ಬೆಂಗಳೂರು: ಖಾಸಗಿ ವೃತ್ತಿಪರ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಸರ್ಕಾರ ನಿಗದಿಪಡಿಸಿದ ಮೊತ್ತಕ್ಕಿಂತ ಹೆಚ್ಚಿನ ಶುಲ್ಕಕ್ಕೆ ಬೇಡಿಕೆ ಇಟ್ಟರೆ, ಅಂತಹ ಸಂಸ್ಥೆಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ ದೂರು ದಾಖಲಿಸಬಹುದು ಎಂದು ಪ್ರವೇಶ ಮತ್ತು ಶುಲ್ಕ ನಿಯಂತ್ರಣ ಸಮಿತಿಯ ಅಧ್ಯಕ್ಷರಾದ ನ್ಯಾಯಮೂರ್ತಿ ಬಿ. ಶ್ರೀನಿವಾಸಗೌಡ ಅವರು ವಿದ್ಯಾರ್ಥಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಮೂಲಕ ಅನುದಾನಿತ, ಅನುದಾನ ರಹಿತ ಹಾಗೂ ಅಲ್ಪಸಂಖ್ಯಾತ ಸಂಸ್ಥೆಗಳ ಸರ್ಕಾರಿ ಕೋಟಾದ ಸೀಟುಗಳಿಗೆ ಪ್ರವೇಶ ಪಡೆಯುವ ಸಂದರ್ಭದಲ್ಲಿ ಈ ನಿಯಮ ಅನ್ವಯವಾಗಲಿದೆ.
ದೂರು ಸಲ್ಲಿಸುವುದು ಹೇಗೆ? ಎಲ್ಲಿಗೆ ನೀಡಬೇಕು?
ಹೆಚ್ಚುವರಿ ಶುಲ್ಕ ವಸೂಲಿ ಮಾಡುವ ಶಿಕ್ಷಣ ಸಂಸ್ಥೆಗಳಿಂದ ತೊಂದರೆಗೆ ಒಳಗಾದ ವಿದ್ಯಾರ್ಥಿಗಳು ಮತ್ತು ಪೋಷಕರು ಸಮಿತಿಯ ಕಚೇರಿಗೆ ನೇರವಾಗಿ ದೂರು ನೀಡಲು ಅವಕಾಶ ಕಲ್ಪಿಸಲಾಗಿದೆ:
ಕಚೇರಿ ವಿಳಾಸ: ಶುಲ್ಕ ನಿಯಂತ್ರಣ ಸಮಿತಿ ಕಚೇರಿ, ನೆಲಮಹಡಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಕಟ್ಟಡ, 18ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು.
ಯಾರೆಲ್ಲಾ ದೂರು ನೀಡಬಹುದು: ಪ್ರಸಕ್ತ ಸಾಲಿನಲ್ಲಿ ಹೊಸದಾಗಿ ವೃತ್ತಿಪರ ಕೋರ್ಸ್‌ಗಳಿಗೆ ದಾಖಲಾತಿ ಬಯಸುವವರು ಮಾತ್ರವಲ್ಲದೆ, ಈಗಾಗಲೇ ಕಾಲೇಜು ಸೇರಿ ನಿಯಮಬಾಹಿರ ಶುಲ್ಕದ ಕಿರುಕುಳ ಅನುಭವಿಸುತ್ತಿರುವ ಹಳೆಯ ವಿದ್ಯಾರ್ಥಿಗಳು ಕೂಡ ಅಧಿಕೃತವಾಗಿ ದೂರನ್ನು ದಾಖಲಿಸಬಹುದು.
ಸರ್ಕಾರಿ ಕೋಟಾದ ಸೀಟುಗಳಿಗೆ ನಿಗದಿಪಡಿಸಿರುವ ಅಧಿಕೃತ ಬೋಧನಾ ಶುಲ್ಕ ಹಾಗೂ ಇತರೇ ಕಡ್ಡಾಯ ಶುಲ್ಕಗಳನ್ನು ಹೊರತುಪಡಿಸಿ, ಡೊನೇಶನ್ ಅಥವಾ ಇತರೆ ಯಾವುದೇ ಹೆಸರಿನಲ್ಲಿ ಹೆಚ್ಚುವರಿ ಹಣ ಪೀಕುವಂತಿಲ್ಲ ಎಂದು ಸಮಿತಿ ಖಡಕ್ ಎಚ್ಚರಿಕೆ ನೀಡಿದೆ.

