Sat. Jun 6th, 2026

ಜೂನ್ 28ರಿಂದ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನ: ಬೆಂಗಳೂರಿನಲ್ಲಿ 11.34 ಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ಗುರಿ

Share this with Friends

ಬೆಂಗಳೂರು: ಜಿಬಿಎ (GBA) ವ್ಯಾಪ್ತಿಯಲ್ಲಿ ಜೂನ್ 28ರಿಂದ ಜುಲೈ 1ರವರೆಗೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಒಟ್ಟು 11.34 ಲಕ್ಷ ಮಕ್ಕಳಿಗೆ ಪೋಲಿಯೋ ಹನಿ ನೀಡುವ ಬೃಹತ್ ಗುರಿ ಹೊಂದಲಾಗಿದೆ ಎಂದು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ತಿಳಿಸಿದ್ದಾರೆ.

ಅಭಿಯಾನದ ಪೂರ್ವಸಿದ್ಧತೆ ಕುರಿತು ಅಧಿಕಾರಿಗಳೊಂದಿಗೆ ವರ್ಚುವಲ್ ಸಭೆ ನಡೆಸಿದ ಅವರು, ಲಸಿಕಾ ಬೂತ್‌ಗಳ ಮಾಹಿತಿಯನ್ನು ಸಾರ್ವಜನಿಕರಿಗೆ ಸುಲಭವಾಗಿ ಸಿಗುವಂತೆ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಅಪಾರ್ಟ್‌ಮೆಂಟ್‌ಗಳ ಸಹಭಾಗಿತ್ವದಲ್ಲಿ ಜಾಗೃತಿ

ಸಾರ್ವಜನಿಕರಲ್ಲಿ ಪೋಲಿಯೋ ಲಸಿಕೆ ಕುರಿತು ವ್ಯಾಪಕ ಜಾಗೃತಿ ಮೂಡಿಸಲು ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ. ಪ್ರಮುಖವಾಗಿ ವಿವಿಧ ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ಗಳ ಸಹಭಾಗಿತ್ವದೊಂದಿಗೆ ಹೆಚ್ಚಿನ ಜನರನ್ನು ಲಸಿಕಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ವೈದ್ಯಕೀಯ ವಿದ್ಯಾರ್ಥಿಗಳ ಬಳಕೆ ಹಾಗೂ ಸಂಚಾರಿ ತಂಡಗಳ ನಿಯೋಜನೆ

ಸಭೆಯಲ್ಲಿದ್ದ ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾದ ವೆಂಕಟಾಚಲಪತಿ ಅವರು ಅಭಿಯಾನದ ಯಶಸ್ಸಿಗೆ ಪ್ರಮುಖ ಸೂಚನೆಗಳನ್ನು ನೀಡಿದರು:

ಪ್ರತಿಯೊಬ್ಬ ಅರ್ಹ ಮಗುವಿಗೂ ಪೋಲಿಯೋ ಹನಿ ತಲುಪಿಸಲು ನರ್ಸಿಂಗ್, ವೈದ್ಯಕೀಯ ಹಾಗೂ ಪ್ಯಾರಾ ಮೆಡಿಕಲ್ ಕಾಲೇಜುಗಳ ವಿದ್ಯಾರ್ಥಿಗಳನ್ನು ಸ್ವಯಂಸೇವಕರಾಗಿ ಬಳಸಿಕೊಳ್ಳಲಾಗುವುದು.

ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ಮಾರುಕಟ್ಟೆಯಂತಹ ಜನಸಂದಣಿ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂಚಾರಿ ಲಸಿಕಾ ತಂಡಗಳನ್ನು ನಿಯೋಜಿಸಲಾಗುವುದು.

ಲಸಿಕಾ ಕೇಂದ್ರಗಳ ಸಂಪೂರ್ಣ ವಿವರ ಮತ್ತು ವೇಳಾಪಟ್ಟಿ:

ಒಟ್ಟು ಲಸಿಕಾ ಕೇಂದ್ರಗಳು: 4,452

ಸ್ಥಿರ ಬೂತ್‌ಗಳು: 3,391

ಸಂಚಾರಿ ತಂಡಗಳು: 597

ಮೊಬೈಲ್ ತಂಡಗಳು: 464

ಜೂನ್ 28 (ಮೊದಲ ದಿನ): ಬೆಳಿಗ್ಗೆ 8:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ನಿಗದಿತ ಬೂತ್‌ಗಳಲ್ಲಿ ಲಸಿಕೆ ಲಭ್ಯವಿರಲಿದೆ.

ಜೂನ್ 29 ರಿಂದ ಜುಲೈ 1: ಲಸಿಕಾ ತಂಡದ ಸಿಬ್ಬಂದಿ ನೇರವಾಗಿ ಮನೆ-ಮನೆಗೆ ಭೇಟಿ ನೀಡಿ ಪುಟ್ಟ ಮಕ್ಕಳಿಗೆ ಲಸಿಕೆ ಹಾಕಲಿದ್ದಾರೆ.

ಕಡ್ಡಾಯ ಸೂಚನೆ: 0ಯಿಂದ 5 ವರ್ಷದೊಳಗಿನ ಪ್ರತಿಯೊಂದು ಮಗುವಿಗೂ ಎರಡು ಹನಿಗಳ ಪೋಲಿಯೋ ಲಸಿಕೆಯನ್ನು ಕಡ್ಡಾಯವಾಗಿ ಕೊಡಿಸುವ ಮೂಲಕ ಪೋಲಿಯೋ ಮುಕ್ತ ಸಮಾಜ ನಿರ್ಮಾಣಕ್ಕೆ ಸಹಕರಿಸಲು ಸಾರ್ವಜನಿಕರಲ್ಲಿ ಕೋರಲಾಗಿದೆ.

 


Share this with Friends

Related Post