Sat. Jun 6th, 2026

ಹೀಟ್ ಸ್ಟ್ರೋಕ್ ತಡೆಗೆ ಆರೋಗ್ಯ ಇಲಾಖೆ ಸನ್ನದ್ಧ:ಸಚಿವ ದಿನೇಶ್ ಗುಂಡೂರಾವ್

Share this with Friends

ಬೆಂಗಳೂರು: ರಾಜ್ಯಾದ್ಯಂತ ತಾಪಮಾನ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಿಸಿಲಿನ ಧಗೆ ಹಾಗೂ ಹೀಟ್ ಸ್ಟ್ರೋಕ್ (ಉಷ್ಣಾಘಾತ) ಎದುರಿಸಲು ಆರೋಗ್ಯ ಇಲಾಖೆ ಸಂಪೂರ್ಣ ಸಜ್ಜಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ರಾಜ್ಯದಲ್ಲಿ ಸುಡುತ್ತಿರುವ ಬಿಸಿಲ ಬೇಗೆಯಿಂದ ಜನಸಾಮಾನ್ಯರನ್ನು ರಕ್ಷಿಸಲು ಮತ್ತು ಉಷ್ಣಾಘಾತಕ್ಕೆ (Heat Stroke) ತುತ್ತಾಗುವವರಿಗೆ ತುರ್ತು ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ಸಮರೋಪಾದಿಯಲ್ಲಿ ಸಿದ್ಧತೆ ನಡೆಸಿದೆ ಎಂದರು ಜತೆಗೆ ರಾಜ್ಯದ ಆರೋಗ್ಯ ವ್ಯವಸ್ಥೆಯಲ್ಲಿ ಕೈಗೊಂಡಿರುವ ಪ್ರಮುಖ ಬದಲಾವಣೆಗಳ ಬಗ್ಗೆ ವಿವರಿಸಿದರು.

ಆಸ್ಪತ್ರೆಗಳಲ್ಲಿ ವಿಶೇಷ ಸೌಲಭ್ಯ:

ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಜುಲೈ 31, 2026ರವರೆಗೆ ಅನ್ವಯವಾಗುವಂತೆ ವಿಶೇಷ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಜಿಲ್ಲಾ ಆಸ್ಪತ್ರೆಗಳಲ್ಲಿ ತಲಾ 10 ಹಾಸಿಗೆಗಳು, ತಾಲೂಕು ಆಸ್ಪತ್ರೆಗಳಲ್ಲಿ 5 ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ (CHC) ತಲಾ 2 ಹಾಸಿಗೆಗಳನ್ನು ಕೇವಲ ಹೀಟ್ ಸ್ಟ್ರೋಕ್ ಪೀಡಿತರಿಗಾಗಿ ಮೀಸಲಿಡಲಾಗಿದೆ. ಈ ಕೊಠಡಿಗಳಲ್ಲಿ ಫ್ಯಾನ್, ಕೂಲರ್, ಐಸ್ ಪ್ಯಾಕ್ ಹಾಗೂ ಅಗತ್ಯವಾದ ವೈದ್ಯಕೀಯ ಉಪಕರಣಗಳ ಲಭ್ಯತೆಯನ್ನು ಕಡ್ಡಾಯಗೊಳಿಸಲಾಗಿದೆ.

ಜಾಗೃತಿ ಮತ್ತು ಮುನ್ನೆಚ್ಚರಿಕೆ:

ನಿರ್ಜಲೀಕರಣ (Dehydration) ತಡೆಗಟ್ಟಲು ಆಸ್ಪತ್ರೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ‘ORS ಕಾರ್ನರ್’ಗಳನ್ನು ತೆರೆಯಲಾಗಿದೆ. ಬಿಸಿಲ ಗಾಳಿಯಿಂದ ಹಾನಿಗೊಳಗಾದವರಿಗೆ ಚಿಕಿತ್ಸೆ ನೀಡಲು ವೈದ್ಯಕೀಯ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಪ್ರತಿದಿನ ದಾಖಲಾಗುವ ಉಷ್ಣಾಘಾತ ಪ್ರಕರಣಗಳನ್ನು ‘ಇಂಟಿಗ್ರೇಟೆಡ್ ಹೆಲ್ತ್ ಇನ್ಫರ್ಮೇಷನ್ ಪ್ಲಾಟ್‌ಫಾರ್ಮ್’ (IHIP) ಮೂಲಕ ಮೇಲ್ವಿಚಾರಣೆ ಮಾಡಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಸಾರ್ವಜನಿಕರಿಗೆ ಸಲಹೆಗಳು:

ಬಿಸಿಲಿನ ತಾಪ ತೀವ್ರವಾಗಿರುವ ಮಧ್ಯಾಹ್ನ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಜನರು ಮನೆಯಿಂದ ಹೊರಬರದಂತೆ ಸಚಿವರು ಮನವಿ ಮಾಡಿದ್ದಾರೆ. ದ್ರವಾಹಾರ ಸೇವನೆ ಹೆಚ್ಚಿಸುವುದು, ಸಡಿಲವಾದ ಹತ್ತಿ ಬಟ್ಟೆ ಧರಿಸುವುದು ಮತ್ತು ತಲೆಗೆ ಟೋಪಿ ಅಥವಾ ಛತ್ರಿ ಬಳಸುವುದು ಅನಿವಾರ್ಯವಾಗಿದೆ. ಆರೋಗ್ಯದಲ್ಲಿ ಏರುಪೇರಾದಲ್ಲಿ ಕೂಡಲೇ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡುವಂತೆ ಅವರು ತಿಳಿಸಿದ್ದಾರೆ.

 


Share this with Friends

Related Post