Tue. Jun 16th, 2026

ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳ ಪರಿಷ್ಕರಣೆಗೆ ದಿನೇಶ್ ಗೂಳಿಗೌಡ ಆಗ್ರಹ: ಮರಣ ಹೊಂದಿದವರ ಖಾತೆಗೆ ₹468 ಕೋಟಿ ಸಂದಾಯ ಆತಂಕ!

Share this with Friends

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಆಗುತ್ತಿರುವ ಆರ್ಥಿಕ ಸೋರಿಕೆಯನ್ನು ತಡೆಗಟ್ಟಲು ತಕ್ಷಣವೇ ಪರಿಷ್ಕರಣೆ ನಡೆಸಬೇಕೆಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಐದು ಗ್ಯಾರಂಟಿ ಯೋಜನೆಗಳಿಗಾಗಿ ಸರ್ಕಾರವು ಇದುವರೆಗೆ ಒಟ್ಟು 1,38,270.21 ಕೋಟಿ ಭಾರಿ ಮೊತ್ತವನ್ನು ವಿನಿಯೋಗಿಸಿದೆ. ಆದರೆ, ಅರ್ಹ ಫಲಾನುಭವಿಗಳ ದತ್ತಾಂಶದ ಲೋಪದೋಷಗಳಿಂದಾಗಿ ಕೋಟ್ಯಂತರ ರೂಪಾಯಿ ತೆರಿಗೆದಾರರ ಹಣ ದುರುಪಯೋಗವಾಗುತ್ತಿರುವುದು ಬೆಳಕಿಗೆ ಬಂದಿದೆ ಎಂದಿದ್ದಾರೆ.

ಸಾವಿರಾರು ಕೋಟಿ ವೆಚ್ಚದ ವಿವರ:

ಗೃಹಲಕ್ಷ್ಮಿ ಯೋಜನೆ: 1.24 ಕೋಟಿ ಫಲಾನುಭವಿಗಳಿದ್ದು, ಪ್ರತಿ ತಿಂಗಳು 2,480 ಕೋಟಿ ಹಾಗೂ ವಾರ್ಷಿಕವಾಗಿ 29,760 ಕೋಟಿ ವೆಚ್ಚವಾಗುತ್ತಿದೆ. 2026ರ ಏಪ್ರಿಲ್ ಅಂತ್ಯಕ್ಕೆ ಒಟ್ಟು 72,253 ಕೋಟಿ ಪಾವತಿಸಲಾಗಿದೆ.

ಗೃಹಜ್ಯೋತಿ ಯೋಜನೆ: 1.64 ಕೋಟಿ ಗ್ರಾಹಕರಿಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದ್ದು, ಇದುವರೆಗೆ 26,115 ಕೋಟಿ ವೆಚ್ಚವಾಗಿದೆ.

ಅನ್ನಭಾಗ್ಯ ಯೋಜನೆ: ಇದುವರೆಗೆ ಒಟ್ಟು 18,897 ಕೋಟಿ ಬಿಡುಗಡೆ ಮಾಡಲಾಗಿದೆ.

ಶಕ್ತಿ ಯೋಜನೆ: 757.62 ಕೋಟಿ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣದ ಸೌಲಭ್ಯ ಪಡೆದಿದ್ದು, ಇದರ ಮೌಲ್ಯ 19,890 ಕೋಟಿಗಳಾಗಿದೆ.

ಯುವನಿಧಿ ಯೋಜನೆ: 3.59 ಲಕ್ಷ ನಿರುದ್ಯೋಗಿ ಯುವಕರಿಗೆ 1,115 ಕೋಟಿ ಭತ್ಯೆ ನೀಡಲಾಗಿದೆ.

ಅನರ್ಹರ ಪಾಲಾಗುತ್ತಿದೆ ಹಣ:

ವರದಿಯ ಪ್ರಕಾರ, ಗೃಹಲಕ್ಷ್ಮಿ ಯೋಜನೆಯಡಿ ಮರಣ ಹೊಂದಿರುವ 1,95,224 ಮಹಿಳೆಯರ ಖಾತೆಗಳಿಗೆ ಇನ್ನೂ ಹಣ ಸಂದಾಯವಾಗುತ್ತಿದ್ದು, ಇದರಿಂದಾಗಿ ಪ್ರತಿ ತಿಂಗಳು 39.05 ಕೋಟಿ ಹಾಗೂ ವಾರ್ಷಿಕವಾಗಿ 468.54 ಕೋಟಿ ನಷ್ಟವಾಗುತ್ತಿದೆ. ಇದರೊಂದಿಗೆ, ಆದಾಯ ತೆರಿಗೆ ಹಾಗೂ ಜಿಎಸ್‌ಟಿ ಪಾವತಿಸುವ ಸುಮಾರು 1.94 ಲಕ್ಷ ಅನರ್ಹರು ಕೂಡ ಈ ಯೋಜನೆಯ ಲಾಭ ಪಡೆಯುತ್ತಿರುವುದು ಪತ್ತೆಯಾಗಿದೆ.

