ಬೆಂಗಳೂರು: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಮತ ಭುಗಿಲೆದ್ದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಅವರ ರಾಜೀನಾಮೆಗೆ ಹೈಕಮಾಂಡ್ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ನಡೆದ ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಚಟುವಟಿಕೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಇವರ ಮೇಲೆ ಕೇಳಿಬಂದಿದೆ. ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ತಾ ಅವರು ಸಲ್ಲಿಸಿದ ಆಂತರಿಕ ವರದಿಯಲ್ಲಿ, ನಸೀರ್ ಅಹ್ಮದ್ ಅವರು ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವ ಬದಲಿಗೆ ಪರೋಕ್ಷವಾಗಿ ಎಸ್‌ಡಿಪಿಐ (SDPI) ಅಭ್ಯರ್ಥಿಗೆ ಸಾಥ್ ನೀಡಿದ್ದಾರೆ ಎಂಬ ಅಂಶ ಉಲ್ಲೇಖವಾಗಿದೆ ಎಂದು ಮೂಲಗಳು ತಿಳಿಸಿವೆ.
ಪಕ್ಷ ವಿರೋಧಿ ಚಟುವಟಿಕೆ: ಉಪಚುನಾವಣೆ ವೇಳೆ ಕಾಂಗ್ರೆಸ್‌ನ ಅಲ್ಪಸಂಖ್ಯಾತ ನಾಯಕರ ಒಂದು ಬಣವು ಪಕ್ಷದ ಅಭ್ಯರ್ಥಿಯ ಸೋಲಿಗೆ ಸಂಚು ರೂಪಿಸಿದೆ ಎಂಬ ದೂರು ಹೈಕಮಾಂಡ್ ತಲುಪಿದೆ.
ಜಬ್ದಾರ್ ರಾಜೀನಾಮೆ: ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೆ. ಅಬ್ದುಲ್ ಜಬ್ಬಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಅದನ್ನು ಅಂಗೀಕರಿಸಿದ್ದಾರೆ.
ಜಮೀರ್‌ಗೆ ಸಂಕಷ್ಟ: ನಸೀರ್ ಅಹ್ಮದ್ ಮಾತ್ರವಲ್ಲದೆ, ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಅವರ ವಿರುದ್ಧವೂ ಶಿಸ್ತು ಕ್ರಮ ಜರುಗಿಸುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ:
ನಸೀರ್ ಅಹ್ಮದ್ ಅವರು ಸಿದ್ದರಾಮಯ್ಯ ಅವರಿಗೆ ಅತ್ಯಂತ ಆಪ್ತರಾಗಿದ್ದು, ಹೈಕಮಾಂಡ್‌ನ ಈ ಹಠಾತ್ ಆದೇಶದಿಂದ ಸಿಎಂ ಬಣಕ್ಕೆ ಹಿನ್ನಡೆಯಾದಂತಾಗಿದೆ. ಪಕ್ಷದ ಶಿಸ್ತಿಗೆ ಧಕ್ಕೆಯಾಗಬಾರದು ಎಂಬ ದೃಷ್ಟಿಯಿಂದ ಹೈಕಮಾಂಡ್ ಈ ಕಠಿಣ ನಿರ್ಧಾರ ಕೈಗೊಂಡಿದೆ ಎನ್ನಲಾಗಿದ್ದು, ಸಿದ್ದರಾಮಯ್ಯ ಅವರು ಈ ಕುರಿತು ಶೀಘ್ರದಲ್ಲೇ ಅಧಿಕೃತ ಸ್ಪಷ್ಟನೆ ನೀಡುವ ನಿರೀಕ್ಷೆಯಿದೆ.
ಮುಂದಿನ ದಿನಗಳಲ್ಲಿ ಈ ಬೆಳವಣಿಗೆಯು ರಾಜ್ಯ ರಾಜಕಾರಣದಲ್ಲಿ ಯಾವ ತಿರುವು ಪಡೆಯಲಿದೆ ಎಂಬುದು ಕುತೂಹಲಕಾರಿಯಾಗಿದೆ.

