ಬೆಂಗಳೂರು:ಲೋಕಭವನದ ಗಾಜಿನ ಮನೆಯಲ್ಲಿ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಹಾಗೂ ಉಪಮುಖ್ಯಮಂತ್ರಿಯಾಗಿ ಡಾ. ಜಿ. ಪರಮೇಶ್ವರ್ ಅವರೊಂದಿಗೆ 12 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದು, ಡಿಕೆ ಶಿವಕುಮಾರ್ ಅವರ ಸಂಪುಟ ಅಸ್ತಿತ್ವಕ್ಕೆ ಬಂದಿದೆ.
ಬೆಂಗಳೂರಿನ ಲೋಕಭವನದ ಗಾಜಿನ ಮನೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಅತ್ಯಂತ ಭವ್ಯ ಹಾಗೂ ವ್ಯವಸ್ಥಿತ ಸಮಾರಂಭದಲ್ಲಿ, ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರಕ್ಕಾಗಿ ವಿಶೇಷವಾಗಿ ಪೂರ್ವಾಭಿಮುಖವಾಗಿ ಸಿದ್ಧಪಡಿಸಲಾಗಿದ್ದ ವೇದಿಕೆಯಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ನೂತನ ಮುಖ್ಯಮಂತ್ರಿಗಳಿಗೆ ಅಧಿಕಾರಪದ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಡಿ.ಕೆ. ಶಿವಕುಮಾರ್ ಅವರು ತಮ್ಮ ಆರಾಧ್ಯ ದೈವ ವೀರ ಗಂಗಾಧರ ಅಜ್ಜಯ್ಯನವರ ಹೆಸರಿನಲ್ಲಿ ಭಕ್ತಿಪೂರ್ವಕವಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಇದೇ ಮಹತ್ವದ ಸಂದರ್ಭದಲ್ಲಿ ಹಿರಿಯ ನಾಯಕ ಡಾ. ಜಿ. ಪರಮೇಶ್ವರ್ ಅವರು ರಾಜ್ಯದ ನೂತನ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಅವರು ಭಾರತ ಸಂವಿಧಾನದ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರಿನಲ್ಲಿ ಪ್ರತಿಜ್ಞಾವಿಧಿ ಪಡೆದರು. ಇವರ ಬೆನ್ನಲ್ಲೇ ಮೊದಲ ಹಂತದ ವಿಸ್ತರಣೆಯ ಭಾಗವಾಗಿ ಒಟ್ಟು 12 ಜನ ಹಿರಿಯ ಹಾಗೂ ಯುವ ನಾಯಕರು ಸಂಪುಟ ದರ್ಜೆಯ ಸಚಿವರುಗಳಾಗಿ ರಾಜ್ಯಪಾಲರಿಂದ ಅಧಿಕಾರಪದ ಮತ್ತು ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸುವ ಮೂಲಕ ರಾಜ್ಯದಲ್ಲಿ ನೂತನ ಮಂತ್ರಿಮಂಡಲ ಅಸ್ತಿತ್ವಕ್ಕೆ ಬಂದಿತು.
ಸಂಪುಟ ಸೇರಿದ ನೂತನ ಸಚಿವರುಗಳು ತಾವು ನಂಬಿದ ದೈವ ಮತ್ತು ತತ್ವಜ್ಞಾನಿಗಳ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ವಿಶೇಷವಾಗಿತ್ತು. ಹಿರಿಯ ನಾಯಕರಾದ ಕೆ.ಎಚ್. ಮುನಿಯಪ್ಪ ಮತ್ತು ಕೆ.ಜೆ. ಜಾರ್ಜ್ ಅವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ, ಎಂ.ಬಿ. ಪಾಟೀಲ್ ಅವರು ವಿಶ್ವಗುರು ಅಣ್ಣ ಬಸವಣ್ಣ, ಬಸವಾದಿ ಶರಣರು ಹಾಗೂ ವಿಶ್ವೈಕ್ಯ ಸಿದ್ದೇಶ್ವರ ಮಹಾಸ್ವಾಮೀಜಿಯವರ ಹೆಸರಿನಲ್ಲಿ ಪ್ರತಿಜ್ಞೆ ಮಾಡಿದರು. ಇನ್ನುಳಿದಂತೆ ರಾಮಲಿಂಗಾರೆಡ್ಡಿ, ಸತೀಶ್ ಜಾರಕಿಹೊಳಿ, ಕೃಷ್ಣ ಬೈರೇಗೌಡ ಮತ್ತು ಪ್ರಿಯಾಂಕ್ ಖರ್ಗೆ ಅವರು ಅತ್ಯಂತ ಶ್ರದ್ಧಾಪೂರ್ವಕವಾಗಿ (ದೃಢೀಕರಣ) ಪ್ರಮಾಣ ವಚನ ಸ್ವೀಕರಿಸಿದರು.