ಪರಿಷ್ಕರಣೆಗೆ ಪ್ರಮುಖ ಸಲಹೆಗಳು:

ಅನ್ನಭಾಗ್ಯ ಯೋಜನೆಯ ಮಾದರಿಯಲ್ಲಿ ಗೃಹಲಕ್ಷ್ಮಿ ಯೋಜನೆಗೂ ಬಯೋಮೆಟ್ರಿಕ್ (ಮರು ದೃಢೀಕರಣ) ಕಡ್ಡಾಯಗೊಳಿಸಬೇಕು.

ಮೃತಪಟ್ಟವರ ಖಾತೆಗಳಿಗೆ ಜಮೆಯಾಗಿರುವ ಹಣವನ್ನು ಬ್ಯಾಂಕುಗಳ ಮೂಲಕ ಮರುಪಡೆಯಲು ಕ್ರಮ ಕೈಗೊಳ್ಳಬೇಕು.

ಗೃಹಜ್ಯೋತಿ ಯೋಜನೆಯಡಿ ಉಚಿತ ಗೃಹ ವಿದ್ಯುತ್ ಪಡೆದು, ಅದನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿರುವವರ ವಿರುದ್ಧ ಕಟ್ಟುನಿಟ್ಟಿನ ತನಿಖೆ ನಡೆಸಬೇಕು.

ಯೋಜನೆಗಳ ಪಾರದರ್ಶಕತೆ ಕಾಯ್ದುಕೊಳ್ಳಲು ಮತ್ತು ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ನಷ್ಟ ನಿಲ್ಲಿಸಲು ಈ ಕೂಡಲೇ ತಾಂತ್ರಿಕ ಪರಿಷ್ಕರಣೆ ನಡೆಸಬೇಕೆಂದು ಪತ್ರದಲ್ಲಿ ಕೋರಲಾಗಿದೆ.

ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗೆ ಮೇಜರ್ ಸರ್ಜರಿ? 1.94 ಲಕ್ಷ ಐಟಿ ಪಾವತಿದಾರರಿಗೆ ಶಾಕ್!

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಮತ್ತು ‘ಗೃಹಜ್ಯೋತಿ’ ಯೋಜನೆಗಳ ದುರುಪಯೋಗವನ್ನು ತಡೆಯಲು ಈಗ ದೊಡ್ಡ ಮಟ್ಟದ ಪರಿಶೀಲನೆಗೆ ಸಿದ್ಧತೆ ನಡೆದಿದೆ. ಈ ಯೋಜನೆಗಳಲ್ಲಿ ಅರ್ಹರಲ್ಲದವರನ್ನು ಪಟ್ಟಿಯಿಂದ ಕೈಬಿಡುವಂತೆ ಕೋರಿ ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಅವರು ಸರ್ಕಾರಕ್ಕೆ ಪ್ರಮುಖ ಶಿಫಾರಸುಗಳನ್ನು ಒಳಗೊಂಡ ಪತ್ರ ಬರೆದಿದ್ದಾರೆ.

ಐಟಿ, ಜಿಎಸ್‌ಟಿ ಪಾವತಿದಾರರಿಂದಲೇ ಕೋಟ್ಯಂತರ ರೂ. ನಷ್ಟ

ಮಾರ್ಚ್ 2026ರ ಅಂಕಿ-ಅಂಶಗಳ ಪ್ರಕಾರ, ಆದಾಯ ತೆರಿಗೆ (IT) ಹಾಗೂ ಜಿಎಸ್‌ಟಿ ಪಾವತಿಸುತ್ತಿರುವ ಸುಮಾರು 1,94,560 ಮಹಿಳೆಯರು ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆಯ 2,000 ಹಣ ಪಡೆಯುತ್ತಿದ್ದಾರೆ. ಇದರಿಂದ ಸರ್ಕಾರಕ್ಕೆ ಪ್ರತಿ ತಿಂಗಳು 38.91 ಕೋಟಿ ಹಾಗೂ ವಾರ್ಷಿಕವಾಗಿ 466.94 ಕೋಟಿ ರೂಪಾಯಿಗಳ ಭಾರಿ ಆರ್ಥಿಕ ನಷ್ಟವಾಗುತ್ತಿದ್ದು, ತಕ್ಷಣವೇ ಇವರನ್ನು ಪಟ್ಟಿಯಿಂದ ಕೈಬಿಡಲು ಕ್ರಮ ಕೈಗೊಳ್ಳುವಂತೆ ಪತ್ರದಲ್ಲಿ ಕೋರಲಾಗಿದೆ.

ಮೃತಪಟ್ಟವರ ಖಾತೆಗೆ ಹೋಗುತ್ತಿದೆ ಹಣ!

