ಹಾಸನ: ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಬಿಡದಿ ಟೌನ್‌ಶಿಪ್ ವಿರೋಧಿ ಪಾದಯಾತ್ರೆಯನ್ನು ಪೊಲೀಸರ ಮೂಲಕ ಸರ್ಕಾರ ತಡೆದಿರುವುದಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಅತ್ಯಂತ ಹೇಯ ಕೃತ್ಯ ಎಸಗಲು ಮುಂದಾಗಿದೆ” ಎಂದು ಅವರು ದೂರಿದ್ದಾರೆ.
ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸರ್ಕಾರದ ನಿಲುವನ್ನು ಕಠಿಣ ಶಬ್ದಗಳಲ್ಲಿ ಖಂಡಿಸಿದರು.ಮುಖ್ಯಮಂತ್ರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಪ್ರಶ್ನಿಸಿದ ದೇವೇಗೌಡರು, “ಭೂಮಿ ನೀಡಲು ಯಾರಿಗೂ ಬಲವಂತ ಇಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಹಾಗಿದ್ದ ಮೇಲೆ ಶಾಂತಿಯುತವಾಗಿ ನಡೆಯುತ್ತಿದ್ದ ಪಾದಯಾತ್ರೆಯನ್ನು ಪೊಲೀಸರ ಮೂಲಕ ಏಕೆ ತಡೆಯಲಾಯಿತು?” ಎಂದು ಖಾರವಾಗಿ ಪ್ರಶ್ನಿಸಿದರು.
ಈಗಾಗಲೇ ಬಿಡಿಎ ವ್ಯಾಪ್ತಿಯಲ್ಲಿ ಸುಮಾರು 35 ರಿಂದ 40 ಸಾವಿರ ನಿವೇಶನಗಳು ಖರೀದಿದಾರರಿಲ್ಲದೆ ಖಾಲಿ ಬಿದ್ದಿವೆ. ಪರಿಸ್ಥಿತಿ ಹೀಗಿರುವಾಗ ಕೃಷಿಯನ್ನೇ ನಂಬಿ ಬದುಕುತ್ತಿರುವ ಸಣ್ಣ ಮತ್ತು ಹಿಂದುಳಿದ ವರ್ಗಗಳ ರೈತರನ್ನು ಬೀದಿಪಾಲು ಮಾಡುತ್ತಿರುವುದು ಯಾರಿಗಾಗಿ ಎಂದು ಅವರು ಆಕ್ರೋಶ ಹೊರಹಾಕಿದರು. ಈ ಹೋರಾಟ ಕೇವಲ ಒಂದು ಸಮುದಾಯಕ್ಕೆ ಸೀಮಿತವಲ್ಲ, ಭೂಮಿ ಕಳೆದುಕೊಳ್ಳುವ ಎಲ್ಲಾ ಬಡ ರೈತರ ಪರವಾದದ್ದು ಎಂದು ಸ್ಪಷ್ಟಪಡಿಸಿದರು.
ಆಗಸ್ಟ್ 18 ರಂದು ಬೆಂಗಳೂರಿನಲ್ಲಿ ಬೃಹತ್ ಸಭೆ:
ಸರ್ಕಾರದ ಒತ್ತಡಕ್ಕೆ ಮಣಿದು ಪೊಲೀಸರು ಪಾದಯಾತ್ರೆ ತಡೆದಿದ್ದಾರೆ ಎಂದ ಗೌಡರು, “ನಾನು ನಾಳೆ ಬೆಂಗಳೂರಿಗೆ ತೆರಳಿ ನಿಖಿಲ್ ಕುಮಾರಸ್ವಾಮಿ ಹಾಗೂ ಪಕ್ಷದ ಮುಖಂಡರಿಂದ ಸಂಪೂರ್ಣ ಮಾಹಿತಿ ಪಡೆಯಲಿದ್ದೇನೆ. ಈ ಹಗರಣ ಮತ್ತು ದೌರ್ಜನ್ಯದ ವಿರುದ್ಧ ಆಗಸ್ಟ್ 18 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಸಭೆ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಅಂದು ಸರ್ಕಾರದ ಎಲ್ಲಾ ನೀತಿಗಳ ವಿರುದ್ಧ ಮುಖಾಮುಖಿ ಮಾತನಾಡುತ್ತೇನೆ” ಎಂದು ಗುಡುಗಿದರು.
