ಬೆಂಗಳೂರು: ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬವಾದ ಚುನಾವಣಾ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಅರ್ಹ ಪ್ರಜೆಯೂ ಪಾಲ್ಗೊಳ್ಳುವುದನ್ನು ಖಚಿತಪಡಿಸಲು ಭಾರತ ಚುನಾವಣಾ ಆಯೋಗವು ಮಹತ್ವದ ಹೆಜ್ಜೆ ಇಟ್ಟಿದೆ. ಕರ್ನಾಟಕದ ಎಲ್ಲಾ ಜಿಲ್ಲೆ, ತಾಲ್ಲೂಕು ಹಾಗೂ ಗ್ರಾಮೀಣ ಭಾಗ ಒಳಗೊಂಡಂತೆ ಇಡೀ ರಾಜ್ಯಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR-2026) ಕಾರ್ಯಕ್ರಮದಡಿ ಗಣತಿ ನಮುಇನೆ ಸಲ್ಲಿಸುವ ದಿನಾಂಕವನ್ನು ವಿಸ್ತರಣೆ ಮಾಡಿ ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಈ ಪರಿಷ್ಕರಣೆಯ ಅಡಿಯಲ್ಲಿ, ಸಾರ್ವಜನಿಕರು ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು, ತಿದ್ದುಪಡಿ ಮಾಡಲು ಅಥವಾ ವರ್ಗಾವಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಭರ್ತಿ ಮಾಡಿದ ತಮ್ಮ ಗಣತಿ (Enumeration) ನಮೂನೆಗಳನ್ನು ತಮ್ಮ ತಮ್ಮ ವ್ಯಾಪ್ತಿಯ ಬೂತ್ ಮಟ್ಟದ ಅಧಿಕಾರಿಗಳಿಗೆ (BLO) ಸಲ್ಲಿಸಲು 2026ರ ಆಗಸ್ಟ್ 17 ರವರೆಗೆ ಅಂತಿಮ ಗಡುವನ್ನು ನೀಡಲಾಗಿದೆ.
ಹಕ್ಕು ಕಳೆದುಕೊಳ್ಳದಂತೆ ಆಯೋಗದ ಮನವಿ:
ರಾಜ್ಯದ ಪ್ರತಿಯೊಬ್ಬ ನಾಗರಿಕನೂ ತನ್ನ ಮತದಾನದ ಹಕ್ಕನ್ನು ಖಾತರಿಪಡಿಸಿಕೊಳ್ಳುವುದು ಅತ್ಯಂತ ಪ್ರಮುಖವಾಗಿದೆ. ನಗರ ಪ್ರದೇಶಗಳ ಅಪಾರ್ಟ್ಮೆಂಟ್ಗಳಿಂದ ಹಿಡಿದು ಗ್ರಾಮೀಣ ಭಾಗದ ಕಟ್ಟಕಡೆಯ ಹಳ್ಳಿಯವರೆಗಿನ ಎಲ್ಲಾ ಅರ್ಹ ಮತದಾರರು ಈ ಸದುಪಯೋಗವನ್ನು ಪಡೆದುಕೊಳ್ಳಬೇಕು. ನಿಗದಿತ ದಿನಾಂಕದ ನಂತರ ಬರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಆದ್ದರಿಂದ ಯಾವುದೇ ವಿಳಂಬಕ್ಕೆ ಆಸ್ಪದ ನೀಡದೆ, ನಿಗದಿಪಡಿಸಿದ ಸಮಯದ ಒಳಗಾಗಿ ಭರ್ತಿ ಮಾಡಿದ ನಮೂನೆಗಳನ್ನು ಆಯಾ ಬೂತ್ ಮಟ್ಟದ ಅಧಿಕಾರಿಗಳಿಗೆ (BLO) ತಲುಪಿಸಿ ಜವಾಬ್ದಾರಿಯುತ ಪ್ರಜೆಯಾಗಿ ಸಹಕರಿಸಬೇಕು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ಕೋರಿದೆ.