ರಾಜ್ಯದಲ್ಲಿ ಈಗಾಗಲೇ ಮರಣ ಹೊಂದಿರುವ ಗೃಹಲಕ್ಷ್ಮಿ ಫಲಾನುಭವಿಗಳ ನಿಖರ ಮಾಹಿತಿ ಲಭ್ಯವಿಲ್ಲದ ಕಾರಣ, ಅವರ ಬ್ಯಾಂಕ್ ಖಾತೆಗಳಿಗೆ ಹಣ ಜಮೆಯಾಗುತ್ತಿರುವುದು ಬೆಳಕಿಗೆ ಬಂದಿದೆ. ಇದನ್ನು ತಡೆಯಲು ಗ್ರಾಮ ಮತ್ತು ವಾರ್ಡ್ ಮಟ್ಟದಲ್ಲಿ ಮರಣ ದಾಖಲೆಗಳನ್ನು ಕಡ್ಡಾಯವಾಗಿ ಪರಿಶೀಲಿಸಿ, ಇಲಾಖೆಗಳೊಂದಿಗೆ ಲಿಂಕ್ ಮಾಡಬೇಕು ಎಂದು ತಿಳಿಸಲಾಗಿದೆ. ಅಷ್ಟೇ ಅಲ್ಲದೆ, ಮೃತರ ಖಾತೆಗೆ ಈಗಾಗಲೇ ಜಮೆಯಾಗಿರುವ ಹಣವನ್ನು ಬ್ಯಾಂಕ್‌ಗಳ ಮೂಲಕ ಹಿಂಪಡೆಯಲು ಕಠಿಣ ನಿರ್ದೇಶನ ನೀಡುವಂತೆ ಒತ್ತಾಯಿಸಲಾಗಿದೆ.

ಅನ್ನಭಾಗ್ಯ ಮಾದರಿಯಲ್ಲಿ ಬಯೋಮೆಟ್ರಿಕ್ ಕಡ್ಡಾಯ?

ಪಡಿತರ ವಿತರಣೆಯ (ಅನ್ನಭಾಗ್ಯ) ಮಾದರಿಯಲ್ಲೇ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೂ ಹೆಬ್ಬೆರಳಿನ ಗುರುತು (ಬಯೋಮೆಟ್ರಿಕ್) ಅಥವಾ ಮುಖಚಹರೆ ಗುರುತಿಸುವಿಕೆಯನ್ನು ಕಡ್ಡಾಯಗೊಳಿಸುವಂತೆ ಪ್ರಸ್ತಾಪಿಸಲಾಗಿದೆ. ಇದರಿಂದ ನಕಲಿ ಫಲಾನುಭವಿಗಳನ್ನು ಸಂಪೂರ್ಣವಾಗಿ ತಡೆಯಬಹುದು ಎನ್ನಲಾಗಿದೆ.

ಉಚಿತ ವಿದ್ಯುತ್ ವಾಣಿಜ್ಯ ಬಳಕೆಗೆ ಬ್ರೇಕ್

ಮತ್ತೊಂದೆಡೆ, ಗೃಹಜ್ಯೋತಿ ಯೋಜನೆಯಡಿ ಉಚಿತವಾಗಿ ಸಿಗುತ್ತಿರುವ ಗೃಹ ಬಳಕೆಯ ವಿದ್ಯುತ್ ಸಂಪರ್ಕವನ್ನು ಹಲವರು ವಾಣಿಜ್ಯ (ಕಮರ್ಷಿಯಲ್) ಉದ್ದೇಶಗಳಿಗೆ ಅಕ್ರಮವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ. ಈ ಬಗ್ಗೆಯೂ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಲು ಪತ್ರದಲ್ಲಿ ಆಗ್ರಹಿಸಲಾಗಿದೆ.

ಪ್ರಸ್ತುತ ರಾಜ್ಯದಲ್ಲಿ 1.24 ಕೋಟಿ ಮಹಿಳೆಯರು ಈ ಯೋಜನೆಯ ಲಾಭ ಪಡೆಯುತ್ತಿದ್ದು, ಇದುವರೆಗೆ ಒಟ್ಟು 72,253 ಕೋಟಿ ರೂಪಾಯಿಗಳನ್ನು ನೇರ ನಗದು ವರ್ಗಾವಣೆ (DBT) ಮೂಲಕ ಯಶಸ್ವಿಯಾಗಿ ತಲುಪಿಸಲಾಗಿದೆ. ಆದರೆ ಸರ್ಕಾರದ ಹಣ ಪೋಲಾಗುವುದನ್ನು ತಡೆಯಲು ಈ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕೆಂದು ದಿನೇಶ್ ಗೂಳಿಗೌಡ ಅವರು ಮುಖ್ಯಮಂತ್ರಿಗಳಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.

 


Share this with Friends

Related Post