Sat. Jun 6th, 2026

ಮೇ 25ರಿಂದ ‘ಸಿಇಟಿ ಸೀಟು ಹಂಚಿಕೆ ಮಂಥನ’: ಕೆಇಎ ವೆಬ್‌ಸೈಟ್‌ನಲ್ಲಿ ಸ್ಲಾಟ್ ಬುಕಿಂಗ್ ಕಡ್ಡಾಯ, ಸಂಪೂರ್ಣ ವಿವರ ಇಲ್ಲಿದೆ!

Share this with Friends

ಬೆಂಗಳೂರು: ಸಿಇಟಿ (CET) ಕೌನ್ಸೆಲಿಂಗ್ ಪ್ರಕ್ರಿಯೆ ಕುರಿತು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಜಾಗೃತಿ ಮೂಡಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಮಹತ್ವದ ಹೆಜ್ಜೆ ಇಟ್ಟಿದೆ. ರಾಜ್ಯದ 65 ಸರ್ಕಾರಿ ಎಂಜಿನಿಯರಿಂಗ್, ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಲ್ಲಿ ಮೇ 25ರಿಂದ 30ರವರೆಗೆ ವಿಶೇಷ ‘ಸಿಇಟಿ ಸೀಟು ಹಂಚಿಕೆ ಮಂಥನ’ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.

ಕಾರ್ಯಾಗಾರದ ವೇಳಾಪಟ್ಟಿ ಮತ್ತು ವಿವರ:

ಮೇ 28ರಂದು ಹೊರತುಪಡಿಸಿ, ಉಳಿದೆಲ್ಲ ದಿನಗಳಲ್ಲಿ ನಿತ್ಯ ಎರಡು ಸೆಷನ್‌ಗಳಲ್ಲಿ ಈ ಮಂಥನ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ.

ಮೊದಲ ಸೆಷನ್: ಬೆಳಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 12:00 ಗಂಟೆಯವರೆಗೆ.

ಎರಡನೇ ಸೆಷನ್: ಮಧ್ಯಾಹ್ನ 2:00 ಗಂಟೆಯಿಂದ ಸಂಜೆ 4:00 ಗಂಟೆಯವರೆಗೆ.
ಕೆಇಎಯಿಂದ ವಿಶೇಷ ತರಬೇತಿ ಪಡೆದಿರುವ ನುರಿತ ಸಂಪನ್ಮೂಲ ವ್ಯಕ್ತಿಗಳು ಪ್ರಾಯೋಗಿಕ ಪ್ರಾತ್ಯಕ್ಷಿಕೆ (Live Demonstration) ಮೂಲಕ ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾಹಿತಿ ನೀಡಲಿದ್ದಾರೆ.

ಸ್ಲಾಟ್ ಬುಕಿಂಗ್ ಕಡ್ಡಾಯ:

ಈ ಕಾರ್ಯಾಗಾರದಲ್ಲಿ ಭಾಗವಹಿಸಲು ಇಚ್ಛಿಸುವ ವಿದ್ಯಾರ್ಥಿಗಳು ಮತ್ತು ಪೋಷಕರು ಮುಂಚಿತವಾಗಿಯೇ ಕೆಇಎ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಸ್ಲಾಟ್ ಕಾಯ್ದಿರಿಸುವುದು ಕಡ್ಡಾಯವಾಗಿದೆ. ವೆಬ್‌ಸೈಟ್‌ನಲ್ಲಿ ಈಗಾಗಲೇ ಲಿಂಕ್ ಲಭ್ಯವಿದ್ದು, ವಿದ್ಯಾರ್ಥಿಗಳು ತಮಗೆ ಅನುಕೂಲಕರವಾದ ಸಮಯ ಹಾಗೂ ಹತ್ತಿರದ ಕಾಲೇಜನ್ನು ಆಯ್ಕೆ ಮಾಡಿಕೊಂಡು ಸ್ಲಾಟ್ ಬುಕ್ ಮಾಡಬಹುದು.

ಕಳೆದ ಬಾರಿಯ ತಪ್ಪುಗಳಿಗೆ ಬ್ರೇಕ್:

“ಅನೇಕ ಬಾರಿ ವಿದ್ಯಾರ್ಥಿಗಳಿಗೆ ಉತ್ತಮ ರ‍್ಯಾಂಕಿಂಗ್ ಬಂದಿದ್ದರೂ, ಆಪ್ಷನ್ ಎಂಟ್ರಿ (Options Entry) ಮಾಡುವಾಗ ಸೈಬರ್ ಸೆಂಟರ್‌ನವರು ಮಾಡುವ ಎಡವಟ್ಟುಗಳು ಅಥವಾ ಮಾಹಿತಿ ಕೊರತೆಯಿಂದಾಗಿ ಇಷ್ಟದ ಕಾಲೇಜು ಕೈತಪ್ಪಿ ಹೋಗುತ್ತಿತ್ತು. ಈ ಸಮಸ್ಯೆಯನ್ನು ತಡೆಗಟ್ಟಲು ಕಳೆದ ವರ್ಷ ಆರಂಭಿಸಲಾದ ‘ಮಂಥನ’ ಕಾರ್ಯಕ್ರಮಕ್ಕೆ ಭಾರಿ ಜನಪ್ರಿಯತೆ ಸಿಕ್ಕಿತ್ತು. ಹೀಗಾಗಿ ಈ ಬಾರಿಯೂ ಮತ್ತಷ್ಟು ಅಚ್ಚುಕಟ್ಟಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ” ಎಂದು ಹೆಚ್. ಪ್ರಸನ್ನ ವಿವರಿಸಿದ್ದಾರೆ.

ಕಾರ್ಯಾಗಾರದಲ್ಲಿ ಏನೆಲ್ಲಾ ಮಾಹಿತಿ ಸಿಗಲಿದೆ?

ಸೀಟು ಹಂಚಿಕೆ ಪ್ರಕ್ರಿಯೆ (Seat Allotment Process) ಹೇಗೆ ನಡೆಯುತ್ತದೆ?

ಆನ್‌ಲೈನ್‌ನಲ್ಲಿ ಕಾಲೇಜುಗಳ ಆಪ್ಷನ್ಸ್ ದಾಖಲಿಸುವುದು ಹೇಗೆ?

ಸೀಟು ಹಂಚಿಕೆಯಾದ ಬಳಿಕ ಛಾಯ್ಸ್ (Choice 1, 2, 3, 4) ಆಯ್ಕೆ ಮಾಡುವುದು ಹೇಗೆ?

ಇನ್ನೂ ಉತ್ತಮ ಕಾಲೇಜಿನ ಸೀಟು ನಿರೀಕ್ಷೆಯಲ್ಲಿದ್ದರೆ ಮುಂದಿನ ಹಂತವೇನು?

ಕೌನ್ಸೆಲಿಂಗ್ ಶುಲ್ಕ ಪಾವತಿಸುವ ವಿಧಾನ ಹೇಗೆ?

 

 


Share this with Friends

Related Post