ಬೆಂಗಳೂರು: ರಾಜಧಾನಿಯ ಬೆಂಗಳೂರು ಕೇಂದ್ರ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ – ಎಚ್‌ಎಸ್‌ಆರ್ ಲೇಔಟ್) ಸತತ ಮೂರನೇ ವರ್ಷವೂ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಅಲಂಕರಿಸುವ ಮೂಲಕ ಹೊಸ ದಾಖಲೆ ಬರೆದಿದೆ. ಪ್ರಸಕ್ತ ವರ್ಷದಲ್ಲಿ ಒಟ್ಟು 1,273 ಕೋಟಿ ರೂಪಾಯಿಗಳ ಬೃಹತ್ ಆದಾಯ ಸಂಗ್ರಹಿಸುವ ಮೂಲಕ ಕರ್ನಾಟಕದಲ್ಲಿಯೇ ನಂಬರ್ 1 ಕಚೇರಿಯಾಗಿ ಹೊರಹೊಮ್ಮಿದೆ. ವಿಶೇಷವೆಂದರೆ, ರಾಷ್ಟ್ರಮಟ್ಟದಲ್ಲಿಯೂ ಈ ಕಚೇರಿ ಮೂರನೇ ಸ್ಥಾನವನ್ನು ಪಡೆದುಕೊಂಡು ಗಮನ ಸೆಳೆದಿದೆ.
ವಾಹನಗಳ ಜೀವಿತಾವಧಿ ತೆರಿಗೆ (Lifetime Tax), ವಾಣಿಜ್ಯ ವಾಹನಗಳ ತೆರಿಗೆ ಸಂಗ್ರಹ, ಬಾಕಿ ವಸೂಲಾತಿ ಹಾಗೂ ಕಟ್ಟುನಿಟ್ಟಾದ ಎನ್‌ಫೋರ್ಸ್‌ಮೆಂಟ್ (Enforcement) ಕಾರ್ಯಾಚರಣೆಗಳ ಮೂಲಕ ಈ ಮೈಲಿಗಲ್ಲನ್ನು ಸಾಧಿಸಲಾಗಿದೆ. ಸಾರಿಗೆ ಇಲಾಖೆಯ ಗುರಿಯನ್ನು ಮೀರಿ ಆದಾಯ ತರುವಲ್ಲಿ ಕಚೇರಿಯು ಯಶಸ್ವಿಯಾಗಿದೆ.
ಈ ಐತಿಹಾಸಿಕ ಸಾಧನೆಯ ಕುರಿತು ಬೆಂಗಳೂರು ಕೇಂದ್ರ ಪ್ರಾದೇಶಿಕ ಸಾರಿಗೆ ಅಧಿಕಾರಿ ದೀಪಕ್.ಎಲ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ. “ಈ ಯಶಸ್ಸು ನಮ್ಮ ಇಡೀ ತಂಡದ ಹಗಲಿರುಳಿನ ಶ್ರಮಕ್ಕೆ ಸಂದ ಜಯವಾಗಿದೆ. ಕಚೇರಿಯ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ವರ್ಗದವರ ದಕ್ಷ ಕೆಲಸ ಹಾಗೂ ಸಾರ್ವಜನಿಕರ ಸಕಾರಾತ್ಮಕ ಸಹಕಾರದಿಂದ ಈ ಮೈಲಿಗಲ್ಲು ತಲುಪಲು ಸಾಧ್ಯವಾಗಿದೆ,” ಎಂದು ಅವರು ತಿಳಿಸಿದ್ದಾರೆ.
ಈ ಸಾಧನೆಯು ಇಲಾಖೆಯ ದಕ್ಷತೆಯನ್ನು ಎತ್ತಿ ಹಿಡಿದಿದ್ದು, ಸಾರ್ವಜನಿಕ ಸೇವೆ ಮತ್ತು ತೆರಿಗೆ ಸಂಗ್ರಹದಲ್ಲಿ ಎಚ್‌ಎಸ್‌ಆರ್ ಲೇಔಟ್ ಆರ್‌ಟಿಒ ಮಾದರಿಯಾಗಿ ನಿಂತಿದೆ.

