Mon. Aug 10th, 2026

ಗಂಗೆಯಿಂದ ಬೆಂಗಳೂರಿನ ಗಂಗಾಧರನವರೆಗೆ: ಕಾವಡ್ ಯಾತ್ರೆ ಮುಗಿಸಿ ಗವಿ ಗಂಗಾಧರೇಶ್ವರನಿಗೆ ಅಭಿಷೇಕ ಮಾಡಿದ ತೇಜಸ್ವಿ ಸೂರ್ಯ

Share this with Friends

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಭಾರತೀಯ ಜನತಾ ಯುವ ಮೋರ್ಚಾದ (BJYM) ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಅವರು ಉತ್ತರ ಭಾರತದ ಪವಿತ್ರ ಕಾವಡ್ ಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಹರಿದ್ವಾರದಿಂದ ಭಕ್ತಿಯಿಂದ ಹೊತ್ತು ತಂದ ಪವಿತ್ರ ಗಂಗಾಜಲವನ್ನು ಬೆಂಗಳೂರಿಗೆ ತಂದು, ಬಸವನಗುಡಿಯ ಐತಿಹಾಸಿಕ ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ಶಿವನಿಗೆ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಹರಿದ್ವಾರದ ಪ್ರಸಿದ್ಧ ‘ಹರ್ ಕಿ ಪೌರಿ’ ಘಾಟ್‌ನಲ್ಲಿ ಪುಣ್ಯಸ್ನಾನ ಮಾಡುವ ಮೂಲಕ ಯಾತ್ರೆ ಆರಂಭಿಸಿದ ಸಂಸದರು, ನೂರಾರು ಯುವ ಭಕ್ತರೊಂದಿಗೆ ಹೆಗಲ ಮೇಲೆ ಕಾವಡ್ ಹೊತ್ತು ಋಷಿಕೇಶದ ವೀರಭದ್ರ ಮಹಾದೇವ ದೇವಾಲಯದವರೆಗೆ ಸುಮಾರು 26 ಕಿಲೋಮೀಟರ್ ದೂರ ಪಾದಯಾತ್ರೆ ನಡೆಸಿದರು. ಈ ಬಾರಿಯ ಯಾತ್ರೆಯನ್ನು ಕೇವಲ ಧಾರ್ಮಿಕ ಆಚರಣೆಯಷ್ಟೇ ಅಲ್ಲದೆ ಸಾಧನೆ (ಆತ್ಮ ಶಿಸ್ತು), ಸೇವೆ, ಸಮರಸತೆ (ಸಾಮಾಜಿಕ ಸಾಮರಸ್ಯ) ಹಾಗೂ ಸ್ವಚ್ಛತೆ ಎಂಬ ಚತುರ್ಸೂತ್ರಗಳ ಆಧಾರದ ಮೇಲೆ ಹಮ್ಮಿಕೊಳ್ಳಲಾಗಿತ್ತು. ಮಾರ್ಗದುದ್ದಕ್ಕೂ ಭಕ್ತರಿಗೆ ಹಣ್ಣುಗಳನ್ನು ವಿತರಿಸಲಾಯಿತು, ಬಿಲ್ವಪತ್ರೆ ಸಸಿಗಳನ್ನು ನೆಡಲಾಯಿತು ಹಾಗೂ ಸ್ಥಳೀಯ ಸಮುದಾಯದೊಂದಿಗೆ ಸಂವಾದ ನಡೆಸಲಾಯಿತು. ಈ ಯಾತ್ರೆಯುದ್ದಕ್ಕೂ ಧಾರ್ಮಿಕ ಆಚರಣೆಯೊಂದಿಗೆ ‘ಸ್ವಚ್ಛತೆ’ಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ಸಂಸದರ ನೇತೃತ್ವದಲ್ಲಿ ಯುವ ಭಕ್ತರ ತಂಡವು ಕಾವಡ್ ಮಾರ್ಗದುದ್ದಕ್ಕೂ ವಿಶೇಷ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಪವಿತ್ರ ಯಾತ್ರಾ ಮಾರ್ಗಗಳನ್ನು ಸದಾ ಸ್ವಚ್ಛವಾಗಿಟ್ಟುಕೊಳ್ಳುವಂತೆ ಸಹ-ಯಾತ್ರಿಕರಲ್ಲಿ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದು ವಿಶೇಷವಾಗಿತ್ತು.

