ಬೆಂಗಳೂರು:ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಎರಡ್ಮೂರು ದಿನಗಳ ಕಾಲ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಭಾರಿ ಮುಂಗಾರು ಪೂರ್ವ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಹಲವು ಭಾಗಗಳಲ್ಲಿ ವರುಣನ ಆರ್ಭಟ ಜೋರಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ವಿವಿಧ ಜಿಲ್ಲೆಗಳಿಗೆ ಆರೆಂಜ್ ಮತ್ತು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಮುಂದಿನ ಮೂರು ದಿನಗಳ ಕಾಲ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇರುವುದರಿಂದ ಆರೆಂಜ್ ಅಲರ್ಟ್ ಜಾರಿಗೊಳಿಸಲಾಗಿದೆ. ಅದೇ ರೀತಿ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಮಲೆನಾಡು ಮತ್ತು ಒಳನಾಡಿನ ಮೈಸೂರು, ಮಂಡ್ಯ, ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಬೆಳಗಾವಿ, ಧಾರವಾಡ, ಹಾವೇರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುವ ನಿರೀಕ್ಷೆ ಇದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಮಳೆ ಸುರಿಯುವ ಸಂದರ್ಭದಲ್ಲಿ ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ತಜ್ಞರು ಮುನ್ನೆಚ್ಚರಿಕೆ ನೀಡಿದ್ದಾರೆ. ತಗ್ಗು ಪ್ರದೇಶಗಳು ಹಾಗೂ ಅಂಡರ್‌ಪಾಸ್‌ಗಳಲ್ಲಿ ನೀರು ನಿಲ್ಲುವ ಸಾಧ್ಯತೆ ಇರುವುದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ಜಾಗ್ರತೆ ವಹಿಸಬೇಕು ಎಂದು ಸ್ಥಳೀಯ ಆಡಳಿತಗಳು ಸೂಚಿಸಿವೆ. ಗುಡುಗು-ಮಿಂಚಿನ ಸಮಯದಲ್ಲಿ ಸಾರ್ವಜನಿಕರು ಮರಗಳ ಕೆಳಗೆ ಅಥವಾ ವಿದ್ಯುತ್ ಕಂಬಗಳ ಬಳಿ ನಿಲ್ಲದಂತೆ ವಿಪತ್ತು ನಿರ್ವಹಣಾ ಪ್ರಾಧಿಕಾರ ಎಚ್ಚರಿಕೆ ನೀಡಿದೆ.