ಹೋರಾಟದಿಂದ ಹಿಂದೆ ಸರಿಯಲ್ಲ:
“ಬಿಡದಿ ಟೌನ್‌ಶಿಪ್ ವಿರೋಧಿ ಹೋರಾಟದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ರಾಜ್ಯ ಸರ್ಕಾರ ತಕ್ಷಣವೇ ಈ ರೈತ ವಿರೋಧಿ ಯೋಜನೆಯನ್ನು ಕೈಬಿಡಬೇಕು” ಈ ವಿಚಾರದಲ್ಲಿ ಸರ್ಕಾರದ ಮುಂದಿನ ನಿರ್ಧಾರಗಳನ್ನು ನೋಡಿಕೊಂಡು ನಮ್ಮ ಮುಂದಿನ ಕಠಿಣ ತೀರ್ಮಾನಗಳನ್ನು ಪ್ರಕಟಿಸುತ್ತೇವೆ ಎಂದರು.
ಸಿಎಂ ಡಿಕೆಶಿಗೆ ಕಠಿಣ ಪ್ರಶ್ನೆಗಳ ಬಾಣ:
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಇತಿಹಾಸ ಹಾಗೂ ಆಡಳಿತ ಶೈಲಿಯನ್ನು ನೇರವಾಗಿ ಪ್ರಶ್ನಿಸಿದ ದೇವೇಗೌಡರು, “ಮೂರು ವರ್ಷಗಳ ಕಾಲ ನೀವೇ ಉಪಮುಖ್ಯಮಂತ್ರಿಯಾಗಿರಲಿಲ್ಲವೇ? ಬೆಂಗಳೂರನ್ನು ಐದು ಕಾರ್ಪೊರೇಷನ್‌ಗಳಾಗಿ ವಿಭಜನೆ ಮಾಡಿದ್ದು ನೀವೇ ಅಲ್ಲವೇ? ಹಾಗಿದ್ದ ಮೇಲೆ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಕೇವಲ ಒಂದೇ ತಿಂಗಳಲ್ಲಿ ಈ ಬಿಡದಿ ಟೌನ್‌ಶಿಪ್ ಪ್ರಾಜೆಕ್ಟ್ ಜಾರಿಗೆ ತರಲು ಇಷ್ಟೊಂದು ಆತುರ ಏಕಿದೆ?” ಎಂದು ಖಾರವಾಗಿ ಪ್ರಶ್ನಿಸಿದರು.
ದೆಹಲಿ ನಾಯಕರ ತೃಪ್ತಿಗಾಗಿ ಬಡವರ ಬಲಿ:
ರಾಜ್ಯ ಸರ್ಕಾರವು ದೆಹಲಿಯ ಹೈಕಮಾಂಡ್ ನಾಯಕರಿಗೆ ನೀಡಿರುವ ಭರವಸೆಯನ್ನು ಈಡೇರಿಸುವ ಸಲುವಾಗಿಯೇ ಅತ್ಯಂತ ತರಾತುರಿಯಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲು ಹೊರಟಿದೆ ಎಂದು ಗೌಡರು ಗಂಭೀರ ಆರೋಪ ಮಾಡಿದರು. ಸರ್ಕಾರದ ಮೇಲೆ ಯಾರದ್ದೇ ಒತ್ತಡಗಳಿದ್ದರೂ, ನಾವು ಮಾತ್ರ ಯಾವುದೇ ಕಾರಣಕ್ಕೂ ಬಡ ರೈತರ ಹಿತಾಸಕ್ತಿಯನ್ನು ಬಲಿಗೊಡಲು ಬಿಡುವುದಿಲ್ಲ. ಬಡವರ ಮತ್ತು ರೈತರ ಹಿತ ಕಾಯಲು ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದು ಮಾಜಿ ಪ್ರಧಾನಿಗಳು ದೃಢ ವಿಶ್ವಾಸ ವ್ಯಕ್ತಪಡಿಸಿದರು.

