಅಕ್ಟೋಬರ್ 5 ರಂದು ಸುಪ್ರೀಂ ಕೋರ್ಟ್‌ನಲ್ಲಿ ಈ ಯೋಜನೆಗೆ ಸಂಬಂಧಿಸಿದ ಅರ್ಜಿ ವಿಚಾರಣೆಗೆ ಬರಲಿದ್ದು, ಆ ತೀರ್ಪನ್ನು ನೋಡಿಕೊಂಡು ರೈತರ ಭೂಮಿ ವಾಪಸ್ ಸಿಗುವವರೆಗೂ ಹಳ್ಳಿ ಹಳ್ಳಿಗಳಲ್ಲಿ ಬೃಹತ್ ಶಾಂತಿಯುತ ಆಂದೋಲನ ರೂಪಿಸುವುದಾಗಿ ಸಚಿವರು ಸಂತ್ರಸ್ತರಿಗೆ ಅಭಯ ನೀಡಿದರು.

