ಬೆಂಗಳೂರು:ಕರ್ನಾಟಕ ಪೊಲೀಸ್ ಇಲಾಖೆಯ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (ಸಿಪಿಸಿ) ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆಯ ಓಎಂಆರ್ (OMR) ಶೀಟ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ವದಂತಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅಧಿಕೃತ ಸ್ಪಷ್ಟನೆ ನೀಡಿದೆ. ಭಾನುವಾರ (ಆಗಸ್ಟ್ 2) ರಾಜ್ಯಾದ್ಯಂತ ಅತ್ಯಂತ ಪಾರದರ್ಶಕವಾಗಿ ಪರೀಕ್ಷೆ ನಡೆದಿದೆ ಎಂದು ಪ್ರಾಧಿಕಾರ ತಿಳಿಸಿದೆ.
ಗೊಂದಲ ಏನಿತ್ತು?:
ಪರೀಕ್ಷೆ ನಡೆಯುತ್ತಿದ್ದ ಸಮಯದಲ್ಲಿ ವಿತರಿಸಲಾಗಿದ್ದ ಓಎಂಆರ್ ಶೀಟ್ ಮತ್ತು ಪ್ರಶ್ನೆ ಪತ್ರಿಕೆಯ ಕ್ರಮಸಂಖ್ಯೆಗಳು (Serial Numbers) ಒಂದೇ ಆಗಿಲ್ಲ ಎಂದು ಕೆಲವು ಅಭ್ಯರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಇದನ್ನೇ ಆಧಾರವಾಗಿಟ್ಟುಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡಿ, ಅಭ್ಯರ್ಥಿಗಳನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನ ನಡೆದಿತ್ತು.
ಪ್ರಾಧಿಕಾರದ ಸ್ಪಷ್ಟನೆ:
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರು, “ಪ್ರಾಧಿಕಾರವು ಯಾವುದೇ ಪ್ರಕಟಣೆ, ಸೂಚನೆ ಅಥವಾ ಮಾಧ್ಯಮಗಳ ಮೂಲಕ ಓಎಂಆರ್ ಮತ್ತು ಪ್ರಶ್ನೆಪತ್ರಿಕೆಯ ಕ್ರಮ ಸಂಖ್ಯೆಗಳು ಒಂದೇ ಇರಬೇಕು ಎಂದು ಎಲ್ಲಿಯೂ ಹೇಳಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
“ಓಎಂಆರ್ ಉತ್ತರ ಪತ್ರಿಕೆಯಲ್ಲಿ ಪ್ರಶ್ನೆ ಪತ್ರಿಕೆಯ ಕ್ರಮ ಸಂಖ್ಯೆ ಮತ್ತು ವರ್ಷನ್ ಕೋಡ್ (Version Code) ಅನ್ನು ಅಭ್ಯರ್ಥಿಗಳೇ ತುಂಬಲು ಪ್ರತ್ಯೇಕ ಅವಕಾಶ ಕಲ್ಪಿಸಲಾಗಿರುತ್ತದೆ. ಒಂದು ವೇಳೆ ಎರಡೂ ಸಂಖ್ಯೆಗಳು ಒಂದೇ ಇರಬೇಕಾಗಿದ್ದರೆ, ಓಎಂಆರ್‌ನಲ್ಲಿ ಅಭ್ಯರ್ಥಿಗಳು ಪ್ರಶ್ನೆಪತ್ರಿಕೆಯ ಕ್ರಮಸಂಖ್ಯೆಯನ್ನು ಪ್ರತ್ಯೇಕವಾಗಿ ಬರೆಯುವ ಅಗತ್ಯವೇ ಇರುತ್ತಿರಲಿಲ್ಲ” ಎಂದು ಪ್ರಾಧಿಕಾರ ವಿವರಿಸಿದೆ. ಹೀಗಾಗಿ ಅಭ್ಯರ್ಥಿಗಳು ಇಂತಹ ಅನಗತ್ಯ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು ಎಂದು ಕೆಇಎ ವಿನಂತಿಸಿದೆ.