ಕರಾವಳಿ ಭಾಗದ ನಾಯಕ ಯು.ಟಿ. ಖಾದರ್ ಅವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ, ಹಿರಿಯ ನಾಯಕ ಈಶ್ವರ್ ಖಂಡ್ರೆ ಅವರು ದೇವರು ಮತ್ತು ಲಿಂಗೈಕ್ಯ ಚೆನ್ನಬಸವಯ್ಯ ಪಟ್ಟದೇವರ ಹೆಸರಿನಲ್ಲಿ ಪ್ರತಿಜ್ಞಾವಿಧಿ ಪಡೆದರು. ಮೈಸೂರು ಭಾಗದ ಯುವ ನಾಯಕ ಯತೀಂದ್ರ ಸಿದ್ದರಾಮಯ್ಯ ಅವರು ಭಾರತದ ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ವಿಶೇಷವಾಗಿ ಗಮನ ಸೆಳೆಯಿತು. ಬೆಂಗಳೂರಿನ ಬೈರತಿ ಸುರೇಶ್ ಹಾಗೂ ಕಲ್ಯಾಣ ಕರ್ನಾಟಕದ ಶರಣಪ್ರಕಾಶ್ ಪಾಟೀಲ್ ಅವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ನೂತನ ಸಚಿವ ಸಂಪುಟದ ಸದಸ್ಯರಾಗಿ ಅಧಿಕೃತವಾಗಿ ಜವಾಬ್ದಾರಿ ವಹಿಸಿಕೊಂಡರು.
ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯದ ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ವಿಭು ಬಖ್ರು, ಎ.ಐ.ಸಿ.ಸಿ ಅಧ್ಯಕ್ಷರು ಹಾಗೂ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಲೋಕಸಭಾ ವಿರೋಧ ಪಕ್ಷ ನಾಯಕರಾದ ರಾಹುಲ್ ಗಾಂಧಿ, ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಡಾ.ಸುಖವೀಂದರ್ ಸಿಂಗ್ ಸುಖು, ತೆಲಂಗಾಣ ರಾಜ್ಯದ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಕೇರಳಂ ರಾಜ್ಯದ ಮುಖ್ಯಮಂತ್ರಿ ವಿ.ಟಿ.ಸತೀಶನ್, ಎ.ಐ.ಸಿ.ಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ ವೇಣುಗೋಪಾಲ್, ಲೋಕಸಭಾ ಸದಸ್ಯರಾದ ರಣದೀಪ್ ಸಿಂಗ್ ಸುರ್ಜೆವಾಲ, ವಿಧಾನ ಪರಿಷತ್ತಿನ ಸಭಾಪತಿಯಾದ ಬಸವರಾಜ ಎಸ್ ಹೊರಟ್ಟಿ, ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಾಧೀಶರು, ವಿವಿಧ ರಾಜ್ಯಗಳ ಉಪಮುಖ್ಯಮಂತ್ರಿಗಳು, ಪ್ರದೇಶ ಕಾಂಗ್ರೆಸ್ ಅಧ್ಯಕ್ಷರುಗಳು, ಸಂಸದರು, ಶಾಸಕರು, ಸರ್ವಧರ್ಮ ಗುರುಗಳು, ಕನಕಪುರ ದೊಡ್ಡಾಲಹಳ್ಳಿ ಸರಕಾರಿ ಶಾಲೆ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು
ಪೌರ ಕಾರ್ಮಿಕರು, ರೈತ ಮುಖಂಡರು, ದಲಿತ ಸಂಘಟನೆ ಮುಖಂಡರು, ಹಿಂದುಳಿದ ವರ್ಗಗಳ ಮುಖಂಡರು, ಸ್ತ್ರೀ ಶಕ್ತಿ ಸಂಘಗಳ ಪ್ರತಿನಿಧಿಗಳು, ಮಹಿಳಾ ಮುಖಂಡರು, ವಿವಿಧ ಮಾಧ್ಯಮ ಕ್ಷೇತ್ರದ ಗಣ್ಯರು, ಸಿನಿಮಾ ರಂಗದವರು, ನ್ಯಾಯಾಂಗ ಇಲಾಖೆಯ ಅಧಿಕಾರಿಗಳು, ಕ್ರೀಡಾ ಕ್ಷೇತ್ರದ ಪಟುಗಳು, ನಾಟಕ ರಂಗದ ಕಲಾವಿದರು, ಸಾಹಿತಿಗಳು, ಕಲಾವಿದರು, ಕೈಗಾರಿಕೋದ್ಯಮಿಗಳು, ವಾಣಿಜ್ಯೋದ್ಯಮಿಗಳು, ಹೋಟೆಲ್ ಉದ್ಯಮಿಗಳು, ಯುವ ಮುಖಂಡರು, ಕನ್ನಡ ಪರ ಸಂಘಟನೆಯ ಮುಖಂಡರು ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು, ಕಾರ್ಯಕರ್ತರು,ಮತ್ತಿತರರು ಉಪಸ್ಥಿತರಿದ್ದರು.
ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

