ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಯುಎಸ್ಬಿಆರ್ಎಲ್ (USBRL – ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲ್ವೆ ಲಿಂಕ್) ಯೋಜನಾ ವಿಭಾಗದ ಪ್ರಗತಿ ಪರಿಶೀಲನೆ ನಡೆಸಿದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು, ಎಂಜಿನಿಯರಿಂಗ್ ಕ್ಷೇತ್ರದ ಅದ್ಭುತ ಎಂದೇ ಹೆಸರಾಗಿರುವ ವಿಶ್ವದ ಅತಿ ಎತ್ತರದ ರೈಲ್ವೆ ಕಮಾನು ಸೇತುವೆಯಾದ ‘ಚೆನಾಬ್ ಬ್ರಿಡ್ಜ್’ ಗೆ (Chenab Bridge) ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸೇತುವೆಯ ಭದ್ರತೆ ಹಾಗೂ ತಾಂತ್ರಿಕ ನೈಪುಣ್ಯತೆಯನ್ನು ವೀಕ್ಷಿಸಿದ ಬಳಿಕ ಮಾತನಾಡಿದ ಸಚಿವರು, “ಚೆನಾಬ್ ಸೇತುವೆಯು ಕೇವಲ ಉಕ್ಕಿನ ರಚನೆಯಲ್ಲ; ಇದು ಭಾರತೀಯ ಎಂಜಿನಿಯರಿಂಗ್ ಸಾಮರ್ಥ್ಯ, ದೇಶದ ಮಹತ್ವಾಕಾಂಕ್ಷೆ ಮತ್ತು ಅಪ್ರತಿಮ ಪರಿಶ್ರಮದ ಸಂಕೇತವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ದೂರದರ್ಶಿತ್ವದ ನಾಯಕತ್ವದಲ್ಲಿ ಭಾರತವು ಇಂದು ಜಾಗತಿಕ ಮಟ್ಟದ ಅತ್ಯಾಧುನಿಕ ಮೂಲಸೌಕರ್ಯಗಳನ್ನು ಅತ್ಯಂತ ಯಶಸ್ವಿಯಾಗಿ ನಿರ್ಮಿಸುತ್ತಿದೆ” ಎಂದು ಪ್ರಶಂಸಿಸಿದರು.
ವಿಶ್ವಮಟ್ಟದ ಮೂಲಸೌಕರ್ಯ ಅಭಿವೃದ್ಧಿ:
ದೇಶದ ಕಠಿಣ ಭೌಗೋಳಿಕ ಪ್ರದೇಶಗಳಲ್ಲೂ ರೈಲ್ವೆ ಸಂಪರ್ಕವನ್ನು ಕಲ್ಪಿಸುವ ಮೂಲಕ ‘ವಿಕಸಿತ ಭಾರತ’ದ ಸಂಕಲ್ಪ ಸಾಕಾರಗೊಳ್ಳುತ್ತಿದೆ ಎಂದು ಸಚಿವರು ತಿಳಿಸಿದರು. ಈ ಭೇಟಿಯ ವೇಳೆ ರೈಲ್ವೆ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಎಂಜಿನಿಯರ್ಗಳು ಉಪಸ್ಥಿತರಿದ್ದು, ಕಾಶ್ಮೀರ ಕಣಿವೆಯನ್ನು ದೇಶದ ಇತರೆ ಭಾಗಗಳೊಂದಿಗೆ ಸಂಪರ್ಕಿಸುವ ಈ ಐತಿಹಾಸಿಕ ಯೋಜನೆಯ ಅಂತಿಮ ಹಂತದ ಸಿದ್ಧತೆಗಳ ಕುರಿತು ಸಚಿವರಿಗೆ ವಿವರಣೆ ನೀಡಿದರು. ಸಚಿವ ವಿ. ಸೋಮಣ್ಣ ಅವರು ಚೆನಾಬ್ ಸೇತುವೆಯ ಮೇಲ್ಭಾಗದಲ್ಲಿ ನಿಂತು ಪರಿಶೀಲನೆ ನಡೆಸುತ್ತಿರುವ ಚಿತ್ರಗಳು ಹಾಗೂ ಮಾಹಿತಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಭಾರತೀಯ ರೈಲ್ವೆಯ ಈ ಹೆಮ್ಮೆಯ ಸಾಧನೆಗೆ ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