ತಮ್ಮ ಈ ವಿಶಿಷ್ಟ ಆಧ್ಯಾತ್ಮಿಕ ಅನುಭವವನ್ನು ಹಂಚಿಕೊಂಡ ಸಂಸದ ತೇಜಸ್ವಿ ಸೂರ್ಯ, “ಕಾವಡ್ ಯಾತ್ರೆಯಲ್ಲಿ ಭಾಗವಹಿಸುವ ಬಹುತೇಕ ಭಕ್ತರು ಅತ್ಯಂತ ಸಾಮಾನ್ಯ ಆರ್ಥಿಕ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ಆದರೆ ಅವರಲ್ಲಿರುವ ಅಚಲವಾದ ಶಿವಭಕ್ತಿ, ಕಠಿಣ ಶಿಸ್ತು ಮತ್ತು ದೈಹಿಕ ಶ್ರಮ ವಹಿಸುವ ಅದ್ಭುತ ಸಾಮರ್ಥ್ಯ ನಿಜಕ್ಕೂ ನಮಗೆಲ್ಲ ಸ್ಫೂರ್ತಿದಾಯಕ. ಮಾರ್ಗದುದ್ದಕ್ಕೂ ಸ್ಥಳೀಯ ನಿವಾಸಿಗಳು ಯಾವುದೇ ಅಪೇಕ್ಷೆಯಿಲ್ಲದೆ ಯಾತ್ರಿಕರಿಗೆ ಉಚಿತವಾಗಿ ಆಹಾರ, ಶುದ್ಧ ನೀರು, ವೈದ್ಯಕೀಯ ನೆರವು ಹಾಗೂ ವಿಶ್ರಾಂತಿ ಪಡೆಯಲು ಆಶ್ರಯ ನೀಡಿ ಸೇವೆ ಸಲ್ಲಿಸಿದ್ದು ದೇಶದ ಸನಾತನ ಸೇವಾ ಮನೋಭಾವಕ್ಕೆ ಸಾಕ್ಷಿಯಾಗಿದೆ” ಎಂದು ಪ್ರಶಂಸಿಸಿದ್ದಾರೆ.

ಯಾತ್ರೆಯ ಸಾರಾಂಶವನ್ನು ವಿವರಿಸುತ್ತಾ ಸಂಸದ ಸೂರ್ಯ,ಜಗದ್ಗುರು ಬಸವಣ್ಣನವರ ಅಮರ ವಚನವನ್ನು ಇದೇ ಸಂದರ್ಭದಲ್ಲಿ ಅತ್ಯಂತ ಭಕ್ತಿಭಾವದಿಂದ ಸ್ಮರಿಸಿದ್ದಾರೆ. “ಉಳ್ಳವರು ಶಿವಾಲಯ ಮಾಡುವರು, ನಾನೇನ ಮಾಡುವೆ ಬಡವನಯ್ಯ? ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಸವಯ್ಯ. ಕೂಡಲಸಂಗಮದೇವಾ ಕೇಳಯ್ಯ, ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ” ಎಂಬ ವಚನವನ್ನು ಉಲ್ಲೇಖಿಸಿದ ಅವರು, ಈ ವಚನವು ಕಾವಡ್ ಯಾತ್ರೆಯ ನಿಜವಾದ ಆತ್ಮ ಮತ್ತು ತತ್ವವನ್ನು ಪ್ರತಿಬಿಂಬಿಸುತ್ತದೆ ಎಂದು ಬಣ್ಣಿಸಿದರು. ಕಾವಡ್ ಹೊತ್ತು ಸಾಗುವ ಸಾಮಾನ್ಯ ಭಕ್ತರು ಯಾವುದೇ ಆಡಂಬರಗಳಿಲ್ಲದೆ, ಕೇವಲ ತಮ್ಮದೇ ಆದ ದೈಹಿಕ ಶ್ರಮ, ಕಠಿಣ ಆತ್ಮ ಶಿಸ್ತು ಹಾಗೂ ನಿಷ್ಕಲ್ಮಶ ಭಕ್ತಿಯನ್ನೇ ಶಿವನಿಗೆ ಅರ್ಪಿಸುತ್ತಾರೆ. ಈ ಮೂಲಕ ತಮ್ಮ ದೇಹವನ್ನೇ ದೇವಸ್ಥಾನವಾಗಿಸಿಕೊಂಡು ಸಾಗುವ ಈ ಯಾತ್ರಿಕರ ಭಕ್ತಿ ಅಪ್ರತಿಮವಾದದ್ದು ಎಂದು ಅವರು ಅಭಿಪ್ರಾಯಪಟ್ಟರು.

ಋಷಿಕೇಶದ ವೀರಭದ್ರ ದೇವಾಲಯದಲ್ಲಿ ಮಹಾದೇವನಿಗೆ ಪವಿತ್ರ ಗಂಗಾಜಲವನ್ನು ಅರ್ಪಿಸಿದ ನಂತರ, ಬೆಂಗಳೂರಿನ ಬಸವನಗುಡಿಯ ಐತಿಹಾಸಿಕ ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ಅಂತಿಮವಾಗಿ ಗಂಗಾಜಲ ಅಭಿಷೇಕ ನೆರವೇರಿಸುವ ಮೂಲಕ ಯಾತ್ರೆಯು ಪೂರ್ಣಗೊಂಡಿತು. ಈ ಮೂಲಕ “ಹರಿದ್ವಾರದ ಪುಣ್ಯ ಗಂಗೆಯಿಂದ ಹಿಡಿದು ನಮ್ಮ ಬೆಂಗಳೂರಿನ ಗಂಗಾಧರನ ಪಾದದವರೆಗೆ ಈ ಪವಿತ್ರ ಯಾತ್ರೆಯು ಒಂದು ಸಂಪೂರ್ಣ ವೃತ್ತವನ್ನು ಪೂರ್ಣಗೊಳಿಸಿದೆ” ಎಂದು ಸಂಸದ ತೇಜಸ್ವಿ ಸೂರ್ಯ  ಹರ್ಷ ವ್ಯಕ್ತಪಡಿಸಿದ್ದಾರೆ.

 


Share this with Friends

Related Post